ಯತಿ ಸ್ವಂತೀ -236
24-08-2018
ಮರುದಿನ ಸಂಜೆ ನನಗೆ ರೈಲು ಮದರಾಸಿಗೆ ಇತ್ತು.
ಬೆಳಗ್ಗೆ ಗಂಗೆಯ ದರುಶನಕೆ ಹೊರಟೆ.
ನೀರಲ್ಲಿ ಮುಳುಗಬಾರದು ಹೊಸದಾಗಿ ಮದ್ವಿ ಆದೋರು ಅಂತ ಯಾರೋ ಅಂದಿದ್ರಲ್ಲಾ, ಅದಕ್ಕೇ ಸುಮ್ಮನೆ ದರ್ಶನಕ್ಕೆ ಹೋದೆ.
ಎಲ್ಲೋ ಒಂದು ಕಡೆ ಗಂಗಾಘಾಟ್ ಗಂಗಾಘಾಟ್ ಎಂದು ಆಟೋದವನು ಕೂಗಿಕೊಳ್ಳುತ್ತಿದ್ದ. ಸರಿ, ಹೋಗಿ ಕೂತೆ. ಹೊರಡಲಿಲ್ಲ ಅವ.
ನನ್ನ ಆ ಕಡೆ ಈ ಕಡೆ ಇಬ್ಬರು. ಕಾಲ ಬಳಿ ಇಬ್ಬರು. ಡ್ರೈವರನ ಪಕ್ಕ ಇಬ್ಬರು ಕುಳಿತ ಮೇಲೆ ಹೊರಟಿತು ಆಟೋ.
ಆಗೆಲ್ಲಾ ಎರಡು ರೂಪಾಯಿ ಬಾಡಿಗೆ ಎಂಬ ನೆನಪು.
ಅದೋ, ನಮಾಮಿ ಗಂಗೇ ಪ್ರಸೀದ ಪ್ರಸೀದ ಎಂದು ಇಳಿದೆ.
ಹಿಂದೆಯೇ ಬಂದನೊಬ್ಬ ಪಂಡಾ. ಈ ಪಂಡಾ ಎನ್ನುವ ಪೂಜಾರಿಗಳು ಶ್ರಾದ್ಧ ಮಾಡಿಸುವುದರಲ್ಲಿ ನಿಪುಣರು.
ಯಾರ ಶ್ರಾದ್ಧ ಮಾಡಲಿ ಎಂದು ಒಬ್ಬ ನನ್ನನ್ನು ಪೀಡಿಸುತ್ತಾ ದಾರಿಯುದ್ದಕ್ಕೂ ಬಂದ. ಆಗ ನನ್ನ ತಾಯಿ ತಂದೆ ಇಬ್ಬರೂ ಬದುಕಿದ್ದರು. ’ನಾನು ಯಾರ ಶ್ರಾದ್ಧ ಕೂಡ ಮಾಡಬೇಕಿಲ್ಲ’ ಎಂದೆ. ಅವನು ಕೇಳಬೇಕಲ್ಲ!
ಕೊನೆಗೆ ರೋಸಿ ಹೋಗಿ ನನ್ನದೇ ಮಾಡು ಬಾ ಎಂದೆ ನನಗೆ ತಿಳಿದ ಹಿಂದಿಯಲ್ಲಿ. ಅರೆ ಸಾಬ್ ಎಂದು ಕಣ್ಣುಗಳನ್ನು ಗರಗರನೆ ತಿರುಗಿಸಿ ನನ್ನನ್ನು ಬಿಟ್ಟು ಬೇರೆಯವರ ಬಳಿ ಹೋದ!
ದಡಕ್ಕೆ ಬಂದು ಕೊಂಚ ನೀರು ತೆಗೆದುಕೊಂಡು ತಲೆಗೆ ಪ್ರೋಕ್ಷಣೆ ಮಾಡಿಕೊಂಡೆ.
ನಂತರ ಅಲ್ಲಿಯೇ ಹತ್ತಿರದ ಮಾರುಕಟ್ಟೆಗೆ ಹೋದೆ. ನನಗೆ ಮನೆಯಲ್ಲಿ ನವಪತ್ನಿ. ನನ್ನ ಚಿಕ್ಕ ತಂಗಿಗೆ ಇನ್ನೆರಡು ತಿಂಗಳಲ್ಲಿ ಮದುವೆ ಇತ್ತು.
ಸರಿ ಇಬ್ಬರಿಗೂ ಒಂದೊಂದು ಸೀರೆ ಕೊಂಡೆ.
ಅಂದು ರಾತ್ರಿ ಮದರಾಸಿಗೆ ರೈಲು ಹತ್ತಿದೆ. ಅಲ್ಲಿಂದ ಬೆಂಗಳೂರು.
ಅಂತೂ ಮೊದಲ ಟೂರೇ ದೊಡ್ಡದು!
ದಿನಗಳು ಯಾರಿಗೂ ಕಾಯದೇ ಓಡುತ್ತಿದ್ದವು.
ನನ್ನ ಚಿಕ್ಕ ತಂಗಿಯ ಮದುವೆ!
1987ರ ಜೂನ್ ತಿಂಗಳಲ್ಲಿ.
ಅಯ್ಯನಿಗೆ ಮೈಯಲ್ಲಿ ಚೆನ್ನಾಗಿರಲಿಲ್ಲ. ಅವರಿಗೆ ಮಗಳನ್ನು ಮಡಿಲಲ್ಲಿ ಕೂರಿಸಿಕೊಳ್ಳಲು ಕೂಡ ಶಕ್ತಿ ಇರಲಿಲ್ಲ.
ಆಗ ನಾನು ಉಷಾ ಸಿದ್ಧರಾದೆವು. ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ. ನಾನು ಕಚ್ಚೆ ಪಂಚೆ, ಆಕೆ ಕಚ್ಚೆ ಸೀರೆ.
ನಾವೇ ನನ್ನ ಚಿಕ್ಕ ತಂಗಿಯ ಕನ್ಯಾದಾನ ಮಾಡಿದೆವು. ಮದುವೆಯಾದ ನಾಲ್ಕು ತಿಂಗಳಿಗೇ ಈ ಭಾಗ್ಯ!
ಆ ಸಮಯದಲ್ಲಿ ಮಿಝೋರಾಂನ ರಾಜಧಾನಿ ಐಝಲ್ (ಐಜ್ವಾಲ್ ಅಲ್ಲವಂತೆ ಅದರ ಉಚ್ಚಾರಣೆ!)ನಿಂದ ಒಬ್ಬರು ಬಂದರು. ಅವರ ರಾಜ್ಯದಲ್ಲಿ ನಮ್ಮ ಕಂಪೆನಿಯ ಜನರೇಟರುಗಳು ಮಾತ್ರವೇ ವಿದ್ಯುಚ್ಛಕ್ತಿ ಸರಬರಾಜು ಮಾಡಲಿದ್ದವು.
ಆಗಿನ ಮುಖ್ಯಮಂತ್ರಿಯ ಕಾರ್ಯದರ್ಶಿ ಬಂದಾತ. ಆತನ ಹೆಸರು ಗುಪ್ತಾ ಎಂದು ಇಟ್ಟುಕೊಳ್ಳೋಣ.
ಅತಿಥಿ ಸತ್ಕಾರಕ್ಕೆ ಎತ್ತಿದ ಕೈ ನಮ್ಮ ಕಂಪೆನಿ. ಮಾತುಕತೆ ಆದ ಮೇಲೆ ಗುಪ್ತಾಜೀಯವರನ್ನು ನಿಮಗೇನು ಬೇಕು ಎಂದರು ನಮ್ಮ ಬಾಸ್.
ನಾನು ಸಾಯಿಬಾಬಾ ಅವರನ್ನು ನೋಡಬೇಕು ಎಂದರಾತ.
Comments
Post a Comment