ಯತಿ ಸ್ವಂತೀ -233
21-08-2018
ಆ ಲಾರಿ ಕೂಡ ಕೇವಲ ಅತ್ತಿಬೆಲೆವರೆಗೆ ಹೋಗುತ್ತಿತ್ತು. ಅಲ್ಲಿ ಇಳಿದು ಸಿಟಿ ಮಾರ್ಕೆಟ್ ಹೋಗುವ ಬಸ್ ಹತ್ತಿ ಮಾರ್ಕೆಟ್ ತಲುಪಿ, ಅಲ್ಲಿಂದ ಜಯನಗರಕ್ಕೆ ಹೋಗುವ ಬಸ್ ಹತ್ತಿ... ಉಫ್! ಎಂತಹ ವಿಶಿಷ್ಟ ಅನಗತ್ಯ ಪ್ರಯಾಣ!
ಯಾಕೆ? ಯಾರೋ ಕಿಡಿಗೇಡಿಗಳು ನಮ್ಮ ಖ್ಯಾತ ನಟನನ್ನ ನಡೆಸಿಕೊಂಡ ರೀತಿ. ಪಾಪ... ಆ ನಟರು ಕೂಡ ಈ ರೀತಿ ಪಾಡು ಪಟ್ಟ ಅನೇಕಾನೇಕ ಪಯಣಿಗರ ಬಗೆಗೆ ತಿಳಿದು ನೊಂದುಕೊಂಡಿದ್ದಾರು.
ಇನ್ನೂ ಅನೇಕ ಸಲ ನಾನು ಮದ್ರಾಸಿಗೆ ಹೋಗಿದ್ದುಂಟು.
ಹಿಂದೊಮ್ಮೆ ಓದಿ ಕಲಿತಿದ್ದ ತಮಿಳು ಅಕ್ಷರಗಳು ಈಗೆಲ್ಲಾ ಅಲ್ಲಿ ಕೆಲಸಕ್ಕೆ ಬಂದಿದ್ದವು.
ಈಗ ಪ್ರಸ್ತುತಕ್ಕೆ ಹಿಂದಿರುಗೋಣ.
ಸಾರನಾಥಕ್ಕೆ ನನ್ನೊಂದಿಗೆ ಹೊರಟ ಯುವಕನ ಹೆಸರು ಸುಭಾಷ್ ಕುಮಾರ್ ಶರ್ಮ.
ಅವನು ಇಂದೋರ್ ಅಥವಾ ಭೋಪಾಲದವನು. ಈಗ ಸರಿಯಾಗಿ ನೆನಪಿಲ್ಲ. ನನಗೆ ಮದುವೆ ಆಗಿ ಎರಡು ತಿಂಗಳುಗಳಾಗಿದ್ದವು. ಅವನಿಗೆ ಇನ್ನೆರಡು ತಿಂಗಳುಗಳಿಗೆ ಮದುವೆಯಾಗಲಿತ್ತು.
ಸಾರನಾಥದಲ್ಲಿ ಭಗವಾನ್ ಬುದ್ಧನ ಸ್ತೂಪವಿದೆ. ಅದನ್ನು ನೋಡಿ, ಬಾಯಿ ತುಂಬಾ ಹರಟುತ್ತಾ ಕಾಲ ಕಳೆದೆವು.
ಭಾಷೆ ಇಂಗ್ಲೀಷ್ ಮತ್ತು ಹಿಂದೀ.
ಒಬ್ಬರ ಪಟ ಮತ್ತೊಬ್ಬರು ತೆಗೆದೆವು. ಆತನ ಬಳಿ ಕ್ಯಾಮೆರಾ ಇತ್ತು. ಆತ ತೆಗೆದ ಹಣೆಗೆ ಕುಂಕುಮ ಹಚ್ಚಿಕೊಂಡ ನನ್ನ ಪಟವೊಂದು ಆ ಪಯಣದ ನೆನಪು ಕೊಡುತ್ತದೆ. ಬಹುಶಃ ಅವನ ಮದುವೆ ಆಮಂತ್ರಣ ಪತ್ರಿಕೆ ಬರುವವರೆಗೂ ನಾವು ಪರಸ್ಪರ ಪತ್ರ ವ್ಯವಹಾರ ನಡೆಸಿದೆವೆಂದು ನೆನಪು.
ಹೀಗೇ ರೈಲಿನಲ್ಲಿ ಪರಿಚಯವಾದ ಬಹಳ ಜನ ಗೆಳೆಯರು. ಬಂದರು ಹೋದರು. ಕೆಲವರು ಬೇಗ. ಕೆಲವರು ಕೆಲ ಕಾಲ ಉಳಿದುಕೊಂಡರು.
ಮತ್ತೆ ಕೆಲವೇ ಕೆಲವರು ಇಂದಿಗೂ ಜೊತೆಗಿದ್ದಾರೆ.
ಮರುದಿನ ರಾತ್ರಿ ನನಗೆ ವಾರಾಣಸಿಯಿಂದ ಕಾನ್ಪುರಕ್ಕೆ ರೈಲು. ರಾಜಧಾನಿ ಅಂದುಕೊಂಡಿದ್ದೇನೆ. ಬೇರಾವುದೋ ಕೂಡ ಇರಬಹುದು.
ರಾತ್ರಿ ಒಂಬತ್ತಕ್ಕೆ ರೈಲು.
ನಮ್ಮ ಅಪ್ಪ ರೈಲ್ವೇಯಲ್ಲಿದ್ದರು. ನಮಗೆ ಫ್ರೀ ಪಾಸ್ ಮತ್ತು ವಿದ್ಯಾರ್ಥಿಯಾಗಿದ್ದಾಗ ಪಿಟಿಓ (ಪ್ರಿವಿಲೇಜ್ ಟಿಕೆಟ್ ಆರ್ಡರ್) ಕೊಟ್ಟು ರೈಲಿನಲ್ಲಿ ಹೋಗಿ ಅಭ್ಯಾಸ. ಲಂಚ ಕೊಡುವುದು ತಿಳಿಯದು.
ಅನ್ ರಿಜರ್ವ್‌ಡ್ ಟಿಕೆಟ್ ನನ್ನ ಬಳಿ ಇದ್ದದ್ದು.
ಟಿ.ಟಿ.ಈ. ಯನ್ನು ನನ್ನ ಬೋಗಿ ಎಲ್ಲಿ ಬರುವುದೆಂದು ಕೇಳಿದೆ. ಕೊನೆಯಲ್ಲಿ ಕೈ ತೋರಿಸಿದ.
ರೈಲು ಬಂದಿತು. ನನ್ನ ಬಳಿ ಒಂದು ಚಿಕ್ಕ ಸೂಟುಕೇಸು ಮತ್ತು ಒಂದು ಏರ್ ಬ್ಯಾಗು ಇದ್ದವು.
ನಾನು ಕಷ್ಟ ಪಡದೇನೇ ಬೋಗಿಯೊಳಗೆ ದೂಡಲ್ಪಟ್ಟಿದ್ದೆ.
ಬಾಗಿಲಿನಲ್ಲಿಯೇ ಜಾಗ ಸಿಕ್ಕಿತು ನಿಂತುಕೊಳ್ಳಲು. ಅದು ಅನ್ ರಿಜರ್ವ್‌ಡ್ ಬೋಗಿ ಆಗಿದ್ದರಿಂದ ಅದಕ್ಕೆ ವೆಸ್ಟಿಬ್ಯೂಲ್ ಇರಲಿಲ್ಲ.
ಎರಡು ಟಾಯ್ಲೆಟ್ಟುಗಳು ಎದುರುಬದುರು.
ಜನ ಹೇಗೆ ಪ್ಯಾಕ್ ಆಗಿದ್ದರೆಂದರೆ ಹಾಗೆ ಹೀಗೆ ಅಲುಗಾಡಲೂ ಸಾಧ್ಯವಾಗದಷ್ಟು!
ರೈಲು ನಡುರಾತ್ರಿ ಮೂರು ಗಂಟೆಗೆ ಕಾನ್ಪುರ ತಲುಪಲಿತ್ತು. ಹೇಗೆ ಸ್ಟೇಷನ್ ಬಂದಾಗ ಕಂಡುಹಿಡಿಯುವುದು?
Comments
Post a Comment