ಯತಿ ಸ್ವಂತೀ -231
19-08-2018
ಈ ಅಡುಗೆಯಾಳಿನಲ್ಲಿ ಒಂದು ವಿಶೇಷ ಕಂಡೆ. ನಾವು ರೋಟಿ ತಿನ್ನುತ್ತಿರುವವರೆಗೂ ತವಾ ಮೇಲೆ ತಟ್ಟುತ್ತಲೇ ಇದ್ದರು. ನಾವು ಅಲ್ಲಿದ್ದ ಬ್ರೆಡ್, ಬೆಣ್ಣೆಗೆ ಕೈ ಹಾಕಿದೊಡನೆ ರೋಟಿ ಮಾಡುವುದನ್ನು ನಿಲ್ಲಿಸಿಬಿಟ್ಟರು.
ನೀಟಾದ ಡ್ರೆಸ್‍ನೊಂದಿಗೆ ಹೊರಗೆ ಬಂದೆ. ಕಾಲುಗಳು ಧಸಕ್ಕೆಂದು ಅಲ್ಲಿನ ಲೂಸ್ ಮಣ್ಣಿನಲ್ಲಿ ಹೂತುಕೊಂಡವು. ನನ್ನ ಪ್ಯಾಂಟ್, ಶೂ ಎಲ್ಲವೂ ಧೂಳುಮಯವಾದವು.
ಅಲ್ಲಿನವರಿಗೆ ಧೂಳಿಗಾಗಿ ವಿಶೇಷ ಭತ್ಯೆ ಕೊಡುವರೆಂದು ನಂತರ ಅರಿತೆ. ಅಷ್ಟು ಧೂಳು ಅಲ್ಲಿ!
ನಾನು ಸ್ಟಡೀ ಮಾಡಬೇಕಾದ ಸಿಂಖ್ರೋನಸ್ ಮೋಟರ್ ಬಳಿ ಹೋದೆ. ಅದರ ಕೆಲಸವನ್ನು ನೋಡುತ್ತಿದ್ದೆ. ಅದರ ಮೇಲೆ ಹಾಕಿದ್ದ ನೇಂ ಪ್ಲೇಟ್ ಓದಿ ಆ ವಿವರ ಬರೆದುಕೊಂಡೆ. ನಂತರ ಅವರ ಡಿಸೈನ್ ಆಫೀಸಿಗೆ ಹೋಗಿ ಆ ಮೋಟರಿನ ವಿವರವನ್ನು ತಿಳಿದುಕೊಂಡೆ.
ಆಗೆಲ್ಲಾ ಮೊಬೈಲ್ ಇರಲಿಲ್ಲವಲ್ಲ ಪಟ ತೆಗೆದುಕೊಳ್ಳಲು!
ಇಂಗ್ಳೆ ನನ್ನನ್ನು ಅಲ್ಲೇ ಬಿಟ್ಟು ಅವನ ಮುಂದಿನ ಕೆಲಸಕ್ಕೆ ಹೊರಟುಹೋದ.
ಮೂರುದಿನಗಳಿದ್ದು ಅಲ್ಲಿಂದ ನಾನು ಲಕ್ನೋ, ಕಾನ್ಪುರಗಳಿಗೆ ಹೋಗಬೇಕಿತ್ತು. ಅಲ್ಲಿಂದ ನನಗೆ ನೇರವಾದ ರೈಲುಗಾಡಿ ಇರುವ ವಿಷಯ ತಿಳಿದಿರಲಿಲ್ಲ.
ನಮ್ಮ ದೊಡ್ಡ ಬಾಸ್ ಒಬ್ಬರು ಮೋಟರ್ಸ್ ಡಿಪಾರ್ಟ್‍ಮೆಂಟ್ ಛೀಫ್ ವಾರಾಣಸಿಗೆ ಹೋಗುವವರಿದ್ದರು. ಜೊತೆಗೆ ಆ ಸತ್ನಾದ ನನ್ನ ‘ಹಳೆ ಸಹೋದ್ಯೋಗಿ, ಹೊಸ ಗೆಳೆಯ’ ಕೂಡ ಇದ್ದ.
ಸರಿ, ಮೂವರೂ ಒಂದು ಕಪ್ಪುಬಣ್ಣದ ಕಾರಿನಲ್ಲಿ ಮಧ್ಯಾಹ್ನ ಹನ್ನೆರಡಕ್ಕೆ ಹೊರಟೆವು. ಮೇ ತಿಂಗಳು. ಅಬ್ಬಾ ಸುಡು ಬಿಸಿಲು ಎನ್ನುವುದು ಬಹಳವೇ ದೊಡ್ಡ ಅಂಡರ್ ಸ್ಟೇಟ್‍ಮೆಂಟು! ವಿಪರೀತ ಬಿಸಿಲು. ಏ.ಸಿ. ಇಲ್ಲದ ಕಾರು. ಸೀಟಿನ ಮೇಲೆ ಕೂರಲಾಗುತ್ತಿಲ್ಲ. ಅರ್ಧಂಬರ್ಧ ಕುಳಿತು ವಾರಾಣಸಿಗೆ ಪಯಣಿಸಿದೆವು.
ನಡುಮಧ್ಯೆ ಮೋಸಂಬಿ+ಕಿತ್ತಳೆ ಜ್ಯೂಸ್ ಕುಡಿದ ನೆನಪು. ಅದಕ್ಕೆ ಯಾವುದೋ ಪೆಷಾವರ್ ಉಪ್ಪು (ಕಪ್ಪುಬಣ್ಣದ ರಾಕ್‍ಸಾಲ್ಟ್) ಹಾಕಿ ಕೊಟ್ಟಿದ್ದ ಅಂಗಡಿಯಾತ. ತೇಗು ಜೋರಾಗಿ ಬಂದಿತು. ಆದರೆ ಬುಸ್ ಬುಸ್ ಎಂದು ಗಂಧಕವು ಹೊರಬಂದಂತೆ ಅನ್ನಿಸಿತು ಆ ಜ್ಯೂಸ್‍ನಿಂದ.
ಗಂಧಕ, ರಂಜಕ ಇವೆಲ್ಲದರ ಪರಿಚಯ ನನಗೆ ನ್ಯಾಷನಲ್ ಕಾಲೇಜ್ ಜಯನಗರದ ಕೆಮಿಸ್ಟ್ರಿ ಲ್ಯಾಬ್‍ನಲ್ಲಿ ಆಗಿತ್ತಲ್ಲ! ಹೈಡ್ರೋಜನ್ ಸಲ್ಫೈಡ್ ವಾಸನೆಗೆ, ಅಮೋನಿಯಾದ ಘಾಟಿಗೆ ತಲೆ ತಿರುಗುವಂತಾಗಿತ್ತು. ನೈಟ್ರಸ್ ಆಕ್ಸೈಡ್ ಕೂಡ ಮೂಸಿ ನಕ್ಕಿದ್ದೆವು (ಲಾಫಿಂಗ್ ಗ್ಯಾಸ್!)
ಇದರಲ್ಲಿ ಖಚಿತವಾಗಿ ಗಂಧಕವಿತ್ತು.
ಅಂತೂ ಕೊನೆಗೂ ಕಾಶಿ ತಲುಪಿದೆವು. ನನಗೆ ‘ಬೈ’ ಹೇಳಿ ಅವರಿಬ್ಬರೂ ಹೊರಟುಬಿಟ್ಟರು.
ರೈಲ್ವೇ ಸ್ಟೇಷನ್ನಿನ ಎದುರಿಗೆ ಇದ್ದ ಹೊಟೇಲಿನಲ್ಲಿ ರೂಮು ಮಾಡಿದೆ. ಇದು ಕಾಶಿಗೆ ನನ್ನ ಎರಡನೇ ಭೇಟಿ.
ಆದರೂ ಗಂಗಾತೀರಕ್ಕೆ ಹೋಗಲು ಆಗ ಸಮಯವಾಗಲಿಲ್ಲ.
ಕಾನ್ಪುರಕ್ಕೆ ಹೋಗಲು ಟಿಕೆಟ್ ಬುಕ್ ಮಾಡಲು ಹೋದೆ. ಅಂದು ಸಿಗಲಿಲ್ಲ. ಮರುದಿನಕ್ಕೆ ಟಿಕೆಟ್ ಸಿಕ್ಕಿತು.
ಈವತ್ತು ಏನು ಮಾಡುವುದು? ಎಂದು ಆಲೋಚಿಸುತ್ತಿದ್ದಾಗ ಅಲ್ಲಿ ಇಬ್ಬರು ಯುವಕರನ್ನು ಕಂಡೆ. ಒಬ್ಬ ಸಾಧು ಮುಖದವನು. ಮತ್ತೊಮ್ಮೆ ಪ್ರಪಂಚವನ್ನು ಅರೆದು ಕುಡಿದಿದ್ದ ರೌಡಿ ಮೊಗದವನು!
Comments
Post a Comment