ಯತಿ ಸ್ವಂತೀ -227
15-08-2018
ನಮ್ಮಲ್ಲಿ ಅನೇಕ ಊಹೋಪೋಹಗಳಿರುತ್ತವೆ. ಉದಾಹರಣೆಗೆ ಒಬ್ಬ ಮನುಷ್ಯನನ್ನು ಕೇವಲ ದೂರದಿಂದ ಪರಿಶೀಲಿಸಿದಾಗ, ಅವನ ಮಾತುಗಳನ್ನು ಕೇಳಿಸಿಕೊಂಡಾಗ, ಇವನು ಹೀಗೇ ಎಂಬ ನ್ಯಾಯತೀರ್ಮಾನ ನಾವೇ ಅವನ ಬಗೆಗೆ ಮಾಡಿಕೊಂಡುಬಿಡುತ್ತೇವೆ.
ಇದು ನಮ್ಮನ್ನು ಕೆಲವೊಮ್ಮೆ ತಪ್ಪುಹಾದಿಯಲ್ಲಿ ನಡೆಸುವುದುಂಟು.
ಉದಾಹರಣೆಗೆ 1987ರ ನನ್ನ ಸತ್ನಾ ಪ್ರವಾಸವನ್ನೇ ತೆಗೆದುಕೊಳ್ಳೋಣ.
ಹೊಟೇಲ್ ನಟರಾಜ್‍ನಲ್ಲಿ ಇಳಿದೆ. ರವಿ ಇಂಗ್ಳೆ ಪತ್ತೆಯೇ ಇರಲಿಲ್ಲ. ಆಗೆಲ್ಲಾ ಮೊಬೈಲ್ ಇರಲಿಲ್ಲವಲ್ಲ! ಆತನ ಕರೆಗೆ ನಾನು ಕಾಯುತ್ತಾ ಇದ್ದೆ. ಬೇಕಾದಷ್ಟು ತೆಲುಗು ಪುಸ್ತಕಗಳನ್ನು ತೆಗೆದುಕೊಂಡು ಹೋಗಿದ್ದೆ.
ಹ್ಞಾಂ... 1985ರ ಕೊನೆಯ ಹೊತ್ತಿಗೆ ನಾನು ಅಷ್ಟಾವಕ್ರ ಎನ್ನುವ ಕಾದಂಬರಿ ಓದಿದೆ. ಅದಕ್ಕೆ ಮುಂಚೆ ನನ್ನ ಅಮ್ಮ ಪ್ರಜಾಮತ ವಾರಪತ್ರಿಕೆಯಲ್ಲಿ ತುಳಸೀದಳ, ತುಳಸಿ ಓದುತ್ತಿದ್ದರೆಂದು ನೆನಪು. ಯಾರಮ್ಮಾ ಇದು ಯಂಡಮೂರಿ ವೀರೇಂದ್ರನಾಥ್ ಅಂದ್ರೆ ಅಂದಿದ್ದೆ.
ಬಹಳ ಚೆನ್ನಾಗಿ ಬರೀತಾರೆ ಕಣೋ ಅಂದಿದ್ದರು ಅಮ್ಮ. ಆಗೆಲ್ಲಾ ಟಿ.ಕೆ. ರಾಮರಾವ್, ಅಶ್ವಿನಿ, ಉಷಾ ನವರತ್ನರಾಮ್ ಮುಂತಾದ ಜನಪ್ರಿಯ ಕನ್ನಡ ಲೇಖಕರ ಕಾದಂಬರಿಗಳನ್ನು ಮಾತ್ರ ಓದುತ್ತಿದ್ದ ಕಾಲ.
‘ಛೇ ಆ ಕಾದ್ರಾ ಈ ವಾರ ತುಳಸೀಗೆ ಏನು ಹಿಂಸೆ ಮಾಡ್ತಾನೋ!’ ಎಂದು ಉದ್ಗರಿಸುತ್ತಿದ್ದರು ನನ್ನ ಅಮ್ಮ. ಅಬ್ಬಾ... ಇಷ್ಟೊಂದು ಪ್ರಭಾವ ಅಮ್ಮನ ಮೇಲೆ ತೋರಿಸಬೇಕಾದರೆ ನಿಜಕ್ಕೂ ಬಹಳ ಪವರ್‍ಫುಲ್ ರೈಟರ್ ಎಂದು ಮಾತ್ರ ನನಗೆ ತೋರಿತ್ತಾಗ.
ವಾರಪತ್ರಿಕೆ ಅನ್ನೋ ವಾರಪತ್ರಿಕೆ ಬಿ.ವಿ.ವೈಕುಂಠರಾಜು ಅವರ ನೇತೃತ್ವದಲ್ಲಿ ಬರುತ್ತಿತ್ತು. ಅದರಲ್ಲಿ ಯಂಡಮೂರಿ ಅವರ ಅಷ್ಟಾವಕ್ರ ಧಾರಾವಾಹಿ ಬರಲಾರಂಭಿಸಿತ್ತು. ಒಂದು ವಾರ ಯಾಕೋ ಏನೋ ಒಂದಿಷ್ಟು ದೂರ ಓದಿದೆ. ಸ್ಟನ್ ಆದೆ!
ಅಬ್ಬಾ ಈ ರೀತಿ ಬರೆಯುವವರೂ ಇದ್ದಾರಾ? ನಿಜವಾಗಿಯೂ ಬರವಣಿಗೆಗೆ ಓದುಗರನ್ನು ಹಾಗೆ ಹಿಡಿದಿಡುವ ಶಕ್ತಿ ಇದೆಯಾ? ಎಂಬ ಪ್ರಶ್ನೆ ಉದ್ಭವಿಸಿದ ಮೊದಲ ಕ್ಷಣವದು!
ಸರಿತಾ ಜ್ಞಾನಾನಂದ ಅವರ ಅನುವಾದವದು. ಈ ಅನುವಾದವೇ ಇಷ್ಟು ಚೆನ್ನಾಗಿರಬೇಕಾದರೆ ಮೂಲ ಎಷ್ಟು ಚೆನ್ನಾಗಿರಬಹುದು ಎಂಬ ಆಲೋಚನೆ ಹೊಳೆದಿದ್ದೇ ತಡ, ಯಾವುದೋ ಒಂದು ಪತ್ರಿಕೆಯಲ್ಲಿ ಬರುತ್ತಿದ್ದ ಯಂಡಮೂರಿ ಅವರ ಧಾರಾವಾಹಿ ಓದಲೆತ್ನಿಸಿದೆ.
ಅಕ್ಷರಗಳು ಕನ್ನಡದಂತೆಯೇ ಇವೆ. ಕೆಲವು ಅಕ್ಷರಗಳ ವ್ಯತ್ಯಾಸವಿದೆ. ಹಿಂದೆ ಏಳನೇ ತರಗತಿ ಓದುವ ಸಮಯದಲ್ಲಿ ನನ್ನ ಗೆಳೆಯ ‘ಮಹಡಿ’ ಪ್ರಸಾದನ ಮನೆಯಲ್ಲಿ ಆಂಧ್ರಪ್ರಭ ಪತ್ರಿಕೆಯಲ್ಲಿ ಸಿನಿಮಾ ಪುಟದ ತೆಲುಗು ಅಕ್ಷರಗಳನ್ನು ಓದಲೆತ್ನಿಸಿ, ಪ್ರಸಾದನ ಅಕ್ಕಂದಿರಿಂದ ಕಲಿತ ನೆನಪಿತ್ತು.
ಆದರೆ ಪುಸ್ತಕ ಓದಲು ಭಾಷೆ ಬರಬೇಕು. ಕನ್ನಡನಾಡಲ್ಲಿ ಹೇಳುವ ಯಾಲ? ಎಪ್ಪುಡು? ಇಂತಹ ಕೆಲವು ಪದಗಳು ತಿಳಿದಿದ್ದವು.
ಆ ಸಮಯದಲ್ಲಿ ಹಿಗಿನ್‍ಬಾಥಮ್ಸ್ ಅವರ ಲರ್ನ್ ತೆಲುಗು ಇನ್ 30 ಡೇಸ್ ತ್ರೂ ಕನ್ನಡ ಪುಸ್ತಕ ಕೊಂಡುಕೊಂಡೆ.
ಒಂದು ಲಾಂಗ್ ನೋಟ್ ಬುಕ್ ತೆಗೆದುಕೊಂಡು ಪ್ರತಿ ಅಕ್ಷರವನ್ನೂ ಬರೆದು ಅಭ್ಯಾಸ ಮಾಡಲಾರಂಭಿಸಿದೆ.
ನಿರೂಪಣೆ ಬೇರೆ ದಾರಿ ಹಿಡಿಯಿತು. ಆಮೇಲೆ ಲಿಂಕ್ ಮಾಡುತ್ತೇನೆ!
Comments
Post a Comment