ಯತಿ ಸ್ವಂತೀ -218
06-08-2018
ನಾರಾಯಣಾ ನಿನ್ನ ನಾಮದ ಸ್ಮರಣೆಯ ಎಂದು ಮಧುರಗಾನ ತೇಲಿ ಬಂತು ಉಷಾಳಿಂದ.
ನನ್ನನ್ನು ನನ್ನ ಭಾವೀ ಮಾವ ಕೇಳಿದರು. ಹುಡುಗಿ ನಿಮಗೆ ಒಪ್ಪಿಗೇನಾ?
ನಾನಂದೆ. ಆ ಹುಡುಗೀನ ಕೇಳಿ. ಆಕೀಗೆ ಒಪ್ಪಿಗೆ ಇದ್ದರೆ ನನಗೆ ಒಪ್ಪಿಗೆ.
ಸರಿ, ಹುಡುಗಿಗೂ ಒಪ್ಪಿಗೆ ಅಂತೆ ಎಂದರು ನನ್ನ ಮಾವ!
ತಿಂಡಿ, ಕಾಫಿ ಸೇವನೆಯ ನಂತರ ಅವರು ಹೊರಟರು.
ಸೋ, ನಾನು ಈಗ ಮದುಮಗನಾಗುವ ಕಾಲ ಬಂದಾಯ್ತು ಎಂದುಕೊಂಡೆ.
ಅದು 30-11-1986.
ಅಮ್ಮನಿಗೆ ರೇಗಿಸಿದೆ. ‘ಅಮ್ಮಾ, ಹಾಡು ಬರುತ್ತಾ ಅಂತ ಕೇಳಿದೆ. ಅಡಿಗೆ ಮಾಡೋಕ್ಕೆ ಬರುತ್ತಾ ಅಂತ ಕೇಳಲೇ ಇಲ್ಲವಲ್ಲಾ?’ ಎಂದೆ.
ಇದಕ್ಕೆ ಮೊದಲು ನಮ್ಮ ಮನೆಯಲ್ಲಿ ಒಂದು ಮಾತುಕತೆ ಆಗಿತ್ತು. ಬಿ.ಇ.ಯಂತಹ ಓದು ಓದಿರುವ ಹುಡುಗಿಯನ್ನು ಮನೆಯಲ್ಲಿಯೇ ಇರು ಎನ್ನಲು ನನಗೆ ಮನಸ್ಸಿಲ್ಲ. ಏಕೆಂದರೆ ಅದು ಪ್ರೊಫೆಷನಲ್ ಕೋರ್ಸ್. ಕೆಲವು ವರ್ಷಗಳಾದರೂ ಕೆಲಸ ಮಾಡಲು ಹುಡುಗಿಯರೂ ಇಷ್ಟ ಪಡುತ್ತಾರೆ. ನಮ್ಮ ಅಮ್ಮನ ಮೈಯಲ್ಲಿ ಚೆನ್ನಾಗಿರಲಿಲ್ಲ. ಅಯ್ಯನ ಆರೋಗ್ಯವೂ ಸುಮಾರೇ. ಅದಕ್ಕೇ ಮನೆಯಲ್ಲಿದ್ದುಕೊಂಡು ಅಮ್ಮನೊಂದಿಗೆ ಅಡಿಗೆ ಮಾಡುವ ಹುಡುಗಿ ಇದ್ದರೆ ನನಗೆ ಓಕೆ ಎಂದಿದ್ದೆ. ಸಂಬಳವೇನೂ ಗ್ರೇಟ್ ಆಗಿರಲಿಲ್ಲ. ಆದರೂ ಸಂಸಾರ ನಿಭಾಯಿಸಬಲ್ಲೆನೆಂಬ ಆತ್ಮವಿಶ್ವಾಸ.
‘ಅಡಿಗೇಗೇನೋ? ಬರದಿದ್ದರೆ ಕಲ್ತುಕೋತಾಳೆ’ ಎಂದರು ಅಮ್ಮ. ಆ ವಿಷಯವನ್ನು ಅವರು ವಿಚಾರಿಸಲು ಹೋಗಿರಲೇ ಇಲ್ಲ!
‘ಅಲ್ಲಮ್ಮ, ಅವಳು ಮೈಸೂರು ಹುಡುಗಿ. ಅಮ್ಮನ ಮನೆಗೆ ಹೋಗಬೇಕು ಅಂತ ಪದೇ ಪದೇ ಅಂದರೆ?’ ಎಂದೆ.
‘ಏನೀಗ ಹೋದರೆ, ಅವಳ ಅಮ್ಮನ ಮನೆಗೆ ಹೋಗೋದನ್ನ ನಾವ್ಯಾರು ತಡೆಯೋಕ್ಕೆ’ ಎಂದರು. ಉಷಾ ಅವರ ತಾಯ್ತಂದೆಯರ ಒಬ್ಬಳೇ ಮಗಳು. ಅವಳಿಗೆ ಇಬ್ಬರು ಅಣ್ಣಂದಿರು.
ನಮ್ಮ ಅಮ್ಮನಿಗೂ ಅವರಮ್ಮನ ಅಂಟು ಬಹಳ ಇತ್ತು. ಮಾತೆತ್ತಿದರೆ ಹೋಗುತ್ತಿದ್ದರು. ಅದೇ ಸ್ವಭಾವ ಸೊಸೆಯಾಗುವವಳಿಗಿದ್ದರೂ ಅವರದೇನೂ ಅಭ್ಯಂತರವಿಲ್ಲ!
ಬಿ.ಇ. ಓದಿರೋ ಹುಡುಗಿಯನ್ನು ನಾನು ನೋಡಿದ್ದೆನಲ್ಲ... ಆ ಸಮಯದಲ್ಲಿ ಕೇಳಿದ್ದೆ. ಅಲ್ಲಮ್ಮಾ ಇಷ್ಟು ದಿನ ನನಗೆ ಕ್ಯಾರಿಯರ್ ಕಟ್ಟಿದ್ದಾಯ್ತು. ಈಗ ಅವಳಿಗೂ ಕಟ್ಟುತ್ತೀಯಾ ಎಂದು. ಏಕೆಂದರೆ ನಾನು ಸ್ವಲ್ಪ ದಿನಗಳಿಂದ ಉದಯನ ಮನೆಗೆ ಹೋಗುತ್ತಿರಲಿಲ್ಲ ತಿಂಡಿಗೆ!
ಏನೂ ಪರವಾಗಿಲ್ಲ. ಯಾರೇ ಬಂದರೂ ಸರಿ ಎಂದುಬಿಟ್ಟರು ಅಮ್ಮ.
ಮುಂದಿನ ಭಾನುವಾರ 7.12.1986.
ಅಂದು ನನ್ನ ಭಾವೀ ಮಾವನವರೂ, ನಮ್ಮ ಅತ್ತೆಯವರ ದೊಡ್ಡ ಅಕ್ಕನವರೂ ಬಂದರು.
ನಮ್ಮ ಮನೆಗೆ ಬಂದೊಡನೆ ನಮ್ಮ ದೊಡ್ಡ ಅತ್ತೆಯವರು ನಮ್ಮ ಅಮ್ಮನನ್ನು ಕಂಡು ‘ಆಂ’ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಂಡರು.
ಏಕೆಂದರೆ ಪ್ರಪಂಚ ಬಲು ಚಿಕ್ಕದು. ‘ಭಾವಾ’ ಎಂದು ನನ್ನ ಮಾವನವರನ್ನು ಸಂಬೋಧಿಸಿ, ‘ನೀವ್ಯಾಕೆ ಅಳಿಯಂದ್ರು ಎದುಗೀರಮ್ಮನ ಮಗ ಅಂತ ಹೇಳಲಿಲ್ಲ?’ ಎಂದರು.
ಎದುಗೀರಮ್ಮ ಉರ್ಫ್ ಯದುಗಿರಿ ನನ್ನ ಅಮ್ಮನ ಜನ್ಮ ನಾಮ. ಅತ್ತೆ ಮನೆಯಲ್ಲಿ ಅವರ ಹೆಸರು ವಿಜಯ ಎಂದಾಗಿತ್ತು!
Comments
Post a Comment