ಯತಿ ಸ್ವಂತೀ -237
25-08-2018
ನಮ್ಮ ಬಾಸ್ ನನ್ನನ್ನು ಕರೆದು, ‘ನೋಡ್ರೀ. ಸಾಯಿಬಾಬಾ ಎಲ್ಲಿ ಸಿಗ್ತಾರೋ ಗೊತ್ತಿಲ್ಲ. ಸೋ, ಒಂದು ದಿನದ ಬಟ್ಟೆಯೊಂದಿಗೆ ಹೋಗಿ. ಅವರಿಗೆ ಸಂತೋಷವಾದರೆ ಸಾಕು’ ಎಂದರು.
ಸರಿ, ಕ್ಯಾಬ್‍ನಲ್ಲಿ ಗುಪ್ತಾಜೀ ಮತ್ತು ನಾನು ವ್ಹೈಟ್‍ಫೀಲ್ಡ್‍ನಲ್ಲಿನ ಬಾಬಾ ಅವರ ಆಶ್ರಮಕ್ಕೆ ಹೋದೆವು. ಆದರೆ ಅಲ್ಲಿ ನಮಗೆ ನಿರಾಶೆ ಕಾದಿತ್ತು. ಬಾಬಾ ಪುಟ್ಟಪರ್ತಿಯಲ್ಲಿದ್ದಾರೆಂದು ತಿಳಿಯಿತು.
ಈಗ ಆ ಪುಟ್ಟಪರ್ತಿ ಸ್ಟೇಷನ್ ಇಲ್ಲ. ಅದೀಗ ಪ್ರಶಾಂತಿ ನಿಲಯ ಆಗಿದೆ. ಅತ್ಯಂತ ಸ್ವಚ್ಛ ರೈಲ್ವೇ ನಿಲ್ದಾಣವದು.
ಈಗ ಬೆಂಗಳೂರಿನಿಂದ ಭುಬನೇಶ್ವರಕ್ಕೆ ಪ್ರಶಾಂತಿ ಎಕ್ಸ್‍ಪ್ರೆಸ್ ಇದೆ. ಬಹಳ ಸಲ ಇದರಲ್ಲಿ 2009ರಲ್ಲಿ ಪಯಣಿಸಿದ್ದೇನೆ. ಅಲ್ಲಿ ಸಾಕಷ್ಟು ಹೊತ್ತು ರೈಲು ಗಾಡಿ ನಿಲ್ಲುತ್ತದೆ.
ಈಗ ಹಿಂದೆ ಹೋಗೋಣ.
ಕ್ಯಾಬ್ ಈಗ ಅನಂತಪುರದತ್ತ ಧಾವಿಸುತ್ತಿತ್ತು. ಪುಟ್ಟಪರ್ತಿ ತಲುಪಿದಾಗ ಹನ್ನೊಂದು ಗಂಟೆ ಇರಬಹುದು. ಅಲ್ಲಿ ವಿಚಾರಿಸಿದಾಗ ಪ್ರಶಾಂತಿ ನಿಲಯದಲ್ಲಿ ಬಾಬಾ ಇದ್ದಾರೆಂದು ತಿಳಿಯಿತು.
ಹತ್ತಿರ ಹೋದೆವು. ಪ್ರಶಾಂತಿ ನಿಲಯದ ಕಾಂಪೌಂಡು. ಅಲ್ಲಿಂದ ಒಳಗಿನ ದೊಡ್ಡ ಹಾಲ್ ಕಾಣಿಸುತ್ತಿತ್ತು. ಅಲ್ಲಿ ಅನೇಕ ಯುವಕ ಯುವತಿಯರು ಭಜನೆ ಮಾಡುತ್ತಿದ್ದರು.
ಅವರ ನಡುವೆ ಕಾವಿ ಬಣ್ಣದ ನಿಲುವಂಗಿ ತೊಟ್ಟ ಬಾಬಾ ನಡೆದಾಡುತ್ತಿದ್ದರು. ನನಗೆ ಇನ್ನೂ ನೆನಪಿದೆ. ಬಹುಶಃ ನೆಗಡಿ ಆಗಿದ್ದಿರಬೇಕು. ಅವರ ಎಡಗೈಯಲ್ಲಿ ನೆಲದಲ್ಲಿ ಎಳೆಯುತ್ತಿದ್ದ ಅವರ ನಿಲುವಂಗಿಯನ್ನು ಎತ್ತಿ ಹಿಡಿದು, ಬಲಗೈಯಲ್ಲಿ ಒಂದು ಕರವಸ್ತ್ರ ಹಿಡಿದು ಮೂಗು ಸವರಿಕೊಳ್ಳುತ್ತಿದ್ದುದು ಅಷ್ಟು ದೂರಕ್ಕೂ ಕಂಡಿತು.
ಗುಪ್ತಾಜೀ ಕಣ್ಣು ಮುಚ್ಚಿ ಅಲ್ಲಿಂದಲೇ ನಮಸ್ಕರಿಸಿದರು.
ನಂತರ ನನ್ನ ಕಡೆಗೆ ನೋಡಿ, ‘ನಿನಗೆ ಥ್ಯಾಂಕ್ಸ್. ಇದು ನನ್ನ ಜೀವಮಾನದ ಆಸೆಯಾಗಿತ್ತು, ಬಾಬಾರವನ್ನು ಒಮ್ಮೆ ದರ್ಶನ ಮಾಡಬೇಕೆಂಬುದು. ಈಗ ನನ್ನ ಹೆಂಡತಿ ನನ್ನ ಮೇಲೆ ಅಸೂಯೆ ಪಡುತ್ತಾಳೆ. ಅವಳು ಕೂಡ ಬಾಬಾರ ಭಕ್ತೆ’ ಎಂದರು.
ನನಗೆ ಖುಷಿ ಆಯಿತು. ನಂತರ ಬಾಬಾ ಅಲ್ಲಿನ ಒಂದು ಕಾಲೇಜಿಗೆ ಕಾರಿನಲ್ಲಿ ಹೊರಟರು. ನಾವೂ ಆ ಕಾರನ್ನು ಬೆನ್ನತ್ತಿದೆವು.
ಮತ್ತೆ ಬಾಬಾ ಕಾರಿನಿಂದಿಳಿದಾಗ ದರ್ಶನವಾಯಿತು.
ಗುಪ್ತಾಜೀಯ ಆನಂದಕ್ಕೆ ಪಾರವಿರಲಿಲ್ಲ. ಇರೋಣವಾ ಎಂದೆ.
ಇಲ್ಲ ನನ್ನ ಜೀವನ ಸಾರ್ಥಕವಾಯಿತು. ಬೆಂಗಳೂರಿಗೆ ಹೋಗೋಣ ಎಂದರು.
ಪುಟ್ಟಪರ್ತಿಯ ರಸ್ತೆಗಳಲ್ಲಿ ಅನೇಕ ವಿದೇಶೀಯರು ಚಕ್ಕಬಕ್ಕಳ ಹಾಕಿಕೊಂಡು ರಸ್ತೆಯ ಬದಿಯಲ್ಲಿ ಸ್ಟವ್ ಇಟ್ಟುಕೊಂಡು ಅಡುಗೆ ಮಾಡುತ್ತಿದ್ದುದು ಮುಚ್ಚಟೆ ಎನಿಸಿತು.
ಇದಲ್ಲವೇ ಗುರುಭಕ್ತಿ ಮತ್ತು ಗುರುಶಕ್ತಿ ಎನಿಸದಿರಲಿಲ್ಲ.
ಬೆಂಗಳೂರು ತಲುಪಿದಾಗ ಯಾವ ಹೊಟೇಲ್ ಚೆನ್ನಾಗಿದೆ ಎಂದರು. ಅಶೋಕ ಎಂದೆ. (ಈಗಿನ ಲಲತ್ ಅಶೋಕ್)
ಅಲ್ಲಿಗೆ ಹೋದೆವು. ಇಂದಿಗೂ ನೆನಪಿದೆ. ನಾನು ಮೊದಲ ಸಲ ಲೈವ್ ಸಂಗೀತ ಕಛೇರಿ ಕಂಡಿದ್ದು ಅಲ್ಲೇ.
ಒಬ್ಬ ಸಿತಾರ್ ವಾದಕ, ಒಬ್ಬ ತಬಲಾ, ಒಬ್ಬ ತಾನ್‍ಪುರ.
ಅನೇಕ ರಾಗಗಳನ್ನು ನುಡಿಸುತ್ತಿದ್ದಂತೆ ಇಬ್ಬರೂ ಸಸ್ಯಾಹಾರ ಸೇವಿಸಿದೆವು ಎಂಬಲ್ಲಿಗೆ ಗುಪ್ತಾಜೀ ಪುರಾಣ ಸಂಪೂರ್ಣಂ.
Comments
Post a Comment