ಯತಿ ಸ್ವಂತೀ -239


27-08-2018
ನನ್ನ ಅನೇಕ ಟೂರ್‍ಗಳಲ್ಲಿ ಬಲು ಮುಖ್ಯವಾದದ್ದು ನನ್ನ ಕಾಶ್ಮೀರ್ ಟ್ರಿಪ್.
ಹೌದು, ಆಗ ಕಾಶ್ಮೀರಕ್ಕೆ ಜನ ಹೋಗುತ್ತಿದ್ದ ಸಮಯವದು. ಆ ಸಮಯದಲ್ಲಿ ಸ್ವಲ್ಪ ಟೆನ್ಷನ್ ಇದ್ದದ್ದು ಪಂಜಾಬ್‍ನಲ್ಲಿ.
ತರನ್ ತಾರನ್ ಎನ್ನುವ ಊರಲ್ಲಿ ದಿನವೂ ಮಾರಣಹೋಮ ನಡೆಯುತ್ತಿದ್ದ ವಿಷಯವನ್ನು ಪೇಪರ್‍ನಲ್ಲಿ ಓದಿ ತಬ್ಬಿಬ್ಬಾಗುತ್ತಿದ್ದೆ. ಇದೇನು? ಮನುಷ್ಯರ ಜೀವಕ್ಕೆ ಬೆಲೆಯೇ ಇಲ್ಲವೇ?
ನನ್ನ ಇಂಜಿನಿಯರಿಂಗ್ ಗೆಳೆಯರಲ್ಲಿ ಅನೇಕರು ಇಂದಿಗೂ ಸಂಪರ್ಕದಲ್ಲಿದ್ದಾರೆ. ಪದವಿಯ ಕೊನೆ ಕೊನೆಗೆ ಬಂದ ಶಂಕರ ಮತ್ತು ಪ್ರಸನ್ನ ಬಹಳವೇ ಕ್ಲೋಸ್ ಆದರು. ಶಂಕರನೊಂದಿಗೆ ಅವನ ಮನೆಯಲ್ಲಿ ಅನೇಕ ದಿನ ಕಂಬೈಂಡ್ ಸ್ಟಡೀಗೆ ಹೋಗಿದ್ದೇನೆ. ಮಾಧವರಾವ್ ಸರ್ಕಲ್ ಪ್ರಭುದೇವ ಥಿಯೇಟರ್ ಬಳಿ ಇದೆ. ಅಲ್ಲಿಂದ ಅರಮನೆಗೆ ಹೋಗುವ ದಾರಿಯಲ್ಲಿನ ಮೊದಲ ಬಲಗಡೆಯ ರಸ್ತೆ ವೀಣೆ ಶಾಮಣ್ಣ ಸ್ಟ್ರೀಟ್. ಅಲ್ಲಿ ಶಂಕರನ ಮನೆ ಇತ್ತು. ಪ್ರಸನ್ನ ಹೊಯ್ಸಳ ಕರ್ನಾಟಕ ಹಾಸ್ಟೆಲ್‍ನಲ್ಲಿದ್ದ. ಅದು ನಮ್ಮ ಸೋದರಮಾವನ ಮನೆಯಿದ್ದ ಹಾರ್ಡ್‍ವಿಕ್ ಸರ್ಕಲ್‍ನಿಂದ ನೇರ ಮೇಲಕ್ಕೆ ಬಂದು ಬಲಕ್ಕೆ ತಿರುಗಿದರೆ ಅಲ್ಲಿತ್ತು ಹಾಸ್ಟೆಲ್. ಅದೇ ಮುಖ್ಯರಸ್ತೆಯಲ್ಲಿ ಕೆಳಗೆ ಹೋದರೆ ಮಾಧವರಾವ್ ಸರ್ಕಲ್.
ಶಂಕರನ ಅಣ್ಣ, ತಮ್ಮ, ಅಮ್ಮ ಇದ್ದರು. ಅವನ ಅಣ್ಣನ ಮಗ ಗಿರೀಶ್ ಇದ್ದ. ಸ್ಕೂಲಿನಲ್ಲಿ ಓದುತ್ತಿದ್ದ.
ಅದೆಷ್ಟೋ ಸಲ ಶಂಕರನ ತಾಯಿ ನನಗೆ ಊಟ ಹಾಕಿದ್ದಾರೆ. ಅಲ್ಲೇ ಇದ್ದು ಓದುತ್ತಿದ್ದೆ.
ಅತಿ ಪುಟ್ಟ ರಸ್ತೆ ಆ ವೀಣೆ ಶಾಮಣ್ಣ ಸ್ಟ್ರೀಟ್. ರಸ್ತೆಯಲ್ಲಿ ಯಾರಾದರೂ ಮಾತಾಡಿದರೆ ಮನೆಯೊಳಗೇ ಮಾತಾಡಿದಂತಾಗುತ್ತಿತ್ತು!
ನನ್ನ ಮದುವೆ 1987ರಲ್ಲಿ ಆಯಿತು. ಪ್ರಸನ್ನನದು 1984 ಮತ್ತು ಶಂಕರನದು 1985ರಲ್ಲಿ ಆಯಿತು.
ಆಗಸ್ಟ್ 1987ಕ್ಕೆ ಉತ್ತರ ಭಾರತದ ಟ್ರಿಪ್ ಎಂದು ನಿರ್ಧರಿಸಿದೆವು.
ಆಗ ಪ್ರಸನ್ನ ಸಿಂಡಿಕೇಟ್ ಬ್ಯಾಂಕ್‍ನಲ್ಲಿ ಕೆಲಸದಲ್ಲಿದ್ದ. ನಾಸಿಕ್‍ನಲ್ಲಿ ಅವನನ್ನು ಪೋಸ್ಟ್ ಮಾಡಿದ್ದರು.
ಶಂಕರನಿಗೆ ಒಬ್ಬ ಪುಟ್ಟ ಮಗಳಿದ್ದಳು. ಅವಳನ್ನು ಬೆಂಗಳೂರಿನಲ್ಲೇ ಬಿಟ್ಟರು ಸಂಧ್ಯಾ ಮತ್ತು ಶಂಕರ.
ನಾನು, ಉಷಾ, ಸಂಧ್ಯ ಮತ್ತು ಶಂಕರ ಬೆಂಗಳೂರಿನಲ್ಲಿ ರೈಲು ಹತ್ತಿ ನಾಸಿಕ್‍ಗೆ ಹೋದೆವು. ಕೇವಲ ಮೂವತ್ತೊಂದು ವರ್ಷಗಳೇ ಆಗಿವೆ. ಆದರೂ ಕೆಲವು ವಿವರಗಳು ಮಸುಕು ಮಸುಕು.
ಪ್ರಸನ್ನನ ಪತ್ನಿ ರತ್ನ ಮತ್ತು ಅವರ ಒಂದೂವರೆ ವರ್ಷದ ಕೂಸು ಪ್ರಾರ್ಥನಾ ನಾಸಿಕ್‍ನಲ್ಲಿ ನಮ್ಮನ್ನು ಸ್ವಾಗತಿಸಿದರು.
ಫ್ಲ್ಯಾಟ್ ಒಂದರಲ್ಲಿ ಇದ್ದರು ಅವರು. ಮರುದಿನ ಬೆಳಗ್ಗೆ ಬಸ್‍ನಲ್ಲಿ ನಾವು ಔರಂಗಾಬಾದ್‍ಗೆ ಹೋದೆವು. ಅಲ್ಲಿ ಔರಂಗಜೇಬನ ಸಮಾಧಿ ಇದೆ. ಒಂದು ರೀತಿ ತಾಜ್‍ಮಹಲ್‍ನಂತೆಯೇ ಇದೆ ಎನ್ನಿಸುತ್ತದೆ ಅದನ್ನು ನೋಡಿದರೆ.
ಅಲ್ಲಿಂದ ಎಲ್ಲೋರಾ ಗುಹಾಂತರ ದೇವಾಲಯಗಳಿಗೆ ಬಂದೆವು. ಅಲ್ಲೊಂದು ಚಿಕ್ಕ ಜಲಪಾತ ನೋಡಿದ ನೆನಪಿದೆ. ಏಕೆಂದರೆ ಅದರ ಮುಂದೆ ನಾವು ಮೂವರು ಗೆಳೆಯರ ಪಟವಿದೆ.
ಎಲ್ಲೋರಾ ನಿಜಕ್ಕೂ ಅದ್ಭುತ ಶಿಲಾ ಗುಹೆಗಳ ಸಮುಚ್ಛಯ.

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102