ಯತಿ ಸ್ವಂತೀ -235


23-08-2018
ಅಲ್ಲಿನ ಸಾರ್ವಜನಿಕರನ್ನು ಸಾಗಿಸುವ ವಾಹನಗಳಲ್ಲಿ ಒಂದು ವಿಚಿತ್ರ ಕಂಡೆ. ನಮ್ಮ ಹೊಟೇಲ್‍ನಿಂದ ಗೋಲ್‍ಛೋರಾ ಅನ್ನೋ ಜಾಗದ ವರೆಗೆ ಒಂದು ಟೆಂಪೋದಲ್ಲಿ ಹೋಗಬೇಕು. ಅಲ್ಲಿ ಇಡೀ ಜನರ ಗುಂಪನ್ನು ಇಳಿಸಿ, ಮತ್ತೊಂದು ಟೆಂಪೋಗೆ ಹತ್ತಿಸುತ್ತಾರೆ. ಇಲ್ಲಿ ವರೆಗೆ ಬರೋಕ್ಕೆ ಇವನಿಗೆ ಬಾಡಿಗೆ ಕೊಟ್ಟೆವು. ಮುಂದಕ್ಕೆ ಅವನಿಗೆ ಕೊಡಬೇಕು. ಅಂದರೆ ಇಬ್ಬರಿಗೂ ಹೊಟ್ಟೆ ತುಂಬುತ್ತದೆ. ಸಾಮರಸ್ಯದ ಬದುಕು!
ಅಲ್ಲಿಯೇ ಒಂದು ಕೃಷ್ಣನ ಗುಡಿ ಇದೆ. ಬಹಳ ಮುದ್ದಾದ ಕೃಷ್ಣ. ಇದನ್ನು ನೋಡಿ ಎಷ್ಟೋ ವರ್ಷಗಳಾಗಿದ್ದರೂ ನನ್ನ ಕಾದಂಬರಿ ಚಿರಸ್ಮಿತದಲ್ಲಿ ಈ ಗುಡಿಯನ್ನು ಬಳಸಿದೆ. ನಾಯಕಿ ಇಲ್ಲಿಗೆ ಒಂಟಿಯಾಗಿ ಬಂದಾಗ ಕಿಷನ್ ಎಂಬ ಹುಡುಗ ಅವಳಿಗೆ ಜೊತೆಯಾಗಿ ಅವಳನ್ನು ಗಮ್ಯಕ್ಕೆ ತಲುಪಿಸುತ್ತಾನೆ.
ನನಗೆ ಲಕ್ನೋದಲ್ಲಿ ಕೆಲಸವಿತ್ತು. ಎಚ್.ಎ.ಎಲ್‍ಗೆ ಹೋಗಬೇಕಿತ್ತು. ಅಲ್ಲಿಂದ ಬಸ್ ಹತ್ತಿ ಎಚ್.ಎ.ಎಲ್ ತಲುಪಿದೆವು. ಲಕ್ನೋ ಕಾನ್‍ಪೂರ್ ನಡುವೆ ಹೆಚ್ಚು ದೂರವಿರಲಿಲ್ಲವೆಂದು ನೆನಪು.
ಅಲ್ಲಿ ಕೆಲಸ ಮುಗಿಸಿ ಹೊರಗೆ ಬಂದಾಗ ಸುಮಾರು ಒಂದೂವರೆ ಗಂಟೆ. ಸೂರ್ಯ ಪ್ರಖರವಾಗಿ ಉರಿಯುತ್ತಿದ್ದ.
ನಡೆದು ಬರುತ್ತಿದ್ದೆವು.
ನಾನು ಇದ್ದಕ್ಕಿದ್ದಂತೆ ‘ಬ್ರಿಜ್, ನನಗ್ಯಾಕೋ ಕಣ್ಣು ಕಾಣಿಸ್ತಿಲ್ಲ’ ಎಂದೆ.
ಬೆಚ್ಚಿದ ಅವನು.
ತಕ್ಷಣವೇ ಹತ್ತಿರವೇ ಇದ್ದ ಹೊಟೇಲ್‍ಗೆ ಎಳೆದೊಯ್ದ. ನೀರು ಕುಡಿ ಎಂದ.
ಕೆಲವು ನಿಮಿಷಗಳ ಕಾಲ ಸುಧಾರಿಸಿಕೊಂಡ ಮೇಲೆ ಕಣ್ಣು ಕಾಣಿಸತೊಡಗಿತು.
ಏನಾಗಿದೆ ನನಗೆ? ಎಂದೆ.
‘ನಿನಗೆ ಬಹುಶಃ ಸನ್‍ಸ್ಟ್ರೋಕ್ ಆಗಿರಬೇಕು. ಇಲ್ಲಿನ ಬಿಸಿಗಾಳಿಗೆ ಅನೇಕರು ಪ್ರಾಣ ಕಳೆದುಕೊಳ್ಳುವುದೂ ಉಂಟು’ ಎಂದ.
ಅಬ್ಬಾ ಎನಿಸಿತಾಗ ನನಗೆ. ಅನೇಕ ಸಾವುಗಳು ಇಲ್ಲಿನ ಬಿಸಿಲಿನ ಝಳದಿಂದ ಆಗಿದೆ ಎಂದು ಪತ್ರಿಕೆಗಳಲ್ಲಿ ಓದಿದ ನೆನಪಾಯಿತು.
ಎಂತಹ ರೀತಿ ಸಾಯೋಕ್ಕೆ, ಅಲ್ಲವೇ?
ಲಕ್ನೋದಿಂದ ಮತ್ತೆ ಮರುದಿನ ಬೆಳಗ್ಗೆ ವಾರಾಣಸಿಗೆ ಹೊರಟೆ. ನನಗೆ ಅಲ್ಲಿಂದ ಬೆಂಗಳೂರಿಗೆ (ವಯಾ ಮದ್ರಾಸು) ಟಿಕೆಟ್ ರಿಜರ್ವ್ ಆಗಿತ್ತು.
ಬೆಳಗ್ಗೆ ಎಂಟಕ್ಕೆ ಟ್ರೈನು. ನನ್ನ ತೆಲುಗು ಕಾದಂಬರಿಗಳೇ ನನಗೆ ಸಹಾಯ ಮಾಡಿದವು. ಆಗಾಗ ಕೆಲವರು ನನ್ನನ್ನು ಮಾತನಾಡಿಸುತ್ತಿದ್ದರು. ಯಾರೋ ಅಂದರು, ‘ನಿನ್ನ ಮದುವೆ ಆಗಿ ಎರಡು ತಿಂಗಳು ಅಂತೀಯಾ. ನೀನು ಗಂಗೆಯಲ್ಲಿ ಮುಳುಗಿ ಸ್ನಾನ ಮಾಡಬಾರದು’ ಎಂದರು.
ಏನು ಮಾಡುವುದು? ಎಂದುಕೊಂಡೆ.
ಅಮೇಠಿ, ರಾಯ್‍ಬರೇಲಿ (ಈ ಊರುಗಳ ಬಗೆಗೆ ನಿಮಗೇನು ನೆನಪಿಗೆ ಬರುತ್ತಿದೆ?) ಮುಂತಾದ ಊರುಗಳನ್ನು ದಾಟಿ ಸಂಜೆ ಐದಕ್ಕೆ ವಾರಾಣಸಿ ತಲುಪಿದೆ.
ಅಬ್ಬಾ... ಬೋರ್ ಹೊಡೆದ ಪಯಣವದು.
ಒಬ್ಬ ರಿಕ್ಷಾದವನು ‘ಕಿಧರ್ ಜಾನಾ ಸಾಬ್?’ ಎಂದ.
ಕಿಶೋರ್‍ಕುಮಾರನ ಸ್ಟೈಲಿನಲ್ಲಿ ಅವನದೇ ಹಾಡು, ಮೈತೋ ಚಲಾ ಕಿಧರ್ ಚಲೇ ರಾಸ್ತಾ ಮುಝೆ ಕ್ಯಾ ಖಬರ್ ಹೈ ಕಹಾಂ ಮೇರಿ ಮಂಝಿಲ್ ಎಂದು ಹಾಡಿದ್ದೆ. ಪಾಗಲ್ ಆದ್ಮಿ ಎಂದು ಬೈದುಕೊಂಡ ಗಟ್ಟಿಯಾಗಿಯೇ ಆ ರಿಕ್ಷಾವಾಲ.
ಸ್ವಲ್ಪಕ್ಕೆ ಸ್ವಲ್ಪ ನನ್ನ ಬೋರ್‍ಡಂ ಕಳೆದಿತ್ತು ಈ ತರಲೆಯಿಂದ!

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102