ಯತಿ ಸ್ವಂತೀ -219-
07-08-2018
ನಮ್ಮ ಅತ್ತೆಯವರ (ಭಾವಿ) ದೊಡ್ಡ ಅಕ್ಕ ಬಂದಿದ್ದರಲ್ಲ, ಅವರು ಇದ್ದುದು ಒಂಟಿಕೊಪ್ಪಲ್ ಮೂರನೆಯ ಮೆಯಿನ್‍ನಲ್ಲಿ. ಅವರ ಪಕ್ಕದ ಮನೆಯಲ್ಲಿ ನಮ್ಮ ಅಜ್ಜ ಇದ್ದರು. ನಮ್ಮ ಅತ್ತೆಯ ಅಕ್ಕ ನಮ್ಮ ತಾಯಿಯನ್ನು ಅವರು ಮದುವೆಯಾಗುವ ಮೊದಲಿನಿಂದ ಬಲ್ಲರಂತೆ. ಆ ಮನೆಗೆ ನಮ್ಮ ದೊಡ್ಡ ಅತ್ತೆ ಮದುವೆಯಾಗಿ ಬಂದ ನಂತರವೇ ನಮ್ಮ ತಾಯಿಗೆ ಮದುವೆಯಾಯಿತಂತೆ.
‘ಎದುಗಿರಮ್ಮನ ಮಗ ಅಂದ ಮೇಲೆ ಇನ್ನೇನೂ ಮಾತಾಡಬೇಕಿಲ್ಲ ಭಾವ, ಮದುವೆ ಏರ್ಪಾಡು ಮಾಡೋಣ’ ಎಂದರು ನಮ್ಮ ದೊಡ್ಡ ಅತ್ತೆ(ಭಾವೀ!) ನನ್ನ ಉಷಾಳ ನಿಶ್ಚಿತಾರ್ಥ 12.12.1986ರಂದು ಮೈಸೂರಿನಲ್ಲಿ ಎಂದು ನಿಷ್ಕರ್ಷೆಯಾಯಿತು.
ಅಂದು ಬೆಳಗ್ಗೆ ಬಹಳವೇ ಶಾಂತಯುವಾಗಿದ್ದ ಬೆಂಗಳೂರು ಸಂಜೆಯ ವೇಳೆಗೆ ಕೋಮಿನ ದಳ್ಳುರಿಯಲ್ಲಿ ಬೇಯತೊಡಗಿತು.
ಏನೋ ಒಂದು ಚಿಕ್ಕ ಕಥೆಯ ಒಂದು ಪದ, ಪೇಪರ್ ಒಂದರಲ್ಲಿ ಬಂದು ದೊಡ್ಡ ಗಲಭೆಗೆ ಕಾರಣವಾಯಿತು.
ಇಲ್ಲಿ ಕಾರಣ ಕೆದಕುವುದಲ್ಲ ನನ್ನ ಆಸಕ್ತಿ. ಏಕೆಂದರೆ ಎಲ್ಲರೂ ಅವರವರ ಕಾರಣ ಕೊಡಬಲ್ಲರು. ಆದರೆ ಅದು ಹೇಗೆ ನನ್ನ ಜೀವನದಲ್ಲಿ ಒಂದಿಷ್ಟು ತುಯ್ತವನ್ನು ಉಂಟುಮಾಡಿತು ಎಂದು ಮಾತ್ರ ಹೇಳುತ್ತಿದ್ದೇನೆ.
ಹನ್ನೊಂದನೇ ತಾರೀಕಿನ ಹೊತ್ತಿಗೆ ಮೈಸೂರು ಹೊತ್ತಿ ಉರಿಯಿತು.
ನಾವು ಮೂರು ಕಾರುಗಳಲ್ಲಿ 12ರಂದು ಬೆಳಗ್ಗೆ ಬೆಂಗಳೂರಿನಿಂದ ಹೊರಟೆವು. ನಂಬಿದರೆ ನಂಬಿ, ಬಿಟ್ಟರೆ ಬಿಡಿ, ನಮ್ಮ ಮೂರು ಕಾರುಗಳನ್ನು ಬಿಟ್ಟರೆ ಇಡೀ ಬೆಂಗಳೂರು ಮೈಸೂರು ರಸ್ತೆ ಖಾಲಿ ಖಾಲಿ!
ಎದೆಯಲ್ಲಿ ಡವಡವ. ಯಾವ ಮೂಲೆಯಿಂದ ಯಾರು ಬಂದು ಆಕ್ರಮಣ ಮಾಡುವರೋ ಎಂದು. ಹಿಡಿಯಲ್ಲಿ ಎದೆಮಿಡಿತವನ್ನು ಬಚ್ಚಿಟ್ಟುಕೊಂಡು ಮೈಸೂರು ತಲುಪಿದೆವು.
ಅಲ್ಲಿ ನಮ್ಮ ಮಾವನವರೂ ಫಜೀತಿ ಅನುಭವಿಸಿದ್ದರು.
ನಿಶ್ಚಿತಾರ್ಥಕ್ಕೆ ಬೇಕಾದ ವಸ್ತುಗಳು, ಬಟ್ಟೆಗಳು, ಉಡುಗೊರೆಗಳು, ಅಡಿಗೆಗೆ ಬೇಕಾದ ಪದಾರ್ಥಗಳು ಯಾವುದೂ ಸಿಗುವಂತೆ ಇಲ್ಲ. ಎಲ್ಲರೂ ಅಂಗಡಿಗಳನ್ನು ಮುಚ್ಚಿಬಿಟ್ಟಿದ್ದರು.
ಮಾವನವರು ಮೈಸೂರಿನ ಹಿರಿಯ ಅಧಿಕಾರಿಗಳ ಬಳಿ ಹೋಗಿ ನಿಶ್ಚಿತಾರ್ಥ ನಡೆಸಲು ಅನುಮತಿ ಬೇಡಿದರು. ‘ಕುದುರೆ ಮೇಲೆ ರಸ್ತೆಯಲ್ಲಿ ಮೆರವಣಿಗೆ ಇದೆಯಾ?’ ಎಂದರಂತೆ ಅವರು. ಇವರು ಇಲ್ಲ ಎಂದ ಮೇಲೆ ಬಿಲ್ಡಿಂಗ್ ಒಳಗೇ ನಡೆಸಿ ಎಂದರಂತೆ ಅವರು.
ಕೃಷ್ಣಮೂರ್ತಿಪುರದ ರಾಮಮಂದಿರದ ಒಳಗೆ ನಾವೆಲ್ಲಾ ಸೇರಿದೆವು.
ಹುಡುಗಿಯನ್ನು ನೋಡಿ ನಮ್ಮ ದೊಡ್ಡಮ್ಮ, ‘ಅರೆ, ಇವಳಾ? ನಮ್ಮ ಭಜನೆಯ ಟ್ರೂಪ್‍ನಲ್ಲಿ ಹಾಡುತ್ತಿದ್ದಳು’ ಎಂದರು. ಅವರೇ ಸೂರ್‍ದಾಸ್ ಹಾಡುಗಳನ್ನು ಕನ್ನಡದಲ್ಲಿ ಬರೆದು ಹಾಡಿಸಿದ್ದರು. ಅವರ ಶಿಷ್ಯೆಯರಲ್ಲಿ ನನ್ನಾಕೆಯೂ ಕೂಡ ಒಬ್ಬಳಂತೆ.
ಅಂತೂ ಎಲ್ಲವೂ ಸುಸೂತ್ರವಾಗಿ ನಡೆಯಿತು. ನಾನು ಗಂಭೀರವಾಗಿ ಕೂತಿದ್ದೆ. ಮೊದಲನೇ ಸಲ ಎಂಗೇಜ್‍ಮೆಂಟ್ ಆಗುತ್ತಿತ್ತು (!) ಸೋ, ಸ್ವಲ್ಪ ಎಕ್ಸ್‍ಟ್ರಾ ಗಾಂಭೀರ್ಯವಿತ್ತು!!
ನಮ್ಮ ಮಾಮಿ, ‘ರಾಜಾ ನಗೋ’ ಎಂದರು. ಆಮೇಲಿನ ಪಟಗಳಲ್ಲಿ ನಗುತ್ತಲೇ ಇದ್ದೇನೆ.
ಊಟ ಮುಗಿಸಿ ನಮ್ಮ ಮಾವನವರ ಮನೆಗೆ ಹೋದೆವು. ಜಯನಗರದಲ್ಲಿತ್ತು ಅವರ ಮನೆ.
Comments
Post a Comment