ಯತಿ ಸ್ವಂತೀ -226
14-08-2018
ಒಂದು ರೀತಿಯ ಒಣಹಮ್ಮು ನನ್ನೊಳಗೆ ಮನೆ ಮಾಡಿತ್ತು. ನಾನೇನಾದರೂ ಮಾಡಬಲ್ಲೆ ಎನ್ನುವ ಕೊಬ್ಬು ಅದು.
ಡಿಸೈನ್ ಡಿಪಾರ್ಟ್‍ಮೆಂಟಿನಲ್ಲಿ ಜಿ.ಎಂ.ರಿಂದ ಹಿಡಿದು ಎಲ್ಲರೊಂದಿಗೂ ಗೌರವ ಮತ್ತು ಪ್ರೀತಿಯಿಂದ ವಿನಂತಿಸಿಕೊಳ್ಳುವಂತೆ ಮಾತಾಡುತ್ತಿದ್ದೆ. ನನಗೆ ಬಲಗಣ್ಣು ಎಡಗಣ್ಣು ಆಗಿದ್ದರು ಜಿನಿ ಮತ್ತು ರಾಮ.
ಜೆಟಿ ಅವರು ನನ್ನನ್ನು ಮೆಲ್ಲನೆ ಕೇಳಿದರು “ನೀವಿಲ್ಲಿ ಮೂರು ವರ್ಷದ ಮೇಲ್ಪಟ್ಟು ಇದ್ದೀರಿ ಅಲ್ವಾ? ಎಲ್ಲರ ಸ್ವಭಾವದ ಬಗೆಗೆ ಹೇಳಿ.” ಆಗ ನಾನು ಎಚ್ಚೆತ್ತುಕೊಳ್ಳಬೇಕಿತ್ತು. ನನಗೆ ಯಾವ ಅಧಿಕಾರವಿತ್ತು ಇತರರ ಬಗೆಗೆ ಮಾತನಾಡೋಕ್ಕೆ?
ಆದರೆ ಊಹೂಂ. ಆ ಧಿಮಾಕು ಕೆಲಸ ಮಾಡಿತು. ಅವರು ಹೀಗೆ, ಇವರು ಹಾಗೆ ಎಂದು ಇದ್ದದ್ದು ಇದ್ದಂಗೆ ಹೇಳಿದೆ. ಎದೆಯ ಮೇಲೆ ಯಾರೂ ಎದ್ಬಂದು ಒದೆಯಬಾರದಲ್ವಾ?
ನನಗೆ ಬೇಕಾದವರೊಬ್ಬರು ಬೇರೆ ಡಿಪಾರ್ಟ್‍ಮೆಂಟಿಗೆ ಕಳಿಸಲ್ಪಟ್ಟಿದ್ದರು. ಅವರ ಜಾಗಕ್ಕೆ ಬಂದವರನ್ನು ಅವರ ಸಹೋದ್ಯೋಗಿಗಳ ಎದುರಿಗೆ ಕ್ಯಾಂಟೀನಿನಲ್ಲಿ ಅವಮಾನ ಮಾಡಿದ (ಅಪ)ಕೀರ್ತಿಯೂ ನನ್ನ ತಲೆಯ ಮೇಲಿತ್ತು. ಆ ಮನುಷ್ಯ ಹೇಳಿದ್ದರು. ನಿನಗೆ ಸರಿಯಾಗಿ ಬುದ್ಧಿ ಕಲಿಸ್ತೀನಿ ಅಂತ.
ಈಗ ನನ್ನ ತಲೆ ಕೆಲಸ ಮಾಡಿತ್ತು. ಆ ಮನುಷ್ಯನಿಗಿಂತ ಹಿಂದೆ ಇದ್ದವರೇ ವಾಸಿ ಎಂದುಬಿಟ್ಟೆ. ನಂಬಿ, ಬಿಡಿ, ಆ ವರ್ಗಾವಣೆ ಆಗಿಬಿಟ್ಟಿತು!
ಮತ್ತೊಬ್ಬ ಯುವಕ ಬೇರೆ ಡಿಪಾರ್ಟ್‍ಮೆಂಟಿನಿಂದ ಅಕೌಂಟ್ಸ್‍ಗೆ ಬಂದ. ಅವನೊಬ್ಬ ಜಗಳಗಂಟ ಎಂದು (ಕು)ಪ್ರಸಿದ್ಧನಾಗಿದ್ದ. ಅಯ್ಯೋ ನಮ್ಮ ಡಿಪಾರ್ಟ್‍ಮೆಂಟಿನ ಒಗ್ಗಟ್ಟು ಮುರಿಯುತ್ತಾನೆ ಎಂದುಕೊಂಡೆವು. ಪಾಪ, ಅವ ಒಳ್ಳೆಯವ. ಇಂದಿಗೂ ಅವನೊಂದಿಗೆ ನನ್ನ ಸ್ನೇಹ ಭದ್ರವಾಗಿಯೇ ಇದೆ!
ಮದುವೆ ಬಂದಿತು. ಮದುವೆಯ ನಂತರ ಎರಡು ತಿಂಗಳು ಸುಮ್ಮನಿದ್ದರು ಜೆಟಿ. ನಂತರ ‘ಯತಿರಾಜ್ ನೀನು ಹೊರಗೆ ಹೊರಡಲು ತಯಾರಾಗು’ ಎಂದರು.
ಮೊಟ್ಟಮೊದಲ ಜಾಗ ಯಾವುದೂಂತೀರಿ? ಸಿಂಗ್ರೌಲಿ ಕಲ್ಲಿದ್ದಲು ಗಣಿಗಳು!
ಹೇಗೆ ಹೋಗುವುದು ತಿಳಿಯದು. ಈಗಿನಂತೆ ಗೂಗಲಾಚಾರ್ಯ ಇರಲಿಲ್ಲ. ಹಣ ಕೊಡುವ ವಿಷಯ ಬಿಟ್ಟರೆ ಹಣಕಾಸು ಇಲಾಖೆ ಮತ್ತು ನಮ್ಮ ಸಂಬಳಕ್ಕಾಗಿ ನಮ್ಮ ಪಂಚ್ ಕಾರ್ಡ್ ನೋಡುತ್ತಿದ್ದ ಪರ್ಸನಲ್ ಡಿಪಾರ್ಟ್‍ಮೆಂಟ್ ಸಹಾಯವೂ ನಮಗಿರಲಿಲ್ಲ ಈ ವಿಷಯದಲ್ಲಿ ಆಗ.
“ಭೋಪಾಲ್ ಆಫೀಸಿಗೆ ಫೋನು ಮಾಡ್ರಿ” ಎಂದರು ಬಾಸ್ ಅಯ್ ಮೀನ್ ಜೆಟಿ.
ಅಲ್ಲೊಬ್ಬ ಇದ್ದ ನಮ್ಮ ಸಹೋದ್ಯೋಗಿ ರವಿ ಇಂಗ್ಳೆ.
ಅವನಂದ “ನೀನು ಸತ್ನಾಗೆ ಬಂದುಬಿಡು. ಅಲ್ಲಿ ನಟರಾಜ್ ಹೊಟೇಲ್‍ನಲ್ಲಿ ನಿನಗೆ ರೂಮ್ ಬುಕ್ ಆಗಿದೆ”.
ಸರಿ, ಟ್ರೈನಿನಲ್ಲಿ ಹೊರಟೆ. ಪತ್ನಿಗೆ ಬೇಸರ. ನನಗೂ ಬೇಸರ. ಆದರೆ ಹೊಟ್ಟೆಪಾಡು. ಕರ್ತವ್ಯದ ಕರೆ!
ಟ್ರೈನು ಹತ್ತಿ ಹೊರಟೆ. ಟ್ರೈನಿನ ಪ್ರಯಾಣ ನನಗೆ ಹೊಸದಲ್ಲ. ಒಂಟಿಯಾಗಿ ಆರೇಳು ಗಂಟೆ ಮದ್ರಾಸಿಗೆ ಹೋಗಿದ್ದೆ. ಆದರೆ ಈಗ ಓವರ್‍ನೈಟ್ ಜರ್ನಿ. ಅಬ್ಬಾ... ಒಂಟಿ ಪ್ರಯಾಣ ಬೋರು. ಯಾವಾಗ ಸತ್ನಾ ತಲುಪಿಯೇನೋ ಅನ್ನಿಸಿತ್ತು.
Comments
Post a Comment