ಯತಿ ಸ್ವಂತೀ -223



11-08-2018

ಇಂದು ನನ್ನ ಜನುಮ ದಿನ! ಹಿಂದಿನ ಯಾವುದೋ ವರ್ಷಕ್ಕೆ ಹೋಗಿದ್ದೇನೆ.

ಹ್ಞಾಂ... ಏನು ಹೇಳುತ್ತಿದ್ದೆ?

ಟ್ರೇಯಲ್ಲಿ ಸ್ಟೀಲ್ ಲೋಟಗಳಲ್ಲಿ ಕಾಫಿ, ಟೀ ತರಲು ಆರಂಭಿಸಿದ್ದರು ಆಗ ನಮ್ಮ ಕಂಪೆನಿಯಲ್ಲಿ.

ಎಂತಹ ಒಳ್ಳೆಯದಾಯಿತೂ ಅಂತೀರಿ.

ಷಾಪ್‍ನಿಂದ ಯಾರೋ ಸಹೋದ್ಯೋಗಿ ನನಗೆ ಇಂಟರ್‍ಕಾಂನಲ್ಲಿ ಕರೆ ಮಾಡಿದ. ಮೊಬೈಲ್ ಇರಲಿಲ್ಲ ಸ್ವಾಮೀ ಆಗ!

ಏನೋ ಅನಾಹುತ ಆಗಿದೆಯೇನೋ ಎಂಬಂತೆ ಸರ್ರೆಂದು ಓಡಿದ. ಬಾಗಿಲ ತಿರುವಿನಲ್ಲಿ ಕಾಫಿ, ಟೀ ಟ್ರೇ ಹಿಡಿದು ಕ್ಯಾಂಟೀನ್ ಸಹೋದ್ಯೋಗಿ ಬರುವುದಕ್ಕೂ ನಾನು ಅಲ್ಲಿ ಬಾಗಿಲ ಕಡೆ ತಿರುಗುವುದಕ್ಕೂ ಸಮಯ ಏಕವಾಯಿತು.

ಅಷ್ಟೇ!

ಢಾಂ ಎಂದು ಅವನಿಗೆ ಢಿಕ್ಕಿ ಹೊಡೆದಿದ್ದೆ. 

ಸೋಮವಾರ ಅಂದು. ಅಮ್ಮ ನಾನು ಹೊಸ ಖಾಕಿ ಕಲರ್ ಪ್ಯಾಂಟ್ ಹಾಕಿದ್ದನ್ನು ವಿರೋಧಿಸಿದರು. ಅವರ ಪ್ರಕಾರ ಸೋಮವಾರ ಹೊಸದು ಹಾಕಿಕೊಂಡರೆ ಸದಾ ಒದ್ದೆ. ಮಂಗಳವಾರ ಬೇಡ. ಬುಧ, ಗುರು, ಶುಕ್ರ ಓಕೆ. ಶನಿವಾರ ಹಾಕಿಕೊಂಡರೆ ಕೊಚ್ಚೆ ಆಗುತ್ತೆ. ಭಾನುವಾರ ಹೊಸತು ಧರಿಸಿದರೆ ಬೇಗ ಹರಿದುಹೋಗುತ್ತೆ.

ನಾನು ಇದನ್ನೆಲ್ಲಾ ನಂಬದವನು. ಹೋಗಮ್ಮ, ಇದನ್ನು ಯಾರು ನಂಬ್ತಾರೆ ಅಂತ ಹೊಸ ಖಾಕಿ ಕಲರ್ ಪ್ಯಾಂಟ್ ಧರಿಸಿ ಬಂದಿದ್ದೆ.

ಇಡೀ ಟ್ರೇಯ ಇಡೀ ಕಾಫಿ, ಟೀ ಲೋಟಗಳ ಪೇಯಗಳು ಅಷ್ಟೂ ನನಗೆ ಅಭಿಷೇಕ ಆಗಿದ್ದವು! ಆಮೇಲೆ ಹೋಗಿ ಟಾಯ್ಲೆಟ್‍ನಲ್ಲಿ ಪ್ಯಾಂಟು ತೊಳೆದುಕೊಂಡು ಒದ್ದೆ ಮಾಡಿಕೊಂಡಾಗ ಸೋಮವಾರ ಸದಾ ಒದ್ದೆ ಎಂದು ಅಮ್ಮ ರೇಗಿಸಿದಂತಾಗಿತ್ತು!

ಅನೇಕ ಊರುಗಳಿಗೆ ಇದುವರೆಗೆ ಹೋಗಿದ್ದೆ. ಆದರೆ ಎಲ್ಲವೂ ಬಿಲ್ಲಿಂಗ್,  ಔಟ್‍ಸ್ಟ್ಯಾಂಡಿಂಗ್ ಕಲೆಕ್ಷನ್ ಇಂತಹ ಕೆಲಸಗಳಿಗೇ ಹೋಗಿದ್ದುದು ನಾನು.

ನನ್ನ ಹೊಸ ಬಾಸ್ ಹೇಳಿದರು. ಯತಿರಾಜ್, ನೀನು ಇಂಜಿನಿಯರ್, ಈ ಕೆಲಸ ಮಾಡಿದ್ರೆ ಸಾಕಾ. ನಿನ್ನ ಇಂಜಿನಿಯರಿಂಗ್ ಬ್ಯಾಕ್‍ಗ್ರೌಂಡ್ ವೇಸ್ಟ್ ತಾನೇ? ಈಗೆಲ್ಲಾ ನೀನು ಮಾಡ್ತಿರೋದು ಕೇವಲ ಪಿ.ಆರ್.ಓ. ಕೆಲಸ. ಆದ್ದರಿಂದ ನಿನ್ನನ್ನು ಹೊರಗೆ ಕಳಿಸುತ್ತೇನೆ. ನೀನು ಎಕ್ಸೆಕ್ಯೂಷನ್ ಬಿಟ್ಟು ಟೆಂಡರಿಂಗ್ ಕಡೆಗೆ ಸೇರುವಂತೆ. 

ನಿನ್ನ ಮದುವೆ ಆಗಲಿ. ಆಮೇಲೆ ನಿನ್ನನ್ನು ಟೂರ್ ಕಳಿಸುತ್ತೇನೆ ಎಂದರು ಜೆಟಿ.

ನನ್ನ ಮದುವೆಯ ದಿನ ಹತ್ತಿರವಾಯಿತು.

ಫೆಬ್ರವರಿ ಒಂದು. ಭಾನುವಾರ.

ಅಂದು ಮಧ್ಯಾಹ್ನ ಬಸ್ಸೊಂದು ನಮ್ಮ ಮನೆಯ ಬಳಿಗೆ ಬಂದಿತು. ಅದರಲ್ಲಿ ಆಗಲೇ ಹುಡುಗಿಯ ಕಡೆಯ ನೆಂಟರೂ, ನಮ್ಮ ನೆಂಟರೂ ಕುಳಿತಿದ್ದರು. ನಾನೂ, ನನ್ನ ಮನೆಯವರೂ ಬಸ್ ಹತ್ತಿದೆವು.

ಬಸ್ ಮೈಸೂರು ತಲುಪಿತು.

ವಿದ್ಯಾಭಾರತಿ ಛತ್ರ ಉತ್ತರಾದಿ ಮಠದ ರಸ್ತೆಯಲ್ಲಿದೆ. ಅಲ್ಲಿಗೆ ಹೋಗಿ ತಲುಪಿದೆವು.

ಹೋದೊಡನೆ ತಿಂಡಿ. ನಂತರ ವರಪೂಜೆ ಆಯಿತು. ನಂತರ ಎಲ್ಲರಿಗೂ ನೆಲದ ಮೇಲೆ ಬಾಳೆಯೆಲೆಯಲ್ಲಿ ಊಟ.

ನನ್ನ ಗೆಳೆಯರು ಬಂದರು. ಎಲ್ಲರಿಗೂ ಸಂಭ್ರಮ. ಅದರಲ್ಲಿ ಒಬ್ಬ ರವಿ. ಅವನು ನನಗೆ ಎಷ್ಟು ಅಂಟಿಕೊಂಡಿರುತ್ತಿದ್ದನೆಂದರೆ ಅವನನ್ನು ನನ್ನ ಹೆಂಡತಿ ಎನ್ನುತ್ತಿದ್ದರು ಎಲ್ಲರೂ!

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102