ಯತಿ ಸ್ವಂತೀ -229
17-08-2018
ಮಕ್ಕೀ ಕಾ ಮಕ್ಕೀ ಅನುವಾದ ಇಲ್ಲದಿದ್ದಾಗ ನನಗೆ ಕೆಲವು ತೆಲುಗು ಪದಗಳು ಅರ್ಥ ಆಗುತ್ತಿರಲಿಲ್ಲ. ಆ ಸಮಯದಲ್ಲಿ ನಾನು ಕಕ್ಕಾಬಿಕ್ಕಿ ಆಗುತ್ತಿದ್ದೆ. ಆಗೆಲ್ಲಾ ಆನ್‍ಲೈನ್ ಡಿಕ್ಷನರಿ ಎಂದರೇನೆಂದು ಯಾರಿಗೂ ತಿಳಿಯದ ಸಮಯ. ಅವು ಅಸ್ತಿತ್ವದಲ್ಲೇ ಇರಲಿಲ್ಲವಲ್ಲ!
ಒಂದು ಒಳ್ಳೆಯ ಶಬ್ದಕೋಶ ತೆಲುಗು – ಇಂಗ್ಲೀಷ್ ಕೊಳ್ಳಬೇಕೆಂದುಕೊಂಡೆ.
ಆದರೂ ಹೆಚ್ಚು ಕಡಿಮೆ ಅರ್ಥ ಆಗುತ್ತಿತ್ತು.
ಎಲ್ಲಿದ್ದೆ? ಹ್ಞಾಂ... ಸತ್ನಾದಲ್ಲಿ ಹೊಟೇಲ್ ನಟರಾಜ್ ರೂಮಲ್ಲಿ ಕೂತು ಯಾವುದೋ ಕಾದಂಬರಿ (ತೆಲುಗು) ಓದುತ್ತಾ ಕೂತಿದ್ದೆ. ಆಗ ಕೇಳಿಸಿತ್ತು ಕೆಳಗೆ (ನನ್ನದು ಮೊದಲ ಮಹಡಿ)... ‘ಯಾರಾದರೂ ಕಿರ್ಲೋಸ್ಕರ್‍ನವರು ಇಲ್ಲಿ ಇದ್ದಾರಾ?’ ಎಂಬ ಆಂಗ್ಲ ಭಾಷೆಯ ಮಾತು. ಧ್ವನಿ ಬಹಳವೇ ಚಿರಪರಿಚಿತ.
ಬೇಸರವೆಂಬ, ಒಂಟಿತನವೆಂಬ ಸಮುದ್ರದಲ್ಲಿ ಮುಳುಗಿರುತ್ತಿದ್ದ ಈ ಸಮಯದಲ್ಲಿ ಈ ಪರಿಚಿತ ಧ್ವನಿಯ ಹುಲ್ಲುಕಡ್ಡಿ!
ಅಬ್ಬಾ... ಹೇ ಒಂದು ನಿಮಿಷ... ಈ ಮನುಷ್ಯನನ್ನು ಕಂಡರೆ ನಿನಗಾಗುತ್ತಿರಲಿಲ್ಲವಲ್ಲ? ಅರೆ ಹೌದು, ಇವನ ತಲೆ ಕಂಡರೆ ಯಾಕೋ ಬೇಸರವಿತ್ತು ಬೆಂಗಳೂರಿನಲ್ಲಿ. ಆದರೆ ಈಗ... ಈತನೇ ನನ್ನ ಅತ್ಯಂತ ಪರಮಾಪ್ತ ಗೆಳೆಯನಂತೆ ತೋರಿದ.
ನಿಜವೇನು ಗೊತ್ತೇ? ಬಹಳ ಜನರನ್ನು ನಾವು ತಪ್ಪಂದಾಜು ಮಾಡ್ತೇವೆ. ಅವರೊಂದಿಗೆ ನಾವು ನೇರವಾಗಿ ಮಾತೇ ಆಡಿರುವುದಿಲ್ಲ. ಅವರ ಬಗ್ಗೆ ನಮ್ಮದೇ ಆದ ಒಂದು ಪೂರ್ವಗ್ರಹ ಅಂದಾಜು ಮಾಡಿಬಿಟ್ಟಿರುತ್ತೇವೆ.
ಈಗ ವಿಷಯಕ್ಕೆ ಬಂದರೆ... ಪುಸ್ತಕವನ್ನು ಮಂಚದ ಮೇಲೆ ಇಟ್ಟು ಕೆಳಗಡೆಗೆ ದುಡುದುಡು ಬಂದೆ. ‘ಹಲೋ...’ ಎಂದೆ ನಗುತ್ತಾ ನನ್ನ ಬಲಗೈ ಮುಂದೆ ಚಾಚಿ.
‘ಹಲೋ ಮಿ. ಯತಿರಾಜ್’ ಎಂದನಾತ.
ಅವನೊಂದಿಗೆ ಮುಂದಿನ ಕೆಲವು ಗಂಟೆಗಳ ಕಾಲ ಸಮಯವನ್ನು ಕೊಂದೆ. ರವಿ ಇಂಗ್ಳೆ ಇನ್ನೂ ಪತ್ತೆ ಇರಲಿಲ್ಲ.
ಅವನೊಂದಿಗೆ ಸತ್ನಾದ ಮಾರುಕಟ್ಟೆ ಸುತ್ತಿದೆ. ಅವನೊಂದಿಗೆ ಹೊಟೇಲ್‍ನಲ್ಲಿ ಊಟ ಮಾಡಿದೆ.
ಆಗ ಅನ್ನಿಸಿತು, ಈ ಮನುಷ್ಯನನ್ನು ನಾನು ಮಾತಾಡಿಸಿಯೇ ಇರಲಿಲ್ಲ ಬೆಂಗಳೂರಿನಲ್ಲಿ. ಬಹಳ ಒಳ್ಳೆಯ ಮನುಷ್ಯ. ಕೆಲವರು ಮಾತಾಡಲು ಹಿಮ್ಮೆಟ್ಟುತ್ತಾರೆ. ಅವರನ್ನು ನಾವು ಮಾತನಾಡಿಸದೇ ನಮ್ಮದೇ ಆದ ಅಭಿಪ್ರಾಯ ರೂಪಿಸಿಕೊಳ್ಳುತ್ತೇವೆ. ಇವನು ಮಾತಾಡಲ್ಲ, ಇವನಿಗೆ ಕೊಬ್ಬು ಅಂತ.
ಒಟ್ಟಿನಲ್ಲಿ ನನ್ನ ಒಂಟಿತನವನ್ನು ಓಡಿಸಿದ ಕೃಪೆ ಅವನದು.
ನಂತರ ಬಂದ ರವಿ ಇಂಗ್ಳೆ.
ಈ ಮನುಷ್ಯನಿಗೆ ಬೈ ಹೇಳೀ ಹೊರಟೆ. ಅವನೊಂದಿಗೆ ಮತ್ತೆ ನನ್ನ ಭೇಟಿ, ಪ್ರಯಾಣ ಬಾಕಿ ಇತ್ತು. ಅದರ ಕಥೆ ಆಮೇಲೆ.
ರವಿ ಇಂಗ್ಳೆ ಪುಟ್ಟ ಆಕಾರದ ನಗೆಮೊಗದ ಹುಡುಗ. ನನಗಾಗ ಮೂವತ್ತಾದರೆ ಅವನಿಗೆ ಇಪ್ಪತ್ತನಾಲ್ಕು.
ಕ್ಯಾಬ್ ಹೈರ್ ಮಾಡಿದ. ರಾತ್ರಿ ಪ್ರಯಾಣ ಹೊರಟೆವು. ರಾತ್ರಿಯೆಲ್ಲಾ ಹೋದೆವು.
ಕೇಂದ್ರದ ಮಾಜಿ ಮಾನವ ಸಂಪನ್ಮೂಲ ಸಚಿವ ಥಾಕುರ್ ಅರ್ಜುನ್‍ಸಿಂಗ್ (ಅರ)ಮನೆಯ ಮುಂದೆ ಹೋದೆವು. ಕೊನೆಗೂ ಬೆಳಗಾಗುವ ವೇಳೆಗೆ ಸಿಂಗ್ರೌಲಿ ಕೋಲ್ ಮೈನ್ಸ್ ತಲುಪಿದೆವು.
Comments
Post a Comment