ಯತಿ ಸ್ವಂತೀ -222


10-08-2018

ಹೊಸ ಬಾಸ್ ಬಂದರಲ್ಲ. ಅವರ ಹೆಸರು ಜೆಟಿ ಎಂದುಕೊಳ್ಳೋಣ. ಅವರನ್ನು ನಾವು ಕರೆಯುತ್ತಿದ್ದುದೇ ಹಾಗೆ.

ಬಂದವರೇ ಎಲ್ಲರನ್ನೂ ಕರೆದು ಯಾರು ಯಾರು ಯಾವ ಯಾವ ಕೆಲಸ ಮಾಡುವರೆಂದು ಅರಿತರು. ಮಹಾನ್ ಚಾಣಾಕ್ಷ ಈ ಜೆಟಿ.

ನನ್ನನ್ನು ಕರೆದರು. ನನಗೋ ಥ್ರಿಲ್. ಸರಕಾರ್‍ನೇ ಆಕೆ ಮೆರಾ ಹಾಲ್ ತೋ ಪೂಛಾ ಅನ್ನೋ ಹಾಗೆ ಬಾಸ್ ನನ್ನನ್ನು ವಿಚಾರಿಸುತ್ತಿದ್ದಾರೆ! ಈ ಭಾಗ್ಯಕ್ಕೆ ಎಣೆಯುಂಟೇ!

ನನಗೆ ಮದುವೆ ನಿಶ್ಚಯವಾಗಿರುವ ವಿಷಯವೂ ಅವರಿಗೆ ತಿಳಿಯಿತು. ಅದಕ್ಕೇ ನನಗೆ ‘ಯತಿರಾಜ್, ನೀನು ಈಗ ಕೇವಲ ದೈಹಿಕವಾಗಿ ಇಲ್ಲಿದ್ದೀ. ಮಾನಸಿಕವಾಗಿ ಮೈಸೂರಿಗೆ ಹೋಗಿಬಿಟ್ಟಿದ್ದೀ’ ಎಂದು ರೇಗಿಸುತ್ತಿದ್ದರು ಬಾಸ್.

ಒಂದು ತಿಂಗಳಿತ್ತು ನನ್ನ ಮದುವೆಗೆ. ನನ್ನನ್ನು ದಿನಾ ಬೆಳಗ್ಗೆ ಅವರೆದುರಿಗೆ ಕೂತುಕೊಳ್ಳಲು ಹೇಳುತ್ತಿದ್ದರು. ಡಿಪಾರ್ಟ್‍ಮೆಂಟಿಗೆ ಬಂದ ಕಾಗದಗಳನ್ನೆಲ್ಲಾ ನನ್ನ ಮುಂದಿಟ್ಟು ‘ಯಾವ ಯಾವ ಕಾಗದ ಯಾರು ಯಾರಿಗೆ ಹೇಳು’ ಎನ್ನುತ್ತಿದ್ದರು. ನನಗೆ ಥ್ರಿಲ್ಲೋ ಥ್ರಿಲ್.

ಮಾರ್ಚ್ 83ರಿಂದ ಡಿಸೆಂಬರ್ 86ರ ವೇಳೆಗೆ ಸಾಕಷ್ಟು ಅನುಭವ ಪಡೆದಿದ್ದೆ. ನಿಜ ಹೇಳಬೇಕೆಂದರೆ ನಮ್ಮ ಡಿಪಾರ್ಟ್‍ಮೆಂಟಿನ ಬಾಸ್‍ನಿಂದ ಆಫೀಸ್‍ಬಾಯ್ ವರೆಗೆ ಅವರಿಲ್ಲದಿದ್ದಾಗ ಅವರುಗಳ ಕೆಲಸ ಮಾಡಿದ ಅನುಭವವಿತ್ತು!

ನಮ್ಮ ಆಫೀಸ್‍ಬಾಯ್‍ಗೆ ಮದುವೆ ಆದಾಗ ಆಫೀಸ್‍ನಲ್ಲಿ ಮುಕ್ಕಾಲು ಜನಕ್ಕೆ ಲೀವ್ ಕೊಟ್ಟರು ಆಗಿನ ಬಾಸ್. ನಾನೂ ಹೋಗುವೆ ಎಂದಾಗ ಅರ್ಧ ಜನಕ್ಕೆ ಲೀವ್ ಇಲ್ಲ ಎಂದರು. ನಾನೊಬ್ಬ ಹೋಗದಿದ್ದರೆ ಉಳಿದೆಲ್ಲರೂ ಹೋಗಬಹುದೆಂಬ ಧಾರಾಳತನ (!) ತೋರಿದ್ದರು ನಮ್ಮ ಆಗಿನ ಬಾಸ್!

ಹೇಗಿದೆ ನನ್ನ ಪಾತ್ರ!

ಹೊಸ ಬಾಸ್ ಬಳಿ ‘ಈ ಕಾಗದ ಇವರಿಗೆ ಹೋಗಬೇಕು, ಇದು ಇವರಿಗೆ’ ಎಂದು ಹೇಳುತ್ತಿದ್ದೆ. ಅವರು ಅದರ ಪ್ರಕಾರ ಮಾರ್ಕ್ ಮಾಡುತ್ತಿದ್ದರು. ನನ್ನ ಇನಿಷಿಯಲ್ ವೈಆರ್. ನನ್ನ ಎಲ್ಲರೂ ವಯ್ಯಾರ ಎಂದು ರೇಗಿಸುತ್ತಿದ್ದರು. ಏಕೆಂದರೆ ನಾನು ನಡೆಯುವುದೇ ಕಮ್ಮಿಯಂತೆ! ಓಡುತ್ತಿದ್ದುದೇ ಜಾಸ್ತಿಯಂತೆ.

ಷಾಪ್, ಡಿಸೈನ್, ಪ್ರೊಡಕ್ಷನ್ ಪ್ಲಾನಿಂಗ್, ಪೆಯಿಂಟಿಂಗ್, ಟೆಸ್ಟಿಂಗ್, ಡಿಸ್ಪ್ಯಾಚ್ ಎಲ್ಲೆಡೆಯೂ ನನ್ನ ಜೋರು ಇರುತ್ತಿತ್ತು. ಕೆಲಸ ಆಗುವವರೆಗೂ ಪಟ್ಟು ಹಿಡಿಯುತ್ತಿದ್ದೆ. ಅದು ಎಲ್ಲರಿಗೂ ಗೊತ್ತಿದ್ದ ವಿಷಯವೇ!

ನನ್ನ  ಈ ಡಿಸೈನ್ ಅವರ ಮೇಲಿನ ಜೋರು ಮುಂದೊಮ್ಮೆ ನನ್ನ ಬಡ್ತಿಗೇ ಕುತ್ತಾಗಿತ್ತು. ಅದು ಆಮೇಲೆ!

ನಾನು ಓಡುತ್ತಿದ್ದುದಕ್ಕೆ ಉದಾಹರಣೆ. ಮೊದಲೆಲ್ಲಾ ನಮಗೆ ಬಿಳಿ ಬಣ್ಣದ ಪಿಂಗಾಣಿ ಕಪ್ ಮತ್ತು ಸಾಸರ್‍ನಲ್ಲಿ ಕಾಫಿ ಟೀ ಬರುತ್ತಿತ್ತು. ಹ್ಞಾಂ... ಇದನ್ನು ವಿವರಿಸಬೇಕು. ನಮ್ಮ ಕ್ಯಾಂಟೀನಿನಿಂದ ಗಾಡಿಯಲ್ಲಿ ದೊಡ್ಡ ಟೀ ಮತ್ತು ಕಾಫಿ ಫ್ಲಾಸ್ಕ್ ಇಟ್ಟುಕೊಂಡು ತಳ್ಳಿಕೊಂಡು ಬರುತ್ತಿದ್ದರು. ನಂತರ ಫ್ಲಾಸ್ಕ್ ಅನ್ನು ಎರಡನೆ ಮಹಡಿಗೆ ತಂದು, ಒಂದು ಟ್ರೇಯಲ್ಲಿ ಕಾಫಿ ಮತ್ತು ಟೀ ಕಪ್‍ಗಳನ್ನು ಜೋಡಿಸಿಕೊಂಡು ಎಲ್ಲರಿಗೂ ಹಂಚುತ್ತಿದ್ದರು. ನಾಲ್ಕೈದು ಸಲ ಬರಬೇಕಿತ್ತು ಅವರು.

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102