ಯತಿ ಸ್ವಂತೀ -225
13-08-2018
ವೃತ್ತಿ ಜೀವನ ಅದರ ಪಾಡಿಗೆ ಸಾಗುತ್ತಿತ್ತು. ನನ್ನ ಬಾಸ್ ಜೆಟಿ ಅವರ ಮಾತುಕತೆ ಅವರ ಚೇಂಬರ್‍ನಲ್ಲಿ ಮುಂದುವರೆದಿತ್ತು.
ಅವರ ಚೇಂಬರ್ ಎದುರಿಗೆ ಎರಡು ಸಾಲು ಟೇಬಲ್ಲುಗಳು. ಅವರ ಟೇಬಲ್‍ಗೆ ಒಂದು ಕರೆಗಂಟೆ ಇತ್ತು. ಅದನ್ನೊಮ್ಮೆ ಒತ್ತಿ ಕಿರ್ರ್ ಎನ್ನಿಸಿ ಗಾಜಿನ ಕಿಟಕಿಯಿಂದ ಹೊರಗೆ ನೋಡುತ್ತಿದ್ದರು. ಅವರಾರನ್ನು ನೋಡುತ್ತಿರುವರೋ ಆ ವ್ಯಕ್ತಿ ಅವರ ಬಳಿಗೆ ಹೋಗಬೇಕು.
ಇಂಟರ್‍ಕಾಮ್ ನಮ್ಮೆಲ್ಲರ ಟೇಬಲ್ ಮೇಲಿತ್ತು. ಜೊತೆಗೆ ಮಾರ್ಕೆಟಿಂಗ್ ಕಟ್ಟಡಕ್ಕೆ ಒಂದು ಟೆಲಿಫೋನ್ ಎಕ್ಸ್ ಚೇಂಜ್ ಇತ್ತು. ನಾವು ನಮ್ಮ ಟೇಬಲ್ ಮೇಲಿನ ರಿಸೀವರ್ ಎತ್ತಿದೊಡನೆ ಕೆಳಗಿನ ಫ್ಲೋರ್‍ನಲ್ಲಿದ್ದ ಮೇಡಂ ಒಬ್ಬರು ‘ನಂಬರ್ ಹೇಳ್ರೀ’ ಅನ್ನುತ್ತಿದ್ದರು. ನಾವು ನಂಬರ್ ಕೊಟ್ಟು ಫೋನಿಟ್ಟುಬಿಡಬೇಕು. ಕೆಲವು ಸಮಯದ ನಂತರ ನಮ್ಮ ಟೇಬಲ್ ಮೇಲಿನ ಟೆಲಿಫೋನ್ ರಿಂಗ್ ಆಗುತ್ತಿತ್ತು. ಅವರು ಕನೆಕ್ಟ್ ಮಾಡಿದ್ದಾರೆ ಎಂದರ್ಥ. ಅಥವಾ ಹೊರಗಿನಿಂದ ನಮಗೆ ಕರೆ!
ಒಮ್ಮೊಮ್ಮೆ ಆ ಮೇಡಂ ಫೋನೆತ್ತಿದೊಡನೆ ‘ಲೈನ್ಸ್ ಇಲ್ಲಾರೀ’ ಎಂದು ಫೋನ್ ಕುಕ್ಕುತ್ತಿದ್ದರು. ನಮಗೆ ಮೈ ಉರಿದುಹೋಗುತ್ತಿತ್ತು. ಅವರ ಮಜಬೂರಿ ಏನೆಂದು ನಮಗೇನು ಗೊತ್ತಿರುತ್ತೆ?
ನಮ್ಮ ಮರಿ ಬಾಸ್ ‘ಛೇ ಈ ಮೇಡಂನ ಕಟ್ಕೊಂಡು ಸಾಕಾಗಿದೆ!’ ಎಂದು ಉದ್ಗರಿಸಿದರು ಒಮ್ಮೆ. ಏಕೆಂದರೆ ಆಕೆ ಬಹಳ ಸಲ ಕೇಳಿದರೂ ಹೊರಗಿನ ಒಂದು ನಂಬರ್‍ಗೆ ಕನೆಕ್ಟ್ ಮಾಡಿರಲಿಲ್ಲ. ‘ನೀವ್ಯಾಕೆ ಕಟ್ಕೋತೀರಿ ಸಾರ್, ಅವರ ಗಂಡ ಕಟ್ಕೊಂಡು ಆಗಿದೆ’ ಎಂದಿದ್ದೆ ನಾನು. ಎಲ್ಲರೂ ಕಿಸಕ್ ಎಂದು ನಕ್ಕಿದ್ದರು. ನಮ್ಮ ಮರಿ ಬಾಸ್ ಮಾತ್ರ ನನ್ನನ್ನು ದುರುಗುಟ್ಟಿಕೊಂಡು ನೋಡಿದ್ದರಷ್ಟೇ.
ಸ್ವಲ್ಪ ತಲೆಹರಟೆಯೇ ನಾನು. ಸ್ವಲ್ಪ ... ಉಹೂಂ ಸಾಕಷ್ಟು ... ಉಹೂಂ... ಬೇಕಾದಷ್ಟು ತಲೆಹರಟೆ.
ಗ್ಲಿಬ್ ಟಂಗ್ ಮತ್ತು ಗಿಫ್ಟ್ ಆಫ್ ಗ್ಯಾಬ್ ಎರಡೂ ನನಗೆ ಮೈ ಹತ್ತಿತ್ತು.
ವಿಶೇಷವಾಗಿ ಹೊರಗಿನ ಗ್ರಾಹಕರಿಗೆ ‘ನ ಬ್ರೂಯಾತ್ ಸತ್ಯಂ ಅಪ್ರಿಯಂ’ ಅನ್ನೋ ಹಾಗೆ ಅವರ ಜನರೇಟರ್ ಸಿದ್ಧ ಆಗಿರದಿದ್ದರೂ ಅಂಡರ್ ಪ್ರಾಸೆಸ್ ಅನ್ನೋದು. ಇನ್ನೂ ಅದರ ಡಿಸೈನ್ ಕೂಡ ಸಿದ್ಧವಿಲ್ಲದ ಸಮಯವದು! ಇದು ಗಿಫ್ಟ್ ಆಫ್ ಗ್ಯಾಬ್. ಅವರ ಪ್ರಶ್ನೆಗೂ ನನ್ನ ಉತ್ತರಕ್ಕೂ ನಡುವೆ ಚಿಕ್ಕ ಗ್ಯಾಪ್ ಕೂಡ ಕೊಡದಿರುವುದರಿಂದ, ನಾನು ಸುಳ್ಳೊಂದನ್ನು ಆಲೋಚಿಸಿ ಹೇಳಿಲ್ಲವೆಂದು ಅವರಿಗೆ ಅನ್ನಿಸಬೇಕು.
ಗ್ಲಿಬ್ ಟಂಗ್... ಇದೂ ಅಂತಹದ್ದೇ.
ಇನ್ನೂ ಒಂದು ದುಷ್ಟ ಬುದ್ಧಿ ಇತ್ತೆನಗೆ. ಈಗ ನೀವು, ನಿಮ್ಮ ಗೆಳೆಯ ನನ್ನಿಂದ ಹತ್ತಡಿ ದೂರದಲ್ಲಿ ಏನೋ ವೈಯಕ್ತಿಕ ವಿಷಯ ಮಾತಾಡಿಕೊಳ್ತಿರ್ತೀರಿ. ನನಗಂತೂ ಅದು ಏನೇನೂ ಸಂಬಂಧವಿರದ ಸಂಗತಿ. ಆದರೂ ನನ್ನ ಕಿವಿಗೆ ನಿಮ್ಮ ಮಾತುಗಳು ಬಿದ್ದರೆ ಮುಗಿಯಿತು. ನನ್ನ ಕಡೆಯಿಂದ ಒಂದು ವಾಗ್ಬಾಣ.
ಅದು ನಿಮ್ಮನ್ನು ನೋಯಿಸಬಹುದು ಎನ್ನುವ ಲಕ್ಷ್ಯವೂ ಇಲ್ಲದಂತಹ ಕೇರ್‍ಲೆಸ್ ಮನೋಭಾವ.
Comments
Post a Comment