ಯತಿ ಸ್ವಂತೀ -246


03-09-2018
ಶಾಲಿಮಾರ್ ಎಕ್ಸ್‍ಪ್ರೆಸ್ ಸ್ಟೇಷನ್ನಿಗೆ ಬಂದಾಗ ಅದನ್ನು ಏರಲೂ ಆಗದಷ್ಟು ಕಾಲ್ಗಳು ನೋಯುತ್ತಿದ್ದವು. ಕೊನೆಗೂ ದೆಹಲಿಯ ಸ್ಟೇಷನ್ ತಲುಪಿದೆವು. ಊಟ ಕೂಡ ಮಾಡದೇ ಬರೀ ಮಲಗಿದ್ದಷ್ಟೆ.
ನಮ್ಮ ಬೆಂಗಳೂರು ರೈಲು ಕೆ.ಕೆ. ಎಕ್ಸ್‍ಪ್ರೆಸ್ ಹಜರತ್ ನಿಜಾಮುದ್ದೀನ್ ಸ್ಟೇಷನ್‍ನಿಂದ ಇತ್ತು. ಸರಿ ಹೊರಟೆವು.
ಒಂದು ಸಮಸ್ಯೆ ಇತ್ತು. ನಾವು ಈಗ ಹತ್ತಿದ್ದ ಟ್ರೈನು ಹಜರತ್ ನಿಜಾಮುದ್ದೀನ್‍ನಲ್ಲಿ ಕೇವಲ ಎರಡು ನಿಮಿಷಗಳ ಕಾಲ ನಿಲ್ಲುತ್ತಿತ್ತು. ಪತ್ನಿಯರನ್ನೂ, ಮಗುವನ್ನೂ ಒಂದು ಬಾಗಿಲಲ್ಲಿ ನಿಲ್ಲಿಸಿ, ಮತ್ತೊಂದು ಬಾಗಿಲಲ್ಲಿ ನಾವು ಮೂವರೂ ನಮ್ಮ ಲಗ್ಗೇಜುಗಳೊಂದಿಗೆ ಕಾದೆವು. ಎಲ್ಲರೂ ದಬದಬನೆ ಇಳಿದೆವು, ಲಗ್ಗೇಜು ಇಳಿಸಿಕೊಂಡೆವು. ರೈಲು ಹೊರಟುಹೋಯಿತು.
ಕೆ.ಕೆ. ಎಕ್ಸ್‍ಪ್ರೆಸ್‍ನಲ್ಲಿ ಬೆಂಗಳೂರು ಬಂದು ತಲುಪಿದೆವು ಎಂಬಲ್ಲಿಗೆ ಈ ಟೂರು ಪುರಾಣ ಸಂಪನ್ನವಾಯಿತು.
ಅನೇಕ ಊರುಗಳಿಗೆ ಹೋದೆ. ಒಮ್ಮೆ ನೈವೇಲಿ ಲಿಗ್ನೈಟ್ ಕಾರ್ಪೋರೇಷನ್ನಿಗೆ ಹೋದೆ. ಕೆಲಸ ಮುಗಿಸಿ ಬಸ್‍ಗೆ ಬಂದರೆ ಬಸ್ ಇಲ್ಲ ಅಂದು. ಅಲ್ಲೇ ಹತ್ತಿರದ ಊರು ಪಂಡ್ರೊಟ್ಟಿಗೆ ಹೋಗಿ ಅಲ್ಲಿಂದ ಬೆಂಗಳೂರಿಗೆ ಬಸ್ಸಿದೆ ಎಂದರು. ಅಲ್ಲಿಗೆ ಬೇರೆ ಬಸ್ ಹಿಡಿದು ಹೋಗಿ  ಪಂಡ್ರೊಟ್ಟಿಯಿಂದ ಬೆಂಗಳೂರಿಗೆ ಬಸ್ ಹತ್ತಿದೆ.
ನೇರವಾದ ಸೀಟುಗಳು. ಅಬ್ಬಾ... ಬೆನ್ನು ನೋವು ಬಂದುಬಿಟ್ಟಿತ್ತು.
ನಂತರ ಬಂದದ್ದು ಚೆನ್ನೈ ಟ್ರಿಪ್ಪು. ಅದೊಂದು ರೀತಿ ಥ್ರಿಲ್ಲು ಅದು.
ನಮ್ಮ ಬಾಸ್ ಕೇಳಿದರು. ‘ನೀನು ಹಿಂದಿನ ದಿನ ಬಸ್ಸಲ್ಲಿ ಹೋಗಿ ಒಂದಿಷ್ಟು ಹಣ ಉಳಿಸಿಕೊಳ್ಳುವೆಯೋ (ಹೋಗೋದು ಬಸ್ಸಲ್ಲಿ. ಕ್ಲೈಮ್ ರೈಲಿನ ಫಸ್ಟ್‍ಕ್ಲಾಸ್. ನೋ ಕ್ವೆಶ್ಚನ್ಸ್ ಆಸ್ಕ್‍ಡ್) ಅಥವಾ ಏರೋಪ್ಲೇನಲ್ಲಿ ಹೋಗಿ ಬರುವೆಯೋ’ ಎಂದರು. ಅಬ್ಬಾ, ಈ ಅವಕಾಶವನ್ನು ಯಾರಾದರೂ ಬಿಟ್ಟಾರೆಯೇ?
ಕಂಪೆನಿಯಲ್ಲಿ ಆಯ್ ಎಸ್ ಓ ಕೆಲಸ ನಡೀತಿತ್ತು. ಚೆನ್ನೈಗೆ ಹೋಗಿ ಅಲ್ಲಿನ ಶಾಖೆಯವರನ್ನು ಪ್ರಶ್ನೆ ಕೇಳುವ ಕೆಲಸ.
ನನ್ನೊಂದಿಗೆ ಮೋಟರ್ ಸೇಲ್ಸ್‍ನ ದಿನವಹಿ ಬರುವವರಿದ್ದರು. (ಇವರ ಹೆಸರು ದೀನವಾಹಿ ಇರಬಹುದೆ? ಅವರು ಸದಾ ತಮ್ಮ ಹೆಸರನ್ನು ದಿನವಹಿ ಎಂದುಕೊಳ್ಳುತ್ತಿದ್ದರು)
ಅವರು ಏರ್‍ಪೋರ್ಟ್ ತಲುಪುವ ವೇಳೆಗೆ (ಆಗೆಲ್ಲಾ ಎಚ್ ಎ ಎಲ್) ನಾನು ಅಲ್ಲಿ ಅವರಿಗಾಗಿ ಕಾದಿದ್ದೆ.
ಅವರು ನನಗೆ ಪ್ರತಿಯೊಂದು ಹಂತವನ್ನೂ ಹೇಳಿಕೊಟ್ಟರು. ಅಂದೇ ಸಂಜೆ ವಾಪಸ್ಸು ಬರುವವರಾದ್ದರಿಂದ ಲಗ್ಗೇಜ್ ಏನೂ ಇರಲಿಲ್ಲ.
ಎಲ್ಲೆಲ್ಲಿ ಹೇಗೆ ವರ್ತಿಸಬೇಕು ಎಂದು ಅವರು ಹೇಳಿಕೊಡುತ್ತಿದ್ದರೆ ಮೊದಲ ಸಲ ನರ್ಸರಿ ರೈಮ್ ಕಲಿಯುವ ಉತ್ಸಾಹದಿಂದ ಎಲ್ಲವನ್ನೂ ಅರಿತೆ.
ವಿಮಾನ ಮೊದಲ ಸಲ ನೆಲ ಬಿಟ್ಟು ಮೇಲೇರಿದಾಗ ಜಯಂಟ್ ವ್ಹೀಲ್‍ನಲ್ಲಿ ಕುಳಿತರೆ, ಮೇಲ್ತುದಿಗೆ ಬಂದು ಕೆಳಗೆ ಇಳಿಯುವಾಗ ಆಗುವ ಎಲ್ಲೋ ಹಾರಿಹೋಗುವ ಭಾವನೆ ಬಂದಿತು.
ಚೆನ್ನೈ ತಲುಪಿ ನಮ್ಮ ಕೆಲಸ ಮುಗಿಸಿದೆವು.
ಮತ್ತೆ ಸಂಜೆ ಏರೋಪ್ಲೇನು. ವಾಹ್! ಒಂದೇ ದಿನ ಎರಡು ಟ್ರಿಪ್ಪು!

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102