ಯತಿ ಸ್ವಂತೀ -240
28-08-2018
ಏಕಶಿಲೆಯ ಮಾನಸ್ ಮಂದಿರ್ ಅದ್ಭುತ. ಗೋಮಟೇಶ್ವರನ ವಿಗ್ರಹದ ನಂತರ ನಾನು ನೋಡಿದ ಮತ್ತೊಂದು ಅದ್ಭುತವಿದು. ಇಡೀ ಬೆಟ್ಟವನ್ನು ಕೊರೆದು ದೇವಾಲಯ ಕಟ್ಟಿ ಜೊತೆಯಲ್ಲಿ ದೇವರ ವಿಗ್ರಹವನ್ನೂ ಅದೇ ಕಲ್ಲಲ್ಲಿ ಕೆತ್ತಿದ್ದಾರೆ. ಮೋನೋಲಿತಿಕ್ ಶಿಲ್ಪಕ್ಕೆ ಒಂದು ಅದ್ಭುತ ಉದಾಹರಣೆ ಇದು!
ಭಾರತದಲ್ಲಿನ ದ್ವಾದಶಲಿಂಗಗಳಲ್ಲಿ ಘೃಷ್ಣೇಶ್ವರ (ಘ್ರುಣೇಶ್ವರ!) ಒಂದು. ಇದರ ದರ್ಶನವನ್ನೂ ಮಾಡಿದೆವು. ಏನೋ ಒಂದು ರೀತಿಯ ಧನ್ಯತಾಭಾವ. ನಾನು ಇದಕ್ಕೆ ಮುಂಚೆ ಕೇವಲ ರಾಮೇಶ್ವರಂಗೆ ಹೋಗಿದ್ದೆ, 1964ರಲ್ಲಿ.
ಅಲ್ಲಿಂದ ನಾವು ಅಜಂತಾಗೆ ಹೋದೆವು.
ಬ್ರಾಹ್ಮಣರ ಪ್ರಾಬಲ್ಯ ಹೆಚ್ಚಾದಾಗ ಬೌದ್ಧರು ತಲೆಮರೆಸಿಕೊಂಡು ಗುಹೆಗಳಿವು. ಅದರ ಮುಖ್ಯದ್ವಾರವೇ ಬಹಳ ಚಾತುರ್ಯದಿಂದ ಕೂಡಿದೆ.
ಒಂದು ದೊಡ್ಡ ಬೆಟ್ಟವನ್ನು ಕೊರೆದು ಒಳಗೆ ಜಾಗ ಮಾಡಿಕೊಂಡು ಅಲ್ಲಿ ಗುಹೆಗಳನ್ನು ಕೊರೆದಿದ್ದಾರೆ.
ನಡುವೆ ಒಂದು ಕಣಿವೆ. ಅದರಲ್ಲಿ ಒಂದು ನದಿ ವಾಘುರೆ ಎಂಬ ಹೆಸರೆಂದು ನೆನಪು.
ಪದ್ಮಪಾಣಿ ಎನ್ನುವ ಜಗತ್‍ಪ್ರಸಿದ್ಧ ಚಿತ್ರ ಒಂದು ಗುಹೆಯಲ್ಲಿದೆ. ಅಜಂತಾ ವಿಶ್ವವಿದ್ಯಾಲಯ ಎನ್ನುತ್ತಿದ್ದರಂತೆ ಆಗ. ಪಾಠಪ್ರವಚನಗಳು ನಡೆದ ಜಾಗವೆನ್ನುತ್ತಾರೆ.
ಇಲ್ಲಿನ ಚಿತ್ರಗಳು ಕ್ರಮೇಣ ಮಸುಕಾಗುತ್ತಿದ್ದು ಅವನ್ನು ಪುನರುದ್ಧಾರ ಮಾಡಲು ಅನೇಕ ಕೆಲಸಗಳು ನಡೆಯುತ್ತಿದ್ದವು.
ಮರುದಿನ ನಾಸಿಕ್‍ನ ಸೈರ್ ಮಾಡಿದೆವು. ಅಲ್ಲಿ ಭೀಮೇಶ್ವರನ ದರ್ಶನವಾಯಿತು. ಗೋದಾವರಿ ನದೀ ತೀರಕ್ಕೆ ಹೋದೆವೆಂದು ನೆನಪು.
ಅಂದು ರಾತ್ರಿ ನಮಗೆಲ್ಲಾ ಬಹಳ ಉದ್ವೇಗ. ಕಾಶ್ಮೀರಕ್ಕೆ ಮರುದಿನ ರಾತ್ರಿ ಹೊರಟಿದ್ದೆವು.
ಡೆಲ್ಲಿಯನ್ನು ತಲುಪುವ ಹೊತ್ತಿಗೆ ಸಂಜೆಯಾಗಿತ್ತು.
ರಾತ್ರಿ ಒಂಬತ್ತಕ್ಕೆ ಜಮ್ಮುತವಿ ಎಕ್ಸ್‍ಪ್ರೆಸ್‍ಗಾಗಿ ದೆಹಲಿ ಸ್ಟೇಷನ್ನಿನಲ್ಲಿ ಕಾದೆವು... ಕಾದೆವು... ಕಾದೆವು... ರಾತ್ರಿ ಬರಲೇ ಇಲ್ಲ ಆ ರೈಲು!
ಮುಂಬೈಯಿಂದ ಅದು ಹೊರಟಿದ್ದೇ ತಡವಂತೆ (ಅಥವಾ ಅಹಮ್ಮದಾಬಾದ್!) ಅದು ರಾತ್ರಿ ಒಂಬತ್ತಕ್ಕೆ ದೆಹಲಿ ಬಿಡುವ ಬದಲು ದೆಹಲಿಗೆ ಬೆಳಗ್ಗೆ 10ಕ್ಕೆ ಬಂದಿತ್ತು. 11ಕ್ಕೆ ಹೊರಡಬೇಕಿತ್ತು.
ಮೂವರು ಹೆಂಗಸರು, ಒಂದು ಮಗು ಮತ್ತು ಲಗ್ಗೇಜಿನ ಸಹಿತ ಅವರು ಕೊನೆಯ ಘಳಿಗೆಯಲ್ಲಿ ಬದಲಿಸಿದ ಪ್ಲಾಟ್‍ಫಾರ್ಮ್‍ಗೆ ಓಡಿದೆವು.
ರಾತ್ರಿ ರೈಲಾಗಿದ್ದರೆ ರಿಸರ್ವೇಷನ್ ಜಾರಿಯಲ್ಲಿ ಇರುತ್ತಿತ್ತು. ಈಗ ಇದು ಬೆಳಗಿನ ರೈಲಾಗಿದೆ. ಜನಗಳ ದೊಂಬಿ. ನಮ್ಮ ಸೀಟಿಗಾಗಿ ನಾವೇ ಪರದಾಡಿ ಕೂತೆವು.
ರೈಲು ಅನೇಕ ಪರಿಚಿತ (ಹೆಸರುಗಳು ಮಾತ್ರ!) ಊರುಗಳ ಮೂಲಕ ಹೋಯಿತು.
ಜಾಲಂಧರ್, ಲುಧಿಯಾನ, ತರನ್‍ತಾರನ್ (ಅನೇಕ ಜನ ಇಲ್ಲಿ ಕೊಲೆ ಮಾಡಲ್ಪಟ್ಟಿದ್ದರು ಆ ಸಮಯದಲ್ಲಿ) ಮತ್ತು ಚಕ್ಕಿಬ್ಯಾಂಕ್. ಇದು ಪಾಕಿಸ್ಥಾನದ ಗಡಿಯ ಊರು. ಅಲ್ಲಿ ಸ್ಟೇಷನ್ನಿನಲ್ಲೇ ಸೈನಿಕರು ಮರಳಿನ ಚೀಲಗಳ ಗೋಡೆ ಕಟ್ಟಿಕೊಂಡು ಅದರ ಹಿಂದೆ ಕಾವಲು ಕಾಯುತ್ತಿದ್ದರು.
ಕೊನೆಗೂ ರಾತ್ರಿ ಎಂಟುಗಂಟೆಗೆ ಜಮ್ಮು ರೈಲ್ವೇ ನಿಲ್ದಾಣ ತಲುಪಿದೆವು.
ಆಗಸ್ಟ್ ತಿಂಗಳ ಕೊನೆಯೋ ಸೆಪ್ಟೆಂಬರ್ ಮೊದಲೋ ಇರಬೇಕು. ಅಬ್ಬಬ್ಬಾ... ಮೂಳೆ ಕೊರೆಯುವ ಛಳಿ!
ಏನು ಮಾಡುವುದೋ ತೋಚದೆ ಕಕ್ಕಾಬಿಕ್ಕಿಯಾದೆವು!
Comments
Post a Comment