ಯತಿ ಸ್ವಂತೀ -228


16-08-2018
ಅಕ್ಷರಾಭ್ಯಾಸ ಮಾಡುತ್ತಿದ್ದಾಗ ನಾವಿದ್ದುದು ಜಯನಗರ ಟಿ ಬ್ಲಾಕ್‍ನ ಹದಿಮೂರನೇ ಮುಖ್ಯರಸ್ತೆಯ ಔಟ್‍ಹೌಸಿನಲ್ಲಿ.
ಒಂದು ಫೋಲ್ಡಿಂಗ್ ಟೇಬಲ್ ಹರಡಿಕೊಂಡು ಒಂದೊಂದೇ ತೆಲುಗು ಅಕ್ಷರವನ್ನು ಕಲಿಯಲಾರಂಭಿಸಿದೆ. ಹಿಂದೆ ಮೈಸೂರಿನಲ್ಲಿದ್ದಾಗ ತಮಿಳಿನ ಒಂದನೇ ತರಗತಿ ಪಠ್ಯಪುಸ್ತಕ ಹಿಡಿದು ಹೀಗೇ ತಮಿಳು ಅಕ್ಷರಗಳನ್ನು ಕಲಿತಿದ್ದ ನೆನಪು ಬಂದಿತ್ತು.
ಅಂತೂ 60 ದಿನಗಳಲ್ಲಿ ತೆಲುಗಿನ ಅಕ್ಷರಗಳನ್ನು ಕಲಿತಾಗಿತ್ತು. ಇನ್ನೂ ಶಬ್ದಕೋಶ ಕೊಂಡಿರಲಿಲ್ಲ. ಬಳೇಪೇಟೆ ಬುಕ್‍ಹೌಸ್ ಇತ್ತು ಕಿಲಾರಿ ರಸ್ತೆಯಲ್ಲಿ.
ಅಲ್ಲಿ ಹೋಗಿ ಯಂಡಮೂರಿ, ಮಲ್ಲಾದಿ ಇವರಿಬ್ಬರ ಅನೇಕ ಹಳೆಯ ಕಾದಂಬರಿಗಳನ್ನು ಕೊಂಡು ತಂದೆ. ಜೊತೆಗೆ ಅವುಗಳ ಕನ್ನಡ ಅನುವಾದಗಳನ್ನೂ ಕೊಂಡೆ.
ಯಾವ ಮಟ್ಟದಲ್ಲಿ ಆಗ ಯಂಡಮೂರಿಯವರ ಪುಸ್ತಕಗಳು ಕನ್ನಡಕ್ಕೆ ಬಂದುವೆಂದರೆ, ಅವರ ಒಂದೆರಡು ನಾಟಕಗಳೂ ಕಾದಂಬರಿ ರೂಪದಲ್ಲಿ ಕನ್ನಡದಲ್ಲಿ ಬಂದವು. ಇದನ್ನು ಓದಿದವರು ಯಂಡಮೂರಿಯವರ ಬರವಣಿಗೆಯ ಅಭಿಮಾನಿಗಳಾದರೆ ಕಂಡು ಹಿಡಿಯಿರಿ ನೋಡೋಣ!
ನನ್ನ ಪುಸ್ತಕ ಕೊಂಡಾಟ ಶುರುವಾಗಿದ್ದು ಬಹಳ ಹಿಂದೆ. ನನ್ನ ಮೊದಲ ವರ್ಷ ಇಂಜಿನಿಯರಿಂಗ್‍ನಲ್ಲಿ, 1974ರಲ್ಲಿ.
ನನ್ನ ಗೆಳೆಯ ಪ್ರಸನ್ನ (ಅವನಿಗೆ ಅಡ್ಡ ಹೆಸರು  ಗಾಂಧಿ!) ಅವನ ಬಳಿ ಮೈಸೂರಿನ ಗೀತಾ ಬುಕ್ ಹೌಸ್‍ನ ನೂರು ರೂಪಾಯಿಗಳ ವೌಚರ್ ಇದೆ ಎಂದ, ಬೇಕಾ ಎಂದ.
ಖುಷಿಯಾಗಿ ಅದನ್ನು ಪಡೆದು ಗೀತಾ ಬುಕ್ ಹೌಸ್‍ಗೆ ಹೋದೆ. ಕೆ.ಆರ್. ಸರ್ಕಲ್ಲಿನಲ್ಲಿದೆ ಅದು.
ಯಾವುದಾದರೂ ಪುಸ್ತಕ ಕೊಳ್ಳಬೇಕು ಎಂದ ಹೋದವನಿಗೆ ಟಿ.ಕೆ.ರಾಮರಾವ್ ಅವರ ಪುಸ್ತಕಗಳು ಕಂಡವು.
ಅಷ್ಟು ಹೊತ್ತಿಗೆ ಅವರ ಸೀಮಾರೇಖೆ ಸುಧಾದಲ್ಲಿ ಧಾರಾವಾಹಿ ಆಗಿತ್ತೇನೋ.
ಅವರ ವರ್ಣಚಕ್ರ, ಆಸರೆಯ ಬೊಂಬೆ, ದೂರಗಗನ ಕೊಂಡ ನೆನಪು.
ಅದೇ ಮೊದಲು. ಆ ನಂತರ ಅವರ ಎಲ್ಲಾ ಪುಸ್ತಕಗಳನ್ನೂ ಕೊಂಡೆ. ಅವರ ಕಾದಂಬರಿ ಯಾವುದಾದರೂ ವಾರಪತ್ರಿಕೆಯ ವಿಶೇಷಾಂಕದಲ್ಲಿ ಬಂತೆಂದರೆ ಅದನ್ನು ಕೂಡ ಕೊಳ್ಳುತ್ತಿದ್ದೆ.
ಒಂದು ರೀತಿಯ ಕ್ರೇಝ್ ಉಂಟಾಗಿತ್ತು. ನಾವು ಕೆಲವು ಮನೆಗಳನ್ನು ಬದಲಾಯಿಸಿದೆವು. ಆಗೆಲ್ಲಾ ಅತ್ಯಂತ ಹೆಚ್ಚಿನ ಜಾಗವನ್ನು ಆಕ್ರಮಿಸುತ್ತಿದ್ದುದು ನನ್ನ ಪುಸ್ತಕಗಳೇ. ಮೂಟೆಗಳಲ್ಲಿ ತುಂಬಿ ಮನೆಯಿಂದ ಮನೆಗೆ ಸಾಗಿಸಿದ್ದೇನೆ.
ಸರಿ, ಈಗ ಸತ್ನಾಗೆ ಬರೋಣ. ಅಲ್ಲಿ ತೆಲುಗು ಪುಸ್ತಕಗಳನ್ನು ಹರಡಿಕೊಂಡು ಓದಲಾರಂಭಿಸಿದೆ.
ಮೊದಮೊದಲು ಕನ್ನಡ, ತೆಲುಗು ಎರಡನ್ನೂ ಇಟ್ಟುಕೊಂಡು ಒಂದೊಂದು ವಾಕ್ಯ ತೆಲುಗಿನಲ್ಲೂ, ಅದೇ ವಾಕ್ಯವನ್ನು ಕನ್ನಡದಲ್ಲೂ ಓದಿ, ಓಹೋ, ಈ ಪದದ ಅರ್ಥ ಇದು ಎಂದು ಅರ್ಥೈಸಿಕೊಳ್ಳುತ್ತಿದ್ದೆ.
ಆದರೆ ಕೆಲವೊಮ್ಮೆ ಅನುವಾದ ಎಂದರೆ ಮಕ್ಕೀ ಕಾ ಮಕ್ಕಿ ಆಗುತ್ತಿರಲಿಲ್ಲ.
ಈ ಮಕ್ಕೀ ಕಾ ಮಕ್ಕೀ ಎಂದರೆ ಗೊತ್ತೇ?
ಒಬ್ಬ ಕಲಾವಿದ ಯಾರೋ ಜನಪ್ರಿಯ ಕಲಾವಿದನೊಬ್ಬನ ಪೆಯಿಂಟಿಂಗ್ ಅನ್ನು ನಕಲು ಮಾಡುತ್ತಿದ್ದ. ಅವನು ಅದನ್ನು ಪೂರ್ತಿ ಮಾಡುವ ಸಮಯದಲ್ಲಿ ಆ ಜನಪ್ರಿಯ ಕಲಾವಿದನ ಪೆಯಿಂಟಿಂಗ್‍ನಲ್ಲಿ ಒಂದು ನೊಣ ಅಂಟಿಕೊಂಡಿದ್ದು ಕಂಡಿತು. ಬಹುಶಃ ಆ ನೊಣ ಪೆಯಿಂಟ್ಟ ಹಸಿ ಇದ್ದಾಗಲೇ ಅಂಟಿಕೊಂಡಿದ್ದಿರಬೇಕು. ನಕಲು ಮಾಡಿದವನೂ ಒಂದು ನೊಣ ಹುಡುಕಿ ಕೊಂದು ಜನಪ್ರಿಯ ಕಲಾವಿದ ಅಂಟಿಸಿದ ಜಾಗದಲ್ಲೇ ಅಂಟಿಸಿದ. ಇದು ಮಕ್ಕಿ ಕಾ ಮಕ್ಕಿ. ಮಕ್ಕಿ ಎಂದರೆ ನೊಣ!

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102