ಯತಿ ಸ್ವಂತೀ -244


01-09-2018
ವೈಷ್ಣೋದೇವಿ ಒಂದು ಬೆಟ್ಟ. ಸುಮಾರು 16 ಕಿ.ಮೀ.ಯಷ್ಟು ನಡೆಯಬೇಕು. ಕುದುರೆ ಸವಾರಿ ಇತ್ತು. ಕುರ್ಚಿಗಳನ್ನು ಜೋಡಿಸಿ ಅವುಗಳ ನಡುವೆ ಕೂರಿಸಿಕೊಂಡು ಹೋಗಲು ಜನವಿದ್ದರು. (ಶ್ರವಣಬೆಳಗೊಳದಲ್ಲಿ ಇಂಥದ್ದು ಕಂಡಿದ್ದ ನೆನಪು).
ಆದರೆ ದುರ್ಗಮವಾದ ರಸ್ತೆ. ನಡೆದೆವು ನಡೆದೆವು ನಡೆದೆವು.
ಬಹಳ ತಡವಾಗಿ ನಮಗೆ ತಿಳಿದ ವಿಷಯವೇನೆಂದರೆ ರಾತ್ರಿ ಬೆಟ್ಟ ಹತ್ತಲು ಆರಂಭಿಸಿ, ಬೆಳಗಿನ ಝಾವ ಮೇಲೆ ತಲುಪಿ, ದೇವಿ ದರ್ಶನ ಮಾಡುವುದು ಅತ್ಯಂತ ಸೌಕರ್ಯಕರ ಎಂದು. ಆದರೆ ನಾವು ಹೊರಟಿದ್ದೇ ಹತ್ತು ಗಂಟೆ. ಎಲ್ಲರೂ ಸುಸ್ತು ಹೊಡೆಯುತ್ತಾ ಮೇಲೆ ತಲುಪಿದ್ದು ಸಂಜೆ ನಾಲ್ಕು ಗಂಟೆ.
ಅಲ್ಲಿದ್ದ ಒಂದು ಉಚಿತ ಲಾಡ್ಜ್‍ನಲ್ಲಿ ಹೋಗಿ ಮಲಗಿದವರು ಸುಮಾರು ಎರಡು ಗಂಟೆ ಕಾಲ ಮಲಗಿದ್ದಿರಬೇಕು. ಅಷ್ಟು ಆಯಾಸ.
ನಂತರ ಎದ್ದು ಅಲ್ಲಿ ವ್ಯವಸ್ಥೆ ಮಾಡಲ್ಪಟ್ಟಿದ್ದ ಮೇಲಿನಿಂದ ನೀರು ಸುರಿಯುವ ಜಾಗಕ್ಕೆ ಹೋಗಿ ನಿಂತೆವು. ಮೈ ಒದ್ದೆಯಾಯಿತು. ರೂಮಿಗೆ ಬಂದು ಬಟ್ಟೆ ಬದಲಿಸಿ ದೇವಿ ದರ್ಶನಕ್ಕೆ ಹೋದೆವು.
ಎರಡು ಮೂರು ಬೆಟ್ಟಗಳ ನಡುವಿನ ಕಣಿವೆಯಲ್ಲಿದೆ ವೈಷ್ಣೋದೇವಿ ಮಂದಿರ.
ಹತ್ತಿರ ಹೋದರೆ ಒಂದು ಸಣ್ಣ ಗುಹೆ. ಅದರೊಳಗೆ ತೂರಿಕೊಂಡು ಒಳಗೆ ಹೋದೆವು. ಕೇವಲ ನಾವು ತೂರುವಷ್ಟು ದೊಡ್ಡ ರಂಧ್ರವನ್ನು ಹೊಂದಿತ್ತು ಆ ಗುಹೆಯ ಬಾಗಿಲು.
ಅಲ್ಲಿಂದ ಒಳಗೆ ಐಸ್‍ಕೋಲ್ಡ್ ನೀರಲ್ಲಿ ಸೊಟ್ಟವಾಗಿದ್ದ ಚುಚ್ಚುತ್ತಿದ್ದ ನೆಲದ ಮೇಲೆ ನಡೆದಾಗ ಗುಹೆ ಸ್ವಲ್ಪ ಎತ್ತರವಾಗಿತ್ತು.
ಈಗ ಹೆಲಿಕಾಪ್ಟರ್ ಸೇವೆ ಬಂದಿದೆ. ಗುಹೆಯ ಮುಂಭಾಗದ ರಂಧ್ರವನ್ನು ದೊಡ್ಡದು ಮಾಡಿರುವರಂತೆ. ಆಗೆಲ್ಲಾ ಅಲ್ಲಲ್ಲಿ ಫಲಕ. ನಿಮಗೆ ಇಲ್ಲಿ ಏನಾದರೂ ಕುಂದುಕೊರತೆಗಳು ಕಂಡು ಬಂದಲ್ಲಿ ಜಮ್ಮು ಮತ್ತು ಕಾಶ್ಮೀರದ ಆಗಿನ ರಾಜ್ಯಪಾಲರಾದ ಜಗ್‍ಮೋಹನ್ ಅವರಿಗೇ ದೂರು ಕೊಡಿರಿ ಎಂದು.
ದೇವಿಯ ಬಳಿಗೆ ಹೋದೆವು. ಮೂರು ಚಿಕ್ಕ ಕಲ್ಲಿನ ಗುಡ್ಡೆಗಳು ಹೆಚ್ಚು ಕಮ್ಮಿ ಲಿಂಗದ ರೂಪದಲ್ಲಿ. ಒಂದು ಕಡೆ ಸರಸ್ವತಿ, ಮತ್ತೊಂದು ಕಡೆ ಲಕ್ಷ್ಮೀ ಮತ್ತು ನಡುವೆ ವೈಷ್ಣೋದೇವಿ.
ಅಲ್ಲಿನ ಪುರೋಹಿತ ಪ್ಯಾಂಟು, ಷರಟು, ಕೋಟು, ಮಫ್ಲರ್ ಧರಿಸಿದ್ದ. ಸೆಪ್ಟೆಂಬರ್ ತಿಂಗಳಲ್ಲೇ ಆ ಛಳಿ. ಇನ್ನು ಡಿಸೆಂಬರ್‍ನಲ್ಲಿ ಓವರ್ ಕೋಟ್ ಕೂಡ ಹಾಕಿರುವನೇನೋ!
ಅಲ್ಲಿದ್ದ ತಟ್ಟೆಗೆ ಕಾಸು ಹಾಕಿದೆವು. ಆ ತಟ್ಟೆಯಿಂದ ಕೆಲವು ನಾಣ್ಯಗಳನ್ನು ನಮ್ಮ ಪತ್ನಿಯರಿಗೆ ನೀಡಿ, ಗಲ್ಲಾದಲ್ಲಿ ಇಡಿ ಒಳ್ಳೆಯದಾಗುತ್ತೆ ಎಂದ.
ಅಲ್ಲಿಂದ ಹೊರಗೆ ಬಂದು ಹತ್ತಿರದ ಚಿಕ್ಕ ಕ್ಯಾಂಟೀನಿನಲ್ಲಿ ಚಪಾತಿ, ಆಲೋ ಸಬ್ಜಿ ತಿಂದು ಜೈ ಮಾತಾ ದೀ ಎನ್ನುತ್ತಾ ಇಳಿಯಲು ಆರಂಭಿಸಿದೆವು.
ಪಂಜಾಬಿ ಭಾಷೆಯಲ್ಲಿ ಕಿ ಅಕ್ಷರಕ್ಕೆ ದಿ ಹೇಳುತ್ತಾರೆ.
ಜೈ ಮಾತಾ ಕೀ ಅದಕ್ಕೇ ಅಲ್ಲಿ ಜೈ ಮಾತಾದೀ ಆಗುತ್ತದೆ.
ಸುಸ್ತಾದಾಗ ಒಂದೆಡೆ ರೆಸ್ಟು ಮಾಡಿದೆವು. ಅದೇ ಅರ್ಧಕ್ವಾರಿ ಎನ್ನುವ ಜಾಗ.

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102