ಯತಿ ಸ್ವಂತೀ -238


26-08-2018
ಬಹಳ ಜನ ಗ್ರಾಹಕರು ಬಂದಾಗ ಅವರನ್ನು ಅಲ್ಲಿ ಇಲ್ಲಿ ಕರೆದೊಯ್ದಿದ್ದೇನೆ. ಒಮ್ಮೆ ಒಬ್ಬರು ದೆಹಲಿಯಿಂದ ಬಂದಿದ್ದರು.
ಅವರನ್ನು ಎಂ.ಜಿ. ರಸ್ತೆ ಮೂಲೆಯ ತಾಜ್‍ನಲ್ಲಿ ಇಳಿಸಿ ಸಂಜೆ ಬರುವೆನೆಂದು ಆಫೀಸಿಗೆ ಹೊರಟುಹೋದೆ.
ಸುಮಾರು ಆರುಗಂಟೆಗೆ ತಾಜ್‍ಗೆ ಹೋಗಿ ಅವರು ರೂಮ್‍ನಲ್ಲಿರುವರಾ ಎಂದೆ.
ಇಲ್ಲ ಸರ್. ಅವರು ರೂಮು ಖಾಲಿ ಮಾಡಿಕೊಂಡು ಹೊರಟುಹೋದರು ಎಂದ ರಿಸೆಪ್ಷನಿಸ್ಟ್.
ನನ್ನೆದೆ ಧಸಕ್ಕೆಂದಿತು.
ಈಗಿನಂತೆ ಮೊಬೈಲ್ ಇಲ್ಲದ ಕಾಲವದು. ಹೇಗಪ್ಪಾ ಈಯಪ್ಪನನ್ನು ಸಂಪರ್ಕಿಸುವುದು ಎಂದು ಯೋಚಿಸುತ್ತಾ, ಎಲ್ಲಿಗೆ ಹೋದರು ಅವರು ಎಂದೆ.
ಅವರು ಈ ಹೊಟೇಲ್ ಎದುರಿಗಿರುವ ಹೊಟೇಲ್‍ಗೆ ಶಿಫ್ಟ್ ಆಗಿದ್ದಾರೆ ಎಂದ!
ಸರಿ, ಅಲ್ಲಿಗೆ ಹೋಗಿ ರಿಸೆಪ್ಷನ್‍ನಲ್ಲಿ ವಿಚಾರಿಸಿದರೆ ರೂಮಿನಲ್ಲೇ ಇದ್ದರು!
ಅವರ ರೂಮಿಗೆ ಹೋಗಿ ಬಾಗಿಲು ತಟ್ಟಿ ಒಳಗೆ ಹೋದೆ.
ಸಿದ್ಧವಾಗಿ ಕೂತಿದ್ದರು.
ಯಾಕೆ ಸಾರ್ ಬಂದ್ಬಿಟ್ರಿ ತಾಜ್ ಇಂದ ಅಂದ್ರೆ ನನಗೆ ಅದು ಬಹಳ ದೊಡ್ಡ ಹೊಟೇಲ್. ಬಹಳ ಅನ್‍ಕಂಫರ್ಟಬಲ್ ಅನ್ನಿಸ್ತು ಅಂದುಬಿಡೋದೇ!
ಅವರು ಅವರ ಕಂಪೆನಿಯಲ್ಲಿ ದೊಡ್ಡ ಪದವಿಯಲ್ಲಿದ್ದವರು. ಆದರೂ ಅಷ್ಟು ಸರಳ ಮನುಷ್ಯ!
ಊಟಕ್ಕೆ ಎಲ್ಲಿ ಹೋಗೋಣ ಎಂದೆ.
ನನ್ನದೊಂದು ಆಶೆ ಇದೆ ನಡೆಸಿಕೊಡ್ತೀರಾ ಎಂದರು.
ಹೇಳಿ ಸರ್ ಎಂದೆ.
ನಿಮ್ಮೂರಲ್ಲಿ ಹೊಸ ರಾಘವೇಂದ್ರಸ್ವಾಮಿ ಗುಡಿ ಆಗಿದೆಯಂತಲ್ಲಾ ಜಯನಗರದಲ್ಲಿ? ಅದಕ್ಕೆ ಕರಕೊಂಡು ಹೋಗ್ತೀರಾ ಎಂದರು!
ಅದು ಇದ್ದದ್ದು ನಮ್ಮ ಮನೆಯಿಂದ ಕೇವಲ ಒಂದೂವರೆ ಕಿ.ಮೀ. ದೂರದಲ್ಲಿ.
ಬನ್ನಿ ಸರ್ ಎಂದೆ.
ಜಯನಗರ 11ನೇ ಮೆಯಿನ್ ದಾಟಿ ಜೆ.ಪಿ. ನಗರಕ್ಕೂ ಜಯನಗರಕ್ಕೂ ನಡುವೆ ಇರುವ 44ನೇ ಕ್ರಾಸ್‍ನಲ್ಲಿತ್ತು ಆ ಗುಡಿ.
ಅದನ್ನು ಹೊಸದಾಗಿ ಕಟ್ಟಿದ್ದರು. ಸರಿ, ಅವರೊಂದಿಗೆ ಗುರು ಸಾರ್ವಭೌಮರ ದರ್ಶನವಾಯಿತು.
ಮನೆಗೆ ಅಷ್ಟು ಹತ್ತಿರ ಬಂದರೂ, ಇಡೀ ದಾರಿ ಸವೆಸಿ, ಮತ್ತೆ ಅವರ ಹೊಟೇಲ್ ತಲುಪಿ, ಅವರೊಂದಿಗೆ ಆ ಹೊಟೇಲ್‍ನಲ್ಲೇ ಊಟ ಮಾಡಿ, ಅವರಿಗೆ ವಿದಾಯ ಹೇಳಿ ಮನೆಗೆ ಬಂದು ಡ್ರಾಪ್ ತೆಗೆದುಕೊಂಡು ಡ್ರೈವರನನ್ನು ಆಫೀಸಿಗೆ ಕಳಿಸಿದೆ.
ಹಿಂದೆಲ್ಲಾ ನನಗೆ ಈ ನಾನ್‍ವೆಜ್ ಹೊಟೇಲ್‍ಗಳ ಬಗ್ಗೆ ಗೊತ್ತೇ ಇರಲಿಲ್ಲ. 1983ರಲ್ಲಿ ಇರಬೇಕು. ಮದ್ರಾಸಿನಿಂದ ಒಬ್ಬರು ಶಿಪ್ಪಿಂಗ್ ಇನ್ಸ್‍ಪೆಕ್ಟರ್ ಬಂದರು. ಅವರನ್ನು ನಾನ್‍ವೆಜ್ ಹೊಟೇಲ್‍ಗೆ ಕರೆದೊಯ್ಯಿ ಎಂದಿದ್ದರು ಆಗಿನ ಬಾಸ್.
ನನಗೆ ಹೊರಗಿನಿಂದ ನೋಡಿ ತಿಳಿದಿದ್ದ ಮೆಜೆಸ್ಟಿಕ್ ಬಳಿಯ ಎಲೈಟ್‍ಬಾರ್‍ಗೆ ಕರೆದೊಯ್ದಿದ್ದೆ.
ಅಲ್ಲಿ ಅವರು ಕುಡಿದು, ಕುರಿಯನ್ನೋ, ಕೋಳಿಯನ್ನೋ ಕತ್ತರಿಸಿದ್ದರು.
ಅವರೆದುರು ಕುಳಿತು ಫ್ರೆಷ್‍ಲೈಮ್ ಸೋಡಾ ಕುಡಿದು, ಸಸ್ಯಾಹಾರ ತಿನ್ನಲು ನನಗೆ ಕಷ್ಟವೇನೂ ಆಗಲಿಲ್ಲ. ಅದೇ ಮೊದಲ ಸಲ!
ನಮ್ಮ ಬಾಸ್ ಬಿಲ್‍ಗೆ ಸೈನ್ ಹಾಕುವಾಗ ಬೈಯ್ದರು. ನನಗೇನು ಗೊತ್ತು ಬಾಸ್ ಎಂದೆ.
ನಕ್ಕು, ಹೊಟೇಲ್‍ಗಳ ಹೆಸರು ಹೇಳಿದರು. ಮುಂದಿನ ಸಲ ಹೋಗುವಾಗ ಉಪಯೋಗವಾಯ್ತು!

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102