ಯತಿ ಸ್ವಂತೀ -224
12-08-2018
ನನ್ನ ಗೆಳೆಯರು ಮಹಾ ತರಲೆಗಳು. ಉಷಾಳನ್ನು ಛತ್ರದ ಬಾಗಿಲಿಗೆ ಕರೆಸಿದರು. ತಮ್ಮನ್ನು ತಾವು ಪರಿಚಯಿಸಿಕೊಂಡು, ‘ರೀ ಉಷಾ, ನೀವು ನಿಮ್ಮ ಗಂಡನಿಗೆ ಎರಡನೇ ಹೆಂಡ್ತಿ ಅಂತ ಹೇಳಿದ್ದಾನೇನ್ರೀ ಯತೀ?’ ಅಂದುಬಿಡೋದೇ!
ಪಾಪ, ಅವಳು ನಕ್ಕರೂ ಮನದೊಳಗೆ ಕಸಿವಿಸಿಗೊಂಡಿರುತ್ತಾಳೆ. ನಂತರ ರವಿಯನ್ನು ಪರಿಚಯಿಸಿ ‘ಇವನೇ ಯತಿಯ ಮೊದಲ್ನೇ ಹೆಂಡ್ತಿ. ಸದಾ ಅವನಿಗೆ ಇಷ್ಟು ದಿನ ಅಂಟಿಕೊಂಡೇ ಇದ್ದ’ ಎಂದು ಹೇಳಿದರು.
ರಾತ್ರಿ ಎಲ್ಲರೂ ಮನೆಗೆ ಹೊರಟುಹೋದರೂ, ನನ್ನ ಶಿಷ್ಯರಾದ ರಾಮ ಮತ್ತು ಜಿನಿ ನನ್ನೊಂದಿಗೆ ನನ್ನ ರೂಮಿನಲ್ಲಿಯೇ ಮಲಗಿದ್ದರು. ಬಹುಶಃ ಬೆಳಗಿನ ಜಾವ, ಪೀ.................ಢುಂ ಢುಂ ಅಂತ ಜೋರಾಗಿ ಗಟ್ಟಿಮೇಳ ಕೇಳಿಸಿತ್ತು.
ಜಿನೇಂದ್ರ ‘ಯತೀ, ಯಾರೋ ನಿನ್ ಹೆಂಡ್ತಿಗೆ ತಾಳಿ ಕಟ್ತಿದಾರೆ’ ಅಂತ ನನ್ನನ್ನು ಎಬ್ಬಿಸಿದ. ಬೆಚ್ಚಿ ಎದ್ದು ಕುಳಿತೆ.
ನನಗೆ ನನ್ನ ಪತ್ನಿ(ಆಗುವವಳ)ಮನೆಯ ಕಡೆ ಶಾಸ್ತ್ರಗಳು ತಿಳಿದಿರಲಿಲ್ಲ. ತಾಯಿ ಕಟ್ಟಿದ ತಾಳಿ ಅಂತ ನಾನು ಕಟ್ಟೋ ತಾಳಿಗೆ ಮೊದಲು ಅವಳ ತಾಯಿ ಅವಳಿಗೆ ಒಂದು ತಾಳಿ ಕಟ್ಟುವುದು ಶಾಸ್ತ್ರ ಅಂತೆ!
ನಂತರ ಒಂದೊಂದೇ ಶಾಸ್ತ್ರಗಳು ಶುರುವಾದವು. ನನ್ನ ಭಾವಮೈದುನರಲ್ಲಿ ಒಬ್ಬರು ನನ್ನ ಕಾಶಿಯಾತ್ರೆ ಸಮಯದಲ್ಲಿ ನನಗೆ ಕೊಡೆ ಹಿಡಿಯಬೇಕಿತ್ತು. ಆದರೆ ಅವರು ಬಿಜಿ ಇದ್ದಿದ್ದರಿಂದ ನನ್ನ ಜ್ಯೂನಿಯರ್ ಜಿನೇಂದ್ರ ನನಗೆ ಛತ್ರಿ ಹಿಡಿದಿದ್ದ!
ಸಂಬಂಧಮಾಲೆ, ಉಯ್ಯಾಲೆ ಮುಗಿಸಿ ಅತ್ತೆಯರಿಬ್ಬರೂ ಅವರವರ ಸೊಸೆ, ಅಳಿಯನ ಕೈ ಹಿಡಿದು ಒಳಗೆ ಕರೆದೊಯ್ದರು. ಧಾರೆ ಆದ ನಂತರ ಮಾಂಗಲ್ಯ ಧಾರಣೆ. ಮಠದ ಸ್ವಾಮಿಗಳು ಬಂದು ಆಶೀರ್ವಾದ ಮಾಡಿದರು.
ರಿಸೆಪ್ಷನ್‍ನಲ್ಲಂತೂ ನನಗೆ ಯಾರೂ ತಿಳಿಯದು. ಎಲ್ಲರಿಗೂ ಕೈ ಕುಲುಕಿ, ಕೈ ಮುಗಿದು, ನಕ್ಕು ಬಾಯಿ, ಕೈ ಎರಡೂ ನೋವು ಬಂದಿತ್ತು.
ನನ್ನ ಗೆಳೆಯರು ಕೆಲವರು ನಮ್ಮ ಉಷಾಳ ನೆಂಟರೊಂದಿಗೆ ಇಸ್ಪೀಟ್ ಆಡಲು ಹೋಗಿ, ಆ ಸ್ಟೇಕ್ ನೋಡಿ ಬೇಡವೆಂದು ಎದ್ದು ಬಂದರಂತೆ!
ಮರುದಿನ ಬೆಳಗ್ಗೆ ನನ್ನ ತಂಗಿ ಮಕ್ಕಳು ರಾಜು ಮಾಮಾ ನಾವು ಝೂ ನೋಡಬೇಕು ಎಂದವು.
ಸರಿ, ನಾನು ನನ್ನ ಪತ್ನಿ ನನ್ನ ತಂಗಿ ಮಕ್ಕಳನ್ನು ಕರೆದುಕೊಂಡು (6 ಮತ್ತು 3 ವರ್ಷದವು) ಝೂಗೆ ಹೋದೆವು!
ಎಲ್ಲರೂ ಹೊರಟುಹೋದರು. ಮೂರನೆಯ ದಿನ ನಾನೂ, ನನ್ನ ಪತ್ನಿ, ಭಾವಮೈದುನಂದಿರು ಸರಸ್ವತಿ ಟಾಕೀಸಿನಲ್ಲಿ ಸೌಭಾಗ್ಯಲಕ್ಷ್ಮಿ ಸಿನಿಮಾ ನೋಡಿದ ನೆನಪು.
ನಂತರ ಸುಮಾರು ನಲವತ್ತು ಜನ ಬೃಂದಾವನ ಉದ್ಯಾನವನಕ್ಕೆ ಹೋದೆವು. ಅಲ್ಲಿ ತೆಗೆದ ಒಂದು ಪಟ ಎನ್‍ಲಾರ್ಜ್ ಆಗಿ ಇಂದಿಗೂ ನಮ್ಮ ಮನೆಯಲ್ಲಿ ರಾರಾಜಿಸುತ್ತಿದೆ. ಅದರಲ್ಲೇ ನನ್ನನ್ನು ಕಂಡವರು ರಮೇಶ್ ಅರವಿಂದ್ ತರಹ ಇದ್ದೀಯ ಅಂತಾರೆ.
ಇದಕ್ಕಿಂತ ಘೋರವೆಂದರೆ, ‘ಆ ಫೋಟದಲ್ಲಿರೋದು ನಿಮ್ಮ ತಮ್ಮಾನಾ?’ ಅಂತಾರೆ! ಹೌದು, ನನ್ನ ತಮ್ಮ, ಅವಳ ತಂಗಿ ಮದುವೆ ಆಗಿದ್ದಾರೆ ಎನ್ನುತ್ತಿದ್ದೆವು!
Comments
Post a Comment