ಯತಿ ಸ್ವಂತೀ -232


20-08-2018
“ಛೇ... ಈವತ್ತು ಏನು ಮಾಡೋದೂ ಅಂತಾನೇ ತೋಚ್ತಿಲ್ಲ!” ಎಂದ ಅಲ್ಲಿದ್ದ ಸೌಮ್ಯಮುಖದ ಯುವಕ. 
ನಾನೂ ಅದನ್ನೇ ಹೇಳಿದೆ.
ಆ ರೌಡಿಯಂತಿದ್ದ ಯುವಕ, “ಅದಕ್ಯಾಕೆ ಅಷ್ಟು ಆಲೋಚನೆ ಮಾಡ್ತೀರಿ? ಹತ್ತಿರದಲ್ಲೇ ಸಾರನಾಥ್ ಇದೆ. ಅಲ್ಲಿಗೆ ಹೋಗಿ ಬನ್ನಿ” ಎಂದ.
ಹಾಗೆ ನೋಡಿ, ನನಗೆ ಗುರುತೂ ಪರಿಚಯ ಏನೂ ಇಲ್ಲದ ಒಬ್ಬ ಯುವಕನೊಂದಿಗೆ ಎರಡನೇ ಸಲ ನಾನು ಟೂರ್ ಹೊರಟದ್ದು!
ಹಿಂದೊಮ್ಮೆ ನಾನು ಈ ರೀತಿ ಮಾಡಿದ್ದುಂಟು.
ನಾನು ಒಮ್ಮೆ ಚೆನ್ನೈಗೆ ಹೊರಟೆ. ಚೆನ್ನೈ ಎಂದರೆ ಬಸ್ಸೇ ಗತಿ ಆಗೆಲ್ಲ. ಹೆಚ್ಚು ರೈಲುಗಳು ಇರಲಿಲ್ಲ. ಅದೂ ಅಲ್ಲದೆ ನಮಗೆ ಚೆನ್ನೈಗೆ ಹೋಗೆಂದು ಹೇಳುತ್ತಿದ್ದುದು ಅತ್ಯಂತ ಕೊನೆಯ ಕ್ಷಣಗಳಲ್ಲಿ. 
‘ಯತಿರಾಜ್, ನೀನ್ಯಾಕೆ ಈವತ್ತು ರಾತ್ರಿ ಚೆನ್ನೈಗೆ ಹೋಗಿ, ನಾಳೆ ಕೆಲಸ ಮುಗಿಸಿ, ನಾಡಿದ್ದು ಬಂದುಬಿಡಿ. ಹೇಗೂ ರಜಾ ಇದೆ’ ಎಂದಿದ್ದರು ಬಾಸ್.
ಹಾಗೆ ಹೊರಟಿದ್ದೆ ಆ ಸಲ. ಪಕ್ಕದಲ್ಲಿ ಕುಳಿತ ಯುವಕ ನನಗಿಂತ ಒಂದೆರಡು ವರ್ಷ ಕಿರಿಯನಿರಬಹುದು.
ಹೀಗೇ ಮಾತುಕತೆ ಆಡುವುದು ನನ್ನ ಜಾಯಮಾನ ಆಗೆಲ್ಲಾ. ಈಗ ಸಾಮಾನ್ಯವಾಗಿ ಪಕ್ಕದವರು ಮಾತಾಡಿಸಿದರೆ ಮಾತಾಡುತ್ತೇನೆ ಅಷ್ಟೇ.
ಹ್ಞಾಂ ಅಂದು ಸಿಕ್ಕ ಯುವಕ ಕೂಡ ಕೇವಲ ಒಂದು ದಿನದ ಕೆಲಸಕ್ಕೆ ಚೆನ್ನೈಗೆ ಹೊರಟಿದ್ದ. ಮದ್ರಾಸು ತಲುಪಿ ಒಂದೇ ರೂಮು ಮಾಡಿದೆವು. ಹೇಗೂ ನಿದ್ದೆ ಸಮಯ ಮೀರಿತ್ತು. ಬೆಳಕು ಹರಿದಿತ್ತು.
ನಮ್ಮ ನಮ್ಮ ಪ್ರಾತರ್ವಿಧಿಗಳನ್ನು ಮುಗಿಸಿಕೊಂಡು ನಮ್ಮ  ನಮ್ಮ ಕೆಲಸಕ್ಕೆ ಹೊರಟೆವು. ನಂತರ ಮರಳಿ ಬಂದು ಹೊಟೇಲ್ ಬಿಲ್ ಚುಕ್ತಾ ಮಾಡಿ ಒಟ್ಟಿಗೇ ಹೊರಟೆವು ಬೆಂಗಳೂರಿನತ್ತ.
ಅಬ್ಬಾ! ಅದೊಂದು ಭಯಾನಕ ಪ್ರಯಾಣವಾಯಿತು.
ಹಿಂದಿನ ದಿನ ಊಟಿಯಲ್ಲಿ ಕನ್ನಡ ಸಿನಿಮಾ ಒಂದರ ಶೂಟಿಂಗ್ ನಡೆಯುವಾಗ ನಾಯಕಿಯೊಂದಿಗೆ ಕೆಟ್ಟದಾಗಿ ನಡೆದುಕೊಂಡಿದ್ದಾರೆ ಅಲ್ಲಿನ ಜನ ಎಂದೂ, ಆಕೆಯನ್ನು ಸಂರಕ್ಷಿಸಲು ಹೋದ ಜನಪ್ರಿಯ ನಾಯಕನಟನಿಗೂ ತೊಂದರೆ ಕೊಟ್ಟರೆಂದೂ ...ನಮಗೆ ತಿಳಿದು ಬಂದಿದ್ದು ತೀರಾ ತಡವಾಗಿ.
ಈಗಿನಂತೆ ನಾಯಿಯೊಂದನ್ನು ಮಹಡಿಯ ಮೇಲಿಂದ ಬಿಸಾಡಿದರೆಂಬ ಸುದ್ದಿಯನ್ನು ಪದೇ ಪದೇ ಬಿತ್ತರಿಸುವಂತಹ ಛಾನೆಲ್ಲುಗಳು ಆಗ ಇರಲಿಲ್ಲ. 
ನಾವು ಬಸ್ಸಿನಲ್ಲಿ ಹಾಯಾಗಿ (ತಮಿಳುನಾಡಿನ ರಿಜಿಸ್ಟ್ರೇಷನ್ ಬಸ್) ಬರುತ್ತಿದ್ದೆವು. ಬಸ್ಸು ಇದ್ದಕ್ಕಿದ್ದಂತೆ ಹೊಸೂರಿನಲ್ಲಿ ನಿಂತುಹೋಯಿತು.
ಮುಂದಕ್ಕೆ ಹೋಗಲ್ಲ, ಈವತ್ತು ಟಿಎನ್ ರಿಜಿಸ್ಟ್ರೇಷನ್‍ನ ಯಾವುದೇ ಗಾಡಿ ಬೆಂಗಳೂರಿನ ಒಳಗೆ ಹೋಗುವುದಿಲ್ಲ ಎಂದುಬಿಟ್ಟ ಬಸ್ ಡ್ರೈವರ್.
ಬೆಳಗಿನ ಝಾವ... ಛಳಿ. ಅದು ಜನವರಿ 26ರ ಬೆಳಗ್ಗೆ. ಬ್ಯಾಗಿನಲ್ಲಿದ್ದ ಲುಂಗಿಯನ್ನೇ ಮೈಗೆ ಸುತ್ತಿಕೊಂಡು ಛಳಿ ತಡೆಯಲು ಯತ್ನಿಸಿದೆ.
ಅಷ್ಟರಲ್ಲಿ ಕರ್ನಾಟಕ ರಿಜಿಸ್ಟ್ರೇಷನ್ ಲಾರಿಯೊಂದು ಬಂತು. ಅವನನ್ನು ಗೋಗರೆದು ಅದರೊಳಗೆ ಹತ್ತಿದೆವು.
ಅವನು ಅತ್ತಿಬೆಲೆಯ ವರೆಗೆ ಮಾತ್ರ ಹೋಗುತ್ತಿದ್ದ. ಅಯ್ಯಾ, ಅಷ್ಟು ದೂರ ಹೋದರೆ ಹೇಗೋ ಮನೆ ತಲುಪಿಯೇವು ಎಂದುಕೊಂಡು ಲಾರಿ ಹತ್ತಿದೆವು.

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102