ಯತಿ ಸ್ವಂತೀ -247


04-09-2018
ಅದೇ ಮೊದಲು. ಆಮೇಲೆ ಬಹಳ ಸಲ ಏರೋಪ್ಲೇನಲ್ಲಿ ಹಾರಾಡಿದ್ದೇನೆ.
ಹೆಚ್ಚು ನೆನಪಿರುವುದನ್ನು ಮಾತ್ರ ಇಲ್ಲಿ ಹೇಳಬಲ್ಲೆ.
ಫೆಬ್ರವರಿ 1988ಕ್ಕೆ ನನ್ನ ಮನೆಯ ವಾಸ್ತವ್ಯವು ಜಯನಗರದಿಂದ ಬಸವನಗುಡಿಗೆ ಬದಲಾಯಿತು.
ಪತ್ನಿ, ಅಮ್ಮ, ಅಯ್ಯ, ಅಜ್ಜಿ ಜೊತೆಗೆ ನನ್ನ ಅಂಕಲ್ ಆಂಟಿ ಕೂಡ ಅಲ್ಲಿಗೆ ಬಂದೆವು.
ದೊಡ್ಡ ಮನೆ. ಎರಡೇ ರೂಮು. ಚಂದದ ಮನೆ ಎನ್ನಬೇಕು. ಬಾಡಿಗೆಗಲ್ಲ, ಸ್ವಂತದ ಮನೆ ಆಗಿದ್ದರೆ ಚೆನ್ನಿತ್ತು ಎನ್ನುವಂತಹ ಮನೆ ಅದು.
ಗೇಟಿನಿಂದ ಮನೆಯ ಬಾಗಿಲಿಗೆ ಸುಮಾರು ದೂರ. ಆ ಜಾಗದಲ್ಲಿಯೇ ನಡುವೆ ಒಂದು ಬೆಟ್ಟದ ನೆಲ್ಲಿಕಾಯಿ ಮರ. ಸ್ವಲ್ಪ ದೂರ ಹೋದರೆ ಮುಂಬಾಗಿಲು. ಅದರೆದುರಿಗೆ ಬೇವಿನಮರದ ಕಟ್ಟೆ. ಎಂತಹ ಸುಂದರ ಕಲ್ಪನೆ ಅದು! ಜಾಗವಿದ್ದರೆ ಇಂದಿಗೂ ಅದನ್ನು ನಮ್ಮ ಸ್ವಂತ ಮನೆಯಲ್ಲಿ ಮಾಡಿಸಿರುತ್ತಿದ್ದೆನೇನೋ!
ಸ್ವಚ್ಛ ಗಾಳಿ, ಆರೋಗ್ಯಕರ ವಾತಾವರಣ ಸೃಷ್ಟಿಸಬಲ್ಲದು ಬೇವಿನಮರ.
ಮನೆಯ ಆ ಕಡೆ ಅನೇಕ ಗುಲಾಬಿ ಗಿಡಗಳು. ನಮ್ಮ ಆಂಟಿ ಜಯನಗರದಲ್ಲಿಯೂ ಹಲವು ಬಗೆಯ ಗುಲಾಬಿಗಳನ್ನು ಬೆಳೆಸಿದ್ದರು. ಇಲ್ಲಿಯೂ ನೆಲದಲ್ಲೇ ಹಾಕಿಸಿದರು. ಅಲ್ಲಿಯೂ ಒಂದು ನೆಲ್ಲಿಕಾಯಿ ಮರ, ಒಂದು ಗಂಧದ ಮರ... ನಿಜಕ್ಕೂ ಡ್ರೀಮೀ ಹೌಸ್.
ನನ್ನ ಗೆಳೆಯ ಉದಯನಿಗೆ ಮದುವೆಯಾಯಿತು. ಆ ಮದುವೆ ನಡೆದದ್ದು ಯಶವಂತಪುರದ ತ್ರಿವೇಣಿ ರಸ್ತೆಯಲ್ಲಿ.
ಇದಕ್ಕೆ ಹಿಂದೆ ಒಂದು ವಿಶಿಷ್ಟ ಘಟನೆ ನಡೆದಿತ್ತು.
ಒಬ್ಬರು ಸರ್ಕಾರೀ ಶಿಪ್ಪಿಂಗ್ ಕಂಪೆನಿ ಇನ್ಸ್‍ಪೆಕ್ಟರು ಆಫೀಸಿಗೆ ಬಂದಿದ್ದರು. ಅವರು ತಾಜ್‍ನಲ್ಲಿ ಇಳಿದುಕೊಂಡಿದ್ದರು. ಆಗ ತಾಜ್ ಇದ್ದದ್ದು ಒಂದೇ. ಮಹಾತ್ಮಾ ಗಾಂಧೀ ರಸ್ತೆಯ ಅಂಚಿನಲ್ಲಿ.
9ನೇ ಮಹಡಿಯಲ್ಲಿ ಅವರ ರೂಮು. ಅವರನ್ನು ಕರೆತರಲು ನಾನು ಹೋದೆ.
ಬಂಗ್ಲಾ ಯುವಕ ಆತ. ‘ಸ್ವಲ್ಪ ಹೊತ್ತು ನಾನು ಹೊರಗೆ ಹೋಗಿ ಬರ್ತೇನೆ. ನೀನು ನನ್ನ ರೂಮಲ್ಲಿರು’ ಎಂದು ನಮ್ಮ ಕಂಪೆನಿ ಕಾರನ್ನು ತೆಗೆದುಕೊಂಡು ಹೊರಟುಹೋದ.
ಅಂದೇ ಟಿವಿಯಲ್ಲಿ ಮೊದಲ ಬಾರಿಗೆ ನೈಟ್ ರೈಡರ್ ಸೀರೀಸ್ ನೋಡಿದ್ದೆ. ರಿಮೋಟ್ ಕಂಟ್ರೋಲ್ ಕಾರಿನ ಕಥೆ. ಬಹಳವೇ ಇಂಪ್ರೆಸ್ ಮಾಡಿತ್ತು ನನ್ನನ್ನು.
ಅದಲ್ಲ, ನಾನು ಹೇಳಬೇಕೆಂದಿದ್ದ ಸಂಗತಿ.
ಅವರು ಬಂದ ನಂತರ ನಾನು ಲಿಫ್ಟ್‍ನಲ್ಲಿ ಕೆಳಗೆ ಬರುತ್ತಿದ್ದೆ. ಎಂಟನೇ ಫ್ಲೋರ್‍ನಲ್ಲಿ ಇಬ್ಬರು ಮಾತ್ರ ಲಿಫ್ಟ್ ಒಳಗೆ ಬಂದರು.
ಒಬ್ಬ ಉದ್ದನೆಯ ಜುಜ್ಜಾ, ಸಲ್ವಾರ್, ಕೋಟ್ ಧರಿಸಿದ್ದ ಮನುಷ್ಯ.
ಎಲ್ಲೋ ನೋಡಿದ್ದೇನೆ. ಎಲ್ಲಿ?ಎಲ್ಲಿ?
ಮಾತಿಲ್ಲ, ಕಥೆಯಿಲ್ಲ. ಇಬ್ಬರೂ ಒಂದೇ ಲಿಫ್ಟು. ಮೆಝನಿನ್ ಫ್ಲೋರ್‍ನಲ್ಲಿ ಅವರು ಇಳಿದರು. ಅವರು ಹೊರಗೆ ಬಂದೊಡನೆ ಅವರಿಗೆ ಅನೇಕರು ಸೆಲ್ಯೂಟ್ ಹೊಡೆದರು.
ಆತನೊಂದಿದ್ದ ಮನುಷ್ಯ ನೇವಿ ಡ್ರೆಸ್‍ನಲ್ಲಿದ್ದ. ಆತನನ್ನು ನೋಡಿದೊಡನೆ ನನಗೆ ಹೊಳೆಯಿತು ಆ ಇನ್ನೊಬ್ಬರಾರೆಂದು!
ಅವರು ಆಗಿನ ನಮ್ಮ ರಾಜ್ಯಪಾಲರು. ಶ್ರೀ ಎ.ಎನ್. ಬ್ಯಾನರ್ಜಿಯವರು!
ಓ ಮೈ ಗಾಡ್! ಅವರ ಜೊತೆಗೆ ನಾನು (ಮಾತ್ರ) ಒಂದೇ ಲಿಫ್ಟ್‍ನಲ್ಲಿ!

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102