ಯತಿ ಸ್ವಂತೀ -241
29-08-2018
ಅಲ್ಲೆಷ್ಟು ಛಳಿ ಇತ್ತೆಂದರೆ ಆ ರೈಲ್ವೈ ಎನ್‍ಕ್ವೈರಿ ಕೌಂಟರ್‍ನಲ್ಲಿದ್ದಾತ ಮೈ ತುಂಬಾ ಸ್ವೆಟರ್ ಧರಿಸಿ, ಕುತ್ತಿಗೆಗೆ ಮಫ್ಲರ್ ಸುತ್ತಿಕೊಂಡು ಗಾಜಿನ ಕೌಂಟರ್‍ನಲ್ಲಿ ಕೂತಿದ್ದ. ಅವನೊಂದಿಗೆ ಮಾತಾಡಲು ಈ ಕಡೆ ಒಂದು ಮೈಕು. ಆ ಕಡೆ ಒಂದು ಮೈಕು. ಅಮೆರಿಕನ್ ಧಾರಾವಾಹಿಗಳಲ್ಲಿ ಅಪರಾಧಿ ಮತ್ತು ಅವನ(ಳ)ನ್ನು ನೋಡಲು ಬರುವವರು ಟೆಲಿಫೋನ್ ರಿಸೀವರ್ ಎತ್ತಿ ಮಾತಾಡುವಂತೆ!
ಅಲ್ಲಿ ಯಾವ ವೆಯ್ಟಿಂಗ್ ರೂಮ್ ಕೂಡ ಖಾಲಿ ಇಲ್ಲ ಎಂದ ಅವನು. ಏನು ಮಾಡುವುದು, ಹೆಣ್ಣುಮಕ್ಕಳು, ಮಗು ಇದ್ದಾರಲ್ಲಾ ಎಂದು ಆಲೋಚಿಸಿದಾಗ ಅಲ್ಲೊಬ್ಬ ಬಂದ. ಥೇಟ್ ಬ್ಲ್ಯಾಕ್ ಟಿಕೆಟ್ ಮಾಡಲು ಸಿನಿಮಾ ಥೇಟರಿನ ಮುಂದೆ ಸುತ್ತಾಡುವವನ ಹಾಗೇ ಇದ್ದ!
ಬನ್ನಿ ಇಲ್ಲೇ ಒಂದು ಡಾರ್ಮಿಟರಿ ಇದೆ ಎಂದು ಕೌಂಟರಿನವನ ಕಡೆಗೆ ನೋಡಿದ. ಅವನಿಗೂ ಇವನಿಗೂ ಸಮ್‍ಥಿಂಗ್ ಸಂಥಿಂಗ್ ಇದೆ ಎಂದು ಅನ್ನಿಸಿತು.
ಎಲ್ಲಾ ದಂಧೆ, ವ್ಯಾಪಾರ. ನಾವು ಕೊಡುವ ಹಣದಲ್ಲಿ ಅವನಿಗೂ ಪಾಲು ಹೋಗಬಹುದು.
ಆದರೆ ಆ ವಿಷಯ ಆಲೋಚಿಸಲು ನಮಗೆ ಸಮಯವೂ ಇಲ್ಲ, ವ್ಯವಧಾನವೂ ಇಲ್ಲ.
ಅವನ ಹಿಂದೆ ಹೋದೆವು. ಒಂದು ದೊಡ್ಡ ರೂಮು. ಮೂರು ಮೂಲೆಗೆ ಮೂರು ಮಂಚಗಳು.
ಅಂತೂ ಅಲ್ಲೇ ಅಡ್ಜೆಸ್ಟ್ ಮಾಡಿಕೊಂಡು ಅಡ್ಡಾದೆವು. ಭಯಾನಕ ಛಳಿ ಜಮ್ಮುವಿನಲ್ಲಿ.
ಮರುದಿನ ಬೆಳಗ್ಗೆ ಉಳಿದವರು ಸಿದ್ಧವಾಗುವುದಕ್ಕೆ ಮೊದಲು ನಾನು ಶಂಕರ ಅಲ್ಲಿ ಒಬ್ಬರ ಮನೆಯನ್ನು ಹುಡುಕಿಕೊಂಡು ಹೊರಟೆವು.
ಅವರ ಹೆಸರು ಗುಪ್ತ ಎಂದು ಇಟ್ಟುಕೊಳ್ಳೋಣ! (ಹೆಸರು ಗುಪ್ತವಾಗಿರಲೆಂದಾದರೂ ಅಂದುಕೊಳ್ಳಿ!)
ಅವರು ನಮಗೆ ಹೇಗೆ ಗೊತ್ತು? ಅವರ ಮನೆಗೇ ಯಾಕೆ ಹೋಗಲಿಲ್ಲ ಹಿಂದಿನ ರಾತ್ರಿ? ಮೊದಲನೆಯದು ಅವರು ನಮಗೆ ಪರಿಚಿತರಲ್ಲ. ಎರಡನೆಯದು 7 ಜನ ಒಮ್ಮೆಲೇ ರಾತ್ರಿ ಹೋಗಿ ಇಳಿದರೆ ಏನು ಚೆನ್ನ?
ಆದರೆ ಅವರಿಂದ ನಮಗೊಂದು ಕೆಲಸವಾಗಬೇಕಿತ್ತು. ಇಂಟರ್‍ನೆಟ್ ಇಲ್ಲದ, ಮೊಬೈಲ್ ಇಲ್ಲದ ಕಾಲವದು!
ನಮಗೆ ಐದು ದಿನಗಳ ನಂತರ ದೆಹಲಿಗೆ ವಾಪಸ್ ಹೋಗಲು ಟಿಕೆಟ್ ಬೇಕಿತ್ತು.
ನನ್ನ ತಂಗಿಯ ನಾದಿನಿಯ ಸಹೋದ್ಯೋಗಿ ಆಗಿದ್ದರು ಒಂದಾನೊಂದು ಕಾಲದಲ್ಲಿ ಆ ಗುಪ್ತಾಜೀ, ಚೆನ್ನೈನಲ್ಲಿ.
ಆ ಬಾದರಾಯಣ ಸಂಬಂಧ ಹಿಡಿದುಕೊಂಡು ಅವರ ಮನೆಗೆ ಹೋಗಿದ್ದೆವೆಂದರೆ ನಾವೆಷ್ಟು ಡೆಸ್ಪರೇಟ್ ಎಂದು ಅರ್ಥವಾಗುವುದಲ್ಲವೆ?
ಅವರು ನಮ್ಮನ್ನು ಚೆನ್ನಾಗಿ ಆದರಿಸಿದರು. ಐದನೇ ದಿನವೋ ಆರನೇ ದಿನವೋ ಜಮ್ಮುತವಿ ಸ್ಟೇಷನ್ನಿನಿಂದ ದೆಹಲಿಗೆ ಶಾಲಿಮಾರ್ ಎಕ್ಸ್‍ಪ್ರೆಸ್‍ನಲ್ಲಿ ರಿಸರ್ವ್ ಮಾಡಿಸಲು ವಿನಂತಿಸಿ, ಹಣ ಕೊಟ್ಟು ಮರಳಿ ಬಂದೆವು.
ತಿಂಡಿ ತೀರ್ಥ ಮುಗಿಸಿ, ಬಸ್ ಹತ್ತಿದೆವು.
ಹನ್ನೊಂದು ಗಂಟೆಗಳ ಕಾಲದ ಪ್ರಯಾಣ. ಜಮ್ಮುವಿನಿಂದ ಶ್ರೀನಗರ್‍ಗೆ ಹೊರಟೆವು.
ಒಂದೆಡೆ ಅಗಾಧವಾದ ಕಮರಿಗಳು, ಇನ್ನೊಂದೆಡೆ ಎತ್ತರದ ಬೆಟ್ಟಗಳು. ಅಬ್ಬಾ, ಎಂತಹ ದುರ್ಗಮವಾದ ದಾರಿ.
ನಮ್ಮ ಲಗೇಜುಗಳನ್ನು ಬಸ್ ಮೇಲೆ ಹಾಕಿ ಅದರ ಮೇಲೆ ಟಾರ್‍ಪಾಲ್ ಕಟ್ಟಿದ್ದ ಡ್ರೈವರ್. ಏಕೆಂದು ಸ್ವಲ್ಪ ಹೊತ್ತಿಗೆ ಅರಿವಾಯಿತು.
Comments
Post a Comment