ಯತಿ ಸ್ವಂತೀ -230
18-08-2018
ಸಿಂಗ್ರೌಲಿ ಕೋಲ್ ಮೈನ್ಸ್ ನನಗೆ ದಿಗ್ಭ್ರಮೆ ಹುಟ್ಟಿಸಿತು. ಎಲ್ಲೆಲ್ಲೂ ಬೆಟ್ಟಗಳು. ಕೆಲವು ದೇವ ನಿರ್ಮಿತ. ಕೆಲವು ಮಾನವ ನಿರ್ಮಿತ.
ಅಚ್ಚರಿಯಲ್ಲವೇ?
ಕಲ್ಲಿದ್ದಲು ಇಲ್ಲಿ ನೆಲದ ಮೇಲೆ ಸಿಗುತ್ತದೆ. ಅದನ್ನು ಪಡೆಯಲು ದೊಡ್ಡ ದೊಡ್ಡ ಬೆಟ್ಟಗಳನ್ನು ಉರುಳಿಸಬೇಕು. ಅದನ್ನು ಉರುಳಿಸಲು ಡ್ರ್ಯಾಗ್‍ಲೈನ್ ಎನ್ನುವ ದೊಡ್ಡ ಸರ್ವತೋಮುಖವಾಗಿ ಚಲಿಸುವ ಯಂತ್ರದ ಸಹಾಯ ಪಡೆಯುತ್ತಾರೆ. ದೊಡ್ಡ ಕ್ರೇನ್‍ನ ತುದಿಯಲ್ಲಿ ಬಾಚಿಹಲ್ಲನ್ನು ಹೊಂದಿ ಅದಕ್ಕೆ ಹೊಂದಿಕೊಂಡಂತೆ ಒಂದು ‘ಪಾತ್ರೆ’ ಹೊಂದಿರುವ ಈ ಡ್ರ್ಯಾಗ್‍ಲೈನ್, ಬೆಟ್ಟವನ್ನು ಸ್ವಲ್ಪ ಸ್ವಲ್ಪವಾಗಿ ತನ್ನ ಹಲ್ಲಲ್ಲಿ ಕೆತ್ತಿ, ತನ್ನ ಪಾತ್ರೆಯಲ್ಲಿ ತುಂಬಿಕೊಂಡು ಮತ್ತೊಂದು ಕಡೆ ಸುರಿಯುತ್ತದೆ. ಹಾಗೆ ಸುರಿದೂ ಸುರಿದೂ ಒಂದು ಬೆಟ್ಟವೇ ನಿರ್ಮಾಣವಾಗುತ್ತದೆ. ಆಯಿತಲ್ಲ, ದೇವಬೆಟ್ಟ ಈಗ ಮಾನವಬೆಟ್ಟ!
ಆ ದೇವ ನಿರ್ಮಿತ ಬೆಟ್ಟದಡಿಯಲ್ಲಿ ಹಾಯಾಗಿ ಶ್ರೀಮನ್ನಾರಾಯಣನಂತೆ ಮಲಗಿರುತ್ತದೆ ಕಲ್ಲಿದ್ದಲ ಹಾಸು. ಅದನ್ನು ಮತ್ತೆ ಬುಡಸಹಿತ ಎತ್ತುತ್ತದೆ ಡ್ರ್ಯಾಗ್‍ಲೈನ್. ಇದರ ಸಾಮರ್ಥ್ಯ ವಿಪರೀತ ಹೆಚ್ಚು. ಆ ಕಲ್ಲಿದ್ದಲನ್ನು ಅಲ್ಲಿಯೇ ಹತ್ತಿರದಲ್ಲಿರುವ ರೈಲಿನ ಕಂಬಿಯ ಮೇಲೆ ನಿಂತ ಗೂಡ್ಸ್‍ರೈಲಿನ ವ್ಯಾಗನ್ನುಗಳಿಗೆ ತುಂಬುತ್ತದೆ. ನಂತರ ಆ ರೈಲು ಕೂ ಝಗ್ ಝಗ್ ಎನ್ನುತ್ತಾ ಹತ್ತಿರದ ಪವರ್ ಸ್ಟೇಷನ್ ತಲುಪುತ್ತದೆ. ಅಲ್ಲಿ ಅದನ್ನು ಇಳಿಸಿ, ಮತ್ತೆ ಖಾಲಿ ರೈಲು ಇಲ್ಲಿ ಬಂದು ನಿಲ್ಲುತ್ತದೆ. ಆಗ ನನಗೆ ನೆನಪಿರುವ ಮಟ್ಟಿಗೆ ಗಂಟೆಗೆ ಹತ್ತುಸಾವಿರ ಟನ್ ಕಲ್ಲಿದ್ದಲನ್ನು ಕೆತ್ತಿ ತೆಗೆಯುತ್ತಿದ್ದರು. 1987 ಏಪ್ರಿಲ್ ವಿಷಯ ನಾನು ಹೇಳುತ್ತಿರೋದು.
ಅಲ್ಲಿ ಒಂದು ತೆಳು ಧೂಳಿನ ಪರದೆ ಸದಾ ಇರುತ್ತಿತ್ತು. ಆ ಕಂಪೆನಿಯಲ್ಲಿ ಕೆಲಸ ಮಾಡುವ ಜನರಿಗೆ ಧೂಳಿನ ಭತ್ಯೆ ಕೊಡುವ ಏರ್ಪಾಡಿತ್ತೆಂದು ನನಗೆ ಜ್ಞಾಪಕ.
ನಾನಲ್ಲಿಗೆ ಹೋದದ್ದು ಯಾಕೇಂತೀರಾ? ಅಲ್ಲಿ ಆ ಡ್ರ್ಯಾಗ್‍ಲೈನ್‍ಗೆ ಬಳಸುವ ಸಿಂಖ್ರೋನಸ್ ಮೋಟರ್‍ನ ಸ್ಟಡೀ ಮಾಡಲು ಹೋಗಿದ್ದೆ.
ಸಿಂಖ್ರೋನಸ್ ಮೋಟರ್ ಮತ್ತು ಎ.ಸಿ. ಜನರೇಟರ್ ಎರಡೂ ತಯಾರಿಕೆಯಲ್ಲಿ ಸೇಮ್ ಟು ಸೇಮ್. ಅದಕ್ಕೇ ಅಲ್ಲಿನ ರಷ್ಯನ್ ಅಥವಾ ಝೆಕೋಸ್ಲೋವೇಕಿಯನ್ ಮೋಟರ್‍ಗೆ ಕಿರ್ಲೋಸ್ಕರ್ ಮೋಟರ್ ಕೊಡಬೇಕೆಂಬುದು ನಮ್ಮ ಕಂಪೆನಿಯ ಇಚ್ಛೆಯಾಗಿತ್ತು. ಅದರ ಮೊದಲ ಪೀಠಿಕೆ ನನ್ನ ಭೇಟಿ ಅಲ್ಲಿಗೆ.
ರವಿ ಇಂಗ್ಳೆಗೆ ಅಲ್ಲಿ ಯಾರೋ ರಮಯ್ಯಾ ಅಂತ ಒಬ್ಬ ಅಧಿಕಾರಿ ಗೊತ್ತಿದ್ದರು. ರಾಮಯ್ಯ ಇರಬಹುದು. ರಮ್ಯಾ ಅಲ್ಲ! ತೆಲುಗರೋ, ಕನ್ನಡಿಗರೋ ಇರಬೇಕು. ಆತ ಇರಲಿಲ್ಲ. ಆದರೆ ಆತನ ಹೆಸರು ಹೇಳಿ ಕೋಲ್‍ಮೈನ್ಸ್‍ನ ಗೆಸ್ಟ್ ಹೌಸ್‍ನಲ್ಲಿ ನಾನು ಇಂಗ್ಳೆ ಇಳಿದುಕೊಂಡೆವು.
ಮಿರಮಿರ ಮಿಂಚುವ ಕಪ್ಪು ಶೂಗಳು, ಬ್ರೌನ್ ಪ್ಯಾಂಟ್ ಮತ್ತು ಕ್ರೀಂ ಷರಟು ಧರಿಸಿ, ತಿಂಡಿಗೆ ಕೂತೆ.
ಅಡುಗೆಯಾಳು ಒಂದೇ ಸಮನೆ ರೋಟಿಗಳನ್ನು ಮಾಡುತ್ತಿದ್ದ. ಬಿಸಿ ಬಿಸಿ ರೋಟಿ, ಸಬ್ಜಿಗಳು ಇದ್ದವು. ಸಾಸಿವೆ ಎಣ್ಣೆಯಲ್ಲಿ ಮಾಡಿದ್ದರೆಂದು ನೆನಪು. ನನ್ನ ಮೂಗಿಗೆ ಆ ಎಣ್ಣೆಯ ದುರ್ವಾಸನೆ ತಡೆಯಲೇ ಆಗಲಿಲ್ಲ. ಆದರೆ ವಿಧಿಯಿಲ್ಲ. ಹೊಟ್ಟೆ ಪಾಡು!
Comments
Post a Comment