ಯತಿ ಸ್ವಂತೀ -242
30-08-2018
ನಾವು ಇನ್ನೇನು ಒಂದು ಟನಲ್ ಪ್ರವೇಶಿಸುವುದರಲ್ಲಿದ್ದೆವು. ಅದು ಸುಮಾರು ಎರಡೂವರೆ ಕಿಮೀ ಉದ್ದದ ಸುರಂಗ. ಅದರ ಮೂಲಕ ಬಸ್ಸು ಹೋಗಬೇಕಿತ್ತು. ಸುರಂಗದ ಮೇಲ್ಭಾಗದಲ್ಲಿ ಅನೇಕಾನೇಕ ನೀರಿನ ಝರಿಗಳು ಹರಿಯುತ್ತಿದ್ದವು. ಅವು ನಮ್ಮ ಲಗ್ಗೇಜುಗಳನ್ನು ಒದ್ದೆ ಮಾಡುವ ಅವಕಾಶವಿತ್ತು. ಅದಕ್ಕೇ ಟಾರ್‍ಪಾಲಿನ್ ಹೊದಿಸಿದ್ದರು.
ಬೆಳಗ್ಗೆ 9ಕ್ಕೆ ಜಮ್ಮುತವಿ ಬಿಟ್ಟವರು ಸಂಜೆ ಎಂಟಕ್ಕೆ ಶ್ರೀನಗರ್ ತಲುಪಿದೆವು. ಅಲ್ಲಲ್ಲಿ ಸೈನಿಕರು ಕಾವಲು ಕಾಯುತ್ತಿದ್ದರು. ಅವರು ವಿಶ್ವಸಂಸ್ಥೆಯಿಂದ ನೇಮಿಸಲ್ಪಟ್ಟ ಪಡೆಯವರು. ಯಾವಾಗ ಬೇಕಾದರೂ ಅಶಾಂತಿ ಅಲ್ಲಿ ಭುಗಲೇಳಬಹುದಿತ್ತು. ಒಮ್ಮೆ ಈ ಭಯ ಎಷ್ಟಕ್ಕೆ ಮುಟ್ಟಿತ್ತೆಂದರೆ ಇಡೀ ವರ್ಷಕ್ಕೆ ಕಾಶ್ಮೀರವನ್ನು ಸಂದರ್ಶಿಸಿದವರು ಕೇವಲ 3500 ಜನ. ಲಕ್ಷೋಪಲಕ್ಷ ಜನ ಇಲ್ಲಿಗೆ ಬರುತ್ತಿದ್ದರು ಇದಕ್ಕೆ ಮುಂಚೆ.
ಬಹಳ ಹಿಂದೀ ಸಿನಿಮಾಗಳಲ್ಲಿ ಚಿತ್ರಿತವಾಗಿರುವ ಒಂದು ವಿಶಿಷ್ಟ ಸ್ಥಳ ಶ್ರೀನಗರ್. ಅಣ್ಣಾವ್ರ ಶಂಕರ್‍ಗುರು ಚಿತ್ರದ ಬಹುತೇಕ ಭಾಗವು ಈ ಜಾಗದಲ್ಲಿ ಶೂಟ್ ಆಗಿದೆ.
ರಾತ್ರಿಯಾಗಿತ್ತು. ಹಸಿವೆ. ಅಲ್ಲೇ ಒಂದು ಮಲಯಾಳಿ ಹೊಟೇಲ್ ಇತ್ತು. ಅಲ್ಲಿ ಹೋಗಿ ಊಟ ಮಾಡಿದೆವು. ಕಶ್ಮೀರೀ ಅಕ್ಕಿ ಉದ್ದಕ್ಕೆ ಇರುತ್ತದೆ. ಬಲು ರುಚಿಯಾದ ಅನ್ನ.
ಅಲ್ಲಿ ಉಂಡು ನಂತರ ದಾಲ್‍ಲೇಕ್ ಬಳಿಗೆ ಬಂದೆವು. ಅಲ್ಲಿ ಒಂದು ದೋಣಿ ಹತ್ತಿದೆವು. ಕಾಲಿಟ್ಟೊಡನೆ ಅಲುಗಾಡುವ ಈ ದೋಣಿಯಲ್ಲಿ ಕಾಲಿಟ್ಟೊಡನೆ ಕಿರ್ರ್ ಎಂದರು ನಮ್ಮ ಹೆಣ್ಮಕ್ಕಳು!
ಹೊಟೇಲ್ ಎಲಿಗೆಂಟ್ ದಾಲ್ ಲೇಕ್‍ನ ಇನ್ನೊಂದು ಕಡೆಯ ದಡದಲ್ಲಿತ್ತು.
ಎಲಿಗೆಂಟ್ ಎನ್ನೋ ಹೊಟೇಲ್. ಮೊದಲನೆಯ ಸಲ ಮರದ ‘ನೆಲ’ ಇರುವ ಕಟ್ಟಡವನ್ನು ಕಂಡಿದ್ದೆ!
ಮರುದಿನ ಬೆಳಗ್ಗೆ ಯಥಾಪ್ರಕಾರ ದಾಲ್‍ಲೇಕ್ ದಾಟಿ ಆ ಕಡೆಯ ದಡಕ್ಕೆ ಬಂದೆವು. ಮಲಯಾಳಿ ಹೊಟೇಲ್ ನಮಗೆ ಆಪ್ಯಾಯಮಾನವಾಗಿತ್ತು.
ಅಲ್ಲಿಯೇ ತಿಂದು ಒಂದಿಷ್ಟು ಬ್ರೆಡ್ಡು, ಬಿಸ್ಕತ್ತು, ಹಣ್ಣುಗಳನ್ನು ಕಟ್ಟಿಸಿಕೊಂಡು ನಮಗಾಗಿ ಸಿದ್ಧವಾಗಿದ್ದ ಟ್ಯಾಕ್ಸಿ ಹತ್ತಿದೆವು.
ನೋಡಲು ಬಲು ಸುಂದರನಾಗಿದ್ದ ಡ್ರೈವರ್. ನನಗಂತೂ ಜಂಗ್ಲೀಯ ಸಾಯಿರಾಬಾನುವಿನಂತೆಯೇ ಕಂಡಿದ್ದ! ಆಕೆ ಆಗಿನ ಕಾಲದ ಬ್ಯೂಟಿ ಕ್ವೀನ್.
ಉದ್ದನೆಯ ಮೂಗು, ಆರಡಿ ಎತ್ತರ, ಅಗಲ ಹಣೆ, ಸುಂದರ ಎಂದೇ ಹೇಳಬಹುದು. ಸರ್‍ಫರಾಜ್ ಇರಬಹುದಾ ಅವನ ಹೆಸರು? ನೆನಪಿಲ್ಲ.
ನಮ್ಮ ಮೊದಲ ದಿನದ ಪಯಣ ಗುಲ್‍ಮಾರ್ಗ್ ಕಡೆಗೆ ಆಯಿತು.
ನೆನಪಿದೆಯಾ ಅಣ್ಣಾವ್ರು ಡಬ್ಬಲ್‍ರೋಲ್‍ನಲ್ಲಿ ನಾ ಬೆಂಕಿಯಂತೆ ಹಾಡಿದ ಜಾಗ. ಅದರಲ್ಲಿ ಕೆಲವು ದೃಶ್ಯಗಳು ಬ್ಯಾಕ್‍ಪ್ರೊಜೆಕ್ಷನ್ ಆಗಿದ್ದರೂ ಬಹುತೇಕ ಅಲ್ಲೇ ತೆಗೆದರು.
ಆಶಾಪಾರೇಖ್ ಸೈಕಲ್ ಹೊಡೆಯುತ್ತಾ ಹೋಗುತ್ತಿದ್ದಾಗ ಹಿಂದೆಯೇ ಜೀಪ್‍ನಲ್ಲಿ ಜಾಯ್ ಮುಖರ್ಜಿ ಪುಕಾರತಾ ಚಲಾ ಹೂಂ ಮೈ ಹಾಡು?
ಇದೂ ಕೂಡ ಅದೇ ರಸ್ತೆಯ ಹಾಡು.
ರಸ್ತೆಯ ಇಕ್ಕೆಲಗಳಲ್ಲೂ ಸಫೇದಾ ಎಂಬ ಉದ್ದನೆಯ ಮರಗಳಿದ್ದವು.
Comments
Post a Comment