ಯತಿ ಸ್ವಂತೀ -245
02-09-2018
ಅರ್ಧಕ್ವಾರಿಯಲ್ಲಿ ಎಲ್ಲರೂ ತಂಗಲು ಸ್ಥಳಾವಕಾಶ ಮಾಡಿಕೊಟ್ಟಿದ್ದರು. ಅಲ್ಲಿ ಸ್ವಲ್ಪ ಹೊತ್ತು ಮಲಗಿದ್ದು ನಂತರ ಇಳಿದು ಬಂದೆವು. ಕಾಟ್ರಾದಿಂದ ಬಸ್ಸು ಜಮ್ಮುವಿಗೆ ಬಂದಿತು. ಗುಪ್ತಾಜೀ ಅವರ ಮನೆ ತಲುಪಿದೆವು.
ನಮಗೆ ಒಳ್ಳೆಯ ಬೆಳಗಿನ ಉಪಾಹಾರ ಅವರ ಮನೆಯಲ್ಲಿ ತಯಾರಾಗಿತ್ತು. ಟಿಕೆಟ್‍ಗಳನ್ನು ಪಡೆದು ಅವರಿಗೆ ಹಣದ ಲೆಕ್ಕ ನೀಡಿದೆವು. ಬಸ್ಸಿನಲ್ಲಿ ಶ್ರೀನಗರದಿಂದ ವಾಪ್ಸು ಬರುವಾಗ ನಾನು ಶಂಕರ ಮತ್ತು ಪ್ರಸನ್ನ ಒಂದೊಂದು ಕುಟುಂಬಕ್ಕೆ ಎಷ್ಟೆಷ್ಟು ಖರ್ಚಾಯಿತೆಂದು (ಅಲ್ಲಿಯವರೆಗೆ) ಲೆಕ್ಕ ಹಾಕಿ ಆಗಿತ್ತು.
ಒಂದು ದಿನ ಶ್ರೀನಗರದ ಲೋಕಲ್ ಟೂರ್ ಮಾಡಿದ್ದನ್ನು ಹೇಳದಿದ್ದರೆ ಈ ಟೂರು ಸಂಪೂರ್ಣವಾಗದು.
ಶ್ರೀನಗರದಲ್ಲಿ ಮೂರು ಪ್ರಸಿದ್ಧ ತೋಟಗಳಿವೆ. ಶಾಲಿಮಾರ್ ಗಾರ್ಡನ್ಸ್, ಚಷ್ಮೆ ಶಾಹಿ ಮತ್ತು ನಿಷಾತ್ ಬಾಗ್.
ಚಷ್ಮೆ ಶಾಯಿಯಲ್ಲಿ ನೀರಿನ ಝರಿಯೊಂದು ಬೆಟ್ಟದ ಮೇಲಿನಿಂದ ಹರಿದು ಬರುತ್ತಿತ್ತು. ಅದನ್ನು ನಮ್ಮ ಬಳಿಯಿದ್ದ ದೊಡ್ಡ ಪ್ಲಾಸ್ಟಿಕ್ ಡಬ್ಬಾದಲ್ಲಿ ತುಂಬಿಕೊಂಡೆವು. ಅದನ್ನು ಆಗ ಅವರು ಮಿನರಲ್ ವಾಟರ್ ಎಂದಿದ್ದರು. ಈಗ ನಾವು ಹಣ ಕೊಟ್ಟು ಮಿನರಲ್ ವಾಟರ್ ಕೊಳ್ಳುತ್ತೇವೆ! ಅದರಲ್ಲಿ ಮಿನರಲ್ಸ್ ತುಂಬಿದ್ದೇವೆ ಎಂದು ಕೆಲವು ಬಾಟಲಿ ತಯಾರಕರು ಬರೆದುಕೊಂಡಿರುತ್ತಾರೆ.
ನಿಷಾತ್ ಬಾಗಿಗೆ ಹೋದಾಗ ಅಲ್ಲಿ ಎಲ್ಲರೂ ಒಂದು ವಿಶಿಷ್ಟ ಪಟ ತೆಗೆದುಕೊಳ್ಳುತ್ತಿದ್ದರು. ನಾವೂ ಹೋದೆವು.
ಕಶ್ಮೀರಿ ದಿರಿಸಿನಲ್ಲಿ ಪಟಗಳು. ನಾನು ನನ್ನ ಪತ್ನಿ ಇಬ್ಬರೂ ಕಶ್ಮೀರಿ ಉಡುಪಿನಲ್ಲಿ ಫೋಟೋ ತೆಗೆಸಿಕೊಂಡೆವು. ನಿಜಕ್ಕೂ ಚಂದ ಕಾಣ್ತದೆ ಪಟ. ಅಂದು ಆ ಪಟ ತೆಗೆಯುವವನು ನಮ್ಮ ಪತ್ನಿಯರ ಕುತ್ತಿಗೆಗೆ ಅವನೇ ಸರ ಹಾಕುತ್ತಿದ್ದ. ನೋಡು ತಾಳಿ ಕಟ್ತಿದ್ದಾನೆ ಎಂದು ರೇಗಿಸಿದ್ದು ನೆನಪಿದೆ.
ಪಟ ಹೇಗೆ ತಲುಪಿಸ್ತೀರಿ ನಾವು ಬೆಳಗ್ಗೆ ಒಂಬತ್ತಕ್ಕೆ ಹೊರಟು ಬಿಡ್ತೇವೆ ಎಂದಾಗ ಹೊಟೇಲ್ ಹೆಸರು ಕೇಳಿ ತಿಳಿದುಕೊಂಡ ಅವನು.
ಶಾಲಿಮಾರ್ ಗಾರ್ಡನ್ಸ್ ಬಹು ಪ್ರಸಿದ್ಧ ತೋಟ. ಅನೇಕಾನೇಕ ಸಿನಿಮಾಗಳ ಹಾಡುಗಳು ಅಲ್ಲಿ ಚಿತ್ರಿತವಾಗಿವೆ. ತಕ್ಷಣಕ್ಕೆ ನೆನಪಾಗುತ್ತಿರುವ ಹಾಡು ರಾಜೇಂದರ್ ಕುಮಾರ್, ವೈಜಯಂತೀ ಮಾಲಾರ ಸಾಥಿ ಚಿತ್ರದ ಮೇರ ಪ್ಯಾರ್ ಭೀ ತೂ ಹೈ ಎ ಬಹಾರ್ ಭಿ ತೂ ಹೈ.
ಅಲ್ಲಿ ಒಂದು ವಿಶೇಷ ಶೋ ನೋಡಿದೆವು. ಸಾನೆಟ್ ಲುಮಿಯರ್. ಶಬ್ದ ಮತ್ತು ಬೆಳಕು. ಇದನ್ನು ನಾನು ದೆಹಲಿಯ ಕೆಂಪು ಕೋಟೆಯಲ್ಲಿ ನೋಡಿದ್ದ ನೆನಪು. ಅಂದರೆ ಇಂತಹದ್ದೇ ದೆಹಲಿಯ ಚರಿತ್ರೆಯ ಶೋ ಅದು. ಇಲ್ಲಿ ಕಶ್ಮೀರದ ಬಗ್ಗೆ ಇತ್ತು ಶೋ.
ಅಲ್ಲಲ್ಲಿ ಇದ್ದಕ್ಕಿದ್ದಂತೆ ಕಾರಂಜಿಗಳು ಚಿಮ್ಮುವುದು, ಬಣ್ಣಬಣ್ಣದ ದೀಪಗಳು ಹೊತ್ತಿಕೊಳ್ಳುವುದು... ಬಹಳ ಚೆನ್ನಾಗಿತ್ತು ಶೋ.
ಈಗ ಮತ್ತೆ ಜಮ್ಮುವಿಗೆ ಮರಳೋಣ.
ಅಲ್ಲಿ ಬೆಳಗ್ಗೆ ರಣಧೀರೇಶ್ವರ ಎಂಬ ಲಿಂಗವನ್ನೂ, ರಾಮನ ದೇವಾಲಯವೊಂದನ್ನೂ ಸಂದರ್ಶಿಸಿದೆವು.
ಗುಪ್ತಾಜೀ ಮನೆಯಿಂದ ಲಗ್ಗೇಜ್ ತೆಗೆದುಕೊಂಡುಮೂರು ಗಂಟೆಯ ಶಾಲಿಮಾರ್ ಎಕ್ಸ್‍ಪ್ರೆಸ್ ರೈಲು ಹಿಡಿಯಲು ಬಂದೆವು.
Comments
Post a Comment