ಯತಿ ಸ್ವಂತೀ -234


22-08-2018
ಯಾರೋ ಒಬ್ಬ ಕುಡುಕ ಆ ಎರಡು ಟಾಯ್ಲೆಟ್‍ಗಳ ನಡುವಿನ ಸಣ್ಣ ಓಣಿಯಲ್ಲಿ ಮಲಗಿದ್ದ. ನನ್ನ ಸೂಟ್‍ಕೇಸ್ ಮೇಲೆ ಕೂತು, ಏರ್‍ಬ್ಯಾಗ್ ತೂಗು ಹಾಕಿಕೊಂಡು ಬಹಳ ಹೊತ್ತು ಒಂದು ಕಾಲಿನ ಮೇಲೆ ನಿಲ್ಲುವ ಸರ್ಕಸ್ ಮಾಡಿದ್ದೆ. ಸ್ವಲ್ಪ ಹೊತ್ತು ಈ ಕಾಲು, ಸ್ವಲ್ಪ ಹೊತ್ತು ಮತ್ತೊಂದು ಕಾಲು.
ಕೊನೆಗೆ ಯಾಕೋ ನಿದ್ರೆ ತಡೆಯಲಾಗಲಿಲ್ಲ. ಆ ಕುಡುಕನ ಪಕ್ಕದಲ್ಲಿ ಮಲಗಿಕೊಂಡೆ. ಯಾರೋ ಒಬ್ಬ ಹುಡುಗ ಕಾನ್ಪುರ ದಾಟಿ ಹೋಗುವೆನೆಂದಿದ್ದ. ಅವನನ್ನು ನಂಬಿ, ಅವನಿಗೆ ತನ್ನ ಸೂಟ್‍ಕೇಸ್ ಮೇಲೆ ಕೂರಲು ಬಿಟ್ಟು ನಾನು ಮಲಗಿಬಿಟ್ಟೆ. ಸುಮಾರು ಎರಡೂವರೆ ಹೊತ್ತಿಗೆ ಎಚ್ಚರವಾಯಿತು. ನನ್ನ ಲಗ್ಗೇಜು ಅಲ್ಲೇ ಇತ್ತು! ನಿಜಕ್ಕೂ ಆ ಹುಡುಗ ಇನ್ನೂ ಮುಂದಿನ ಊರಿಗೆ ಹೋಗುವವನೇ!
ಕಿಟಕಿಯಿಂದ ದಿಟ್ಟಿಸಿದೆ. ದೂರದಲ್ಲಿ ದೀಪಗಳು ಕಾಣಲಾರಂಭಿಸಿದವು. ಸಾಕಷ್ಟು ದೊಡ್ಡ ದೊಡ್ಡ ದೀಪಗಳೇ. ಹೆಚ್ಚು ಹೆಚ್ಚು ದೀಪಗಳೇ. ಆಹಾ, ಇದೊಂದು ದೊಡ್ಡ ಊರು. 3 ಗಂಟೆಗೆ ಬರುವುದು ಕಾನ್ಪುರ. ಹಾಗಾದರೆ ಇದೇ ಕಾನ್ಪುರ ಎಂದು ಇಳಿಯಲು ಸಿದ್ಧನಾದೆ.
ಹೌದು, ಅದು ಕಾನ್‍ಪೂರ್ ಸ್ಟೇಷನ್.
ಇಳಿದು ಅಲ್ಲಿಯೇ ಇದ್ದ ಬೆಂಚೊಂದರ ಮೇಲೆ ಕುಳಿತೆ ಕಾಲುಗಳ ನಡುವೆ ಲಗ್ಗೇಜುಗಳನ್ನು ಇಟ್ಟುಕೊಂಡು ಹಾಗೆಯೇ ನಿದ್ರಿಸಿಬಿಟ್ಟೆ.
ಸುಮಾರು ಐದೂವರೆ ಹೊತ್ತಿಗೆ ಕಣ್ಬಿಟ್ಟೆ. ಬೆಳಕು ಬಂದಿತ್ತು. ಹೊರಗೆ ಬಂದೆ.
ಒಬ್ಬ ಮುದುಕ ಸೈಕಲ್ ರಿಕ್ಷಾ ಮೇಲೆ ಕುಳಿತಿದ್ದವನು ಎಲ್ಲಿಗೆ ಹೋಗ್ಬೇಕು ಸಾಬ್? ಎಂದ.
ಯಾವ್ದಾದ್ರೂ ಹೊಟೇಲ್ ಎಂದೆ.
ಬನ್ನಿ ಕೂತ್ಕೊಳ್ಳಿ. ಹತ್ತೋ ಹದಿನೈದೋ ಹೇಳಿದ. ಹೂಂ ಎಂದು ಹತ್ತಿದೆ.
ತೂಕಡಿಸುತ್ತಲೇ ಅವನ ರಿಕ್ಷಾದಲ್ಲಿ ಹೋದೆ. ಸಾಕಷ್ಟು ದೂರ ಹೋಗಿ ನಂತರ ಹೊಟೇಲ್ ಒಂದರ ಮುಂದೆ ನಿಲ್ಲಿಸಿದ.
ಹೊಟೇಲ್ ರೂಂ ಪಡೆದು ಮಲಗಿಬಿಟ್ಟೆ.
ಸುಮಾರು ಒಂಬತ್ತರ ವೇಳೆಗೆ ಎಚ್ಚರವಾಯಿತು. ನನಗೆ ಯಾವುದೇ ಅರ್ಜೆಂಟ್ ಕೆಲಸವಿರಲಿಲ್ಲ. ನನ್ನ ಸಹೋದ್ಯೋಗಿ ಅವನ ಮನೆಯಿಂದ ಬರಬೇಕಿತ್ತು.
ಸರಿ, ಎದ್ದು ಮುಖ ತೊಳೆದು ಹೊರಗೆ ಗಲಾಟೆ ಆಗುತ್ತಿದ್ದುದರಿಂದ ಬಂದೆ. ಅಲ್ಲಿದ್ದ ವಾಹನ ಸಂದಣಿಯ ಸದ್ದದು.
ಸುತ್ತಲೂ ಕಣ್ಣಾಡಿಸಿ ನಂತರ ಬೆಚ್ಚಿಬಿದ್ದೆ.
ಕಾನ್‍ಪೂರ್ ರೈಲ್ವೇ ಸ್ಟೇಷನ್ ಹೊಟೇಲ್ ಎದುರಿಗೇ ನಗುತ್ತಾ ಅಣಕಿಸುತ್ತಾ ನಿಂತಿತ್ತು!
ಅಬ್ಬಾ, ಭಲೇ ಕಿಲಾಡಿ ಮುದುಕಾ... ನನಗೇ ಚಳ್ಳೇಹಣ್ಣು! ಹುಂ ಇರಲಿ, ಉದರ ನಿಮಿತ್ತಂ ಬಹುಕೃತ ವೇಷಂ ಮತ್ತು ವ್ಯಾಪಾರಂ ದ್ರೋಹ ಚಿಂತನಂ ಪದಗುಚ್ಛಗಳ ನೆನಪಾಯಿತು.
ಬ್ರಿಜ್‍ಮೋಹನ್ ಮೆಹ್ರೋತ್ರಾ ಬಂದ. ಯಂಗ್ ಫೆಲೋ. ಲಕ್ಷಣದ ಮುಖ. ಅದಕ್ಕಿಂತ ಬಹಳ ಡೀಸೆಂಟ್ ವರ್ತನೆ.
ಇಬ್ಬರೂ ಹೊರಬಂದೆವು. ಟ್ರಾಫಿಕ್ ಅಂತೂ ವಿಶಿಷ್ಟವಾದದ್ದು. ಈಗ ಮೀಡಿಯನ್ ಈ ಕಡೆ ಬಹಳ ರಷ್ ಇದ್ದರೆ ಮುಲಾಜಿಲ್ಲದೇ ರಸ್ತೆಯ ಆ ಬದಿಗೆ ಚಲಿಸಿ, ಉಲ್ಟಾ ರಸ್ತೆಯಲ್ಲಿ ಪಯಣಿಸುವ ಪ್ರಯಾಣಿಕರು ಬಹಳ ಜನವಿದ್ದರು.
ಫ್ಲೈ ಓವರ್ ಕೆಳಗೆ ನಮ್ಮೂರಲ್ಲಿ ಸರ್ವಿಸ್ ರಸ್ತೆಯಲ್ಲಿ ಎರಡೂ ಕಡೆ ನುಗ್ಗುವರಲ್ಲಾ, ಹಾಗೆ!

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102