ಯತಿ ಸ್ವಂತೀ -217
05-08-2018
ಆ ಹುಡುಗಿ ನನಗೆ ಏಕೋ ಹಿಡಿಸಲಿಲ್ಲ. ಅದೂ ನಮ್ಮ ಕಮ್ಯೂನಿಟಿಯ ಹುಡುಗಿಯೇ.
‘ನಿನಗೆ ಎಂಥಾ ಹುಡುಗಿ ಸಿಗ್ತಾಳೋ ನೋಡೋಣ’ ಇಂದ ಹಿಡಿದು ‘ಆ ಮೈಸೂರು ಹುಡುಗಿ ಮನೆಯವರಿಗೆ ಕಾಗದ ಬರಿ’ ವರೆಗೆ ಮಾತುಗಳನ್ನು ಕೇಳಿದೆ.
ಆ ನಂತರ ಪತ್ರವನ್ನು ನಾನೇ ಬರೆದೆ, ನನ್ನ ಅಯ್ಯ ಬರೆದಂತೆ.
ಅದಕ್ಕೆ ಮುಂದೆ ಇನ್ನೊಂದು ವಿಶೇಷವಾಗಿತ್ತು.
ಮೈಸೂರಿನಲ್ಲಿ ನಾ ನೋಡಿದ್ದ ಹುಡುಗಿಯ ತಂದೆ ಪತ್ರ ಬರೆದಿದ್ದರು. ನಿಮ್ಮ ಮಗನನ್ನು ನನ್ನ ಪತ್ನಿ ಮತ್ತು ಮಗಳು ಮದುವೆಯಲ್ಲಿ ನೋಡಿದರಂತೆ. ನಿಮ್ಮ ಮಗನಿಗೆ ನಿಮ್ಮ ಮಗಳನ್ನು ಕೊಡುವ ಆಸೆ ಎಂದು ಬರೆದಿದ್ದರು ಮೈಸೂರಿನ ಹುಡುಗಿಯ ತಂದೆ.
ಈ ಮೈಸೂರಿನ ಹುಡುಗಿಯ ಬಗ್ಗೆ ಮತ್ತೊಂದು ವಿಷಯ ಹೇಳಬೇಕು.
‘ಇವಳನ್ನ ಮದ್ವೆ ಮಾಡ್ಕೋತೀಯೇನೋ?’ ಎಂದು ನಾಗೂಮ್ಮ ಕೇಳಿದಾಗ ನಾಚಿದ್ದೆ. ಕಿವಿಗಳು ಬಿಸಿಯಾದವು.
ನನ್ನ ಗೆಳೆಯರು ಅಲ್ಲೇ ಕೂತಿದ್ದವರು ‘ಕಂಗ್ರಾಟ್ಸ್ ಯತೀ’ ಎಂದರು. ಎಲ್ಲರೂ ನಕ್ಕರು, ಆ ಹುಡುಗಿಯೂ ಸಹ.
‘ನನ್ನ ತಾಯ್ತಂದೆಯರನ್ನ ಕಾಂಟ್ಯಾಕ್ಟ್ ಮಾಡಿ’ ಎಂದು ಹೇಳಿದೆ.
ನನ್ನ ಕಸಿನ್ ನಮ್ಮ ಮನೆಯ ಅಡ್ರೆಸ್ ಅವರಿಗೆ ಕೊಟ್ಟ ವಿಷಯ ತಿಳಿಯದು ನನಗೆ.
‘ಓ ವುಡ್‍ಬಿ ಸಿಕ್ಕಳು. ನಮಗೆ ಐಸ್‍ಕ್ರೀಂ ಪಾರ್ಟಿ’ ಎಂದರು ಎಲ್ಲರೂ.
‘ಅವಳು ವುಡ್‍ಬಿ ಅಲ್ಲ ಕಣ್ರೋ, ಷಿ ಕುಡ್‍ಬಿ ಮೈ ವುಡ್‍ಬೀ’ ಎಂದೆ.
‘ಸರಿ ಹಾಗಾದ್ರೆ ಕುಡ್‍ಬೀ ಸಿಕ್ಕಿದ್ದಕ್ಕೇ ಕೊಡಿಸು’ ಎಂದರು. ನನ್ನ ಗೆಳೆಯನ ಮದುವೆ ರಾಜ್‍ಕಮಲ್ ಥಿಯೇಟರ್ ಬಳಿಯ ಅಗರ್‍ವಾಲ್ ಛತ್ರದಲ್ಲಿ ನಡೆಯುತ್ತಿತ್ತು.
ಮಹಾರಾಣೀಸ್ ಕಾಲೇಜ್ ಬಳಿಯ ಒಂದು ಐಸ್‍ಕ್ರೀಂ ಅಂಗಡಿಯಲ್ಲಿ ಎಲ್ಲರಿಗೂ ಐಸ್‍ಕ್ರೀಮ್ ಕೊಡಿಸಿದ ನೆನಪು.
ಮೈಸೂರಿನ ಹುಡುಗಿಯನ್ನು ನವೆಂಬರ್ 30, 1986ರಂದು ಬರಹೇಳಿ ಮೈಸೂರಿಗೆ ನನ್ನ ಅಯ್ಯ ಬರೆದಂತೆ ನಾನೇ ಬರೆದೆ!
ಹಿಂದಿನ ದಿನ ನನ್ನ ಸೋದರತ್ತೆ ಹುಡುಗಿ ಹೇಗಿದ್ದಾಳೋ ನೋಡಕ್ಕೆ ಎಂದರು.
ನನಗೆ ಎಷ್ಟೇ ಆದರೂ ನೆನಪಾಗಲಿಲ್ಲ. ಅವಳನ್ನು ನೆನೆಸಿಕೊಂಡಾಗ ನಮ್ಮ ಕಾರ್ಖಾನೆಯಲ್ಲಿ ಹೊಸದಾಗಿ ಇಂಜಿನಿಯರಿಂಗ್ ತರಬೇತಿಗೆ ಬಂದಿದ್ದ ಹುಡುಗಿಯ ಮುಖವೇ ನೆನಪಿಗೆ ಬರ್ತಿತ್ತು!
ಮರುದಿನ ಭಾನುವಾರ. ಕಾಯುತ್ತಾ ಇದ್ದೆವು.
ಒಂದು ಫಿಯೆಟ್ ಕಾರಿನಲ್ಲಿ ಅವರೆಲ್ಲಾ ಬಂದಿಳಿದರು. ನನ್ನ ಚಿಕ್ಕ ತಂಗಿ ಕಿಟಕಿಯಿಂದ ನೋಡುತ್ತಿದ್ದವಳು ‘ಆಹಾ ಎಷ್ಟು ಚೆನ್ನಾಗಿದ್ದಾಳೆ ಈ ಹುಡುಗಿ’ ಎಂದಳು.
ಆಯಿತು. ಇನ್ನು ಬೇರೇನೂ ಕಣಿ ಮಾಡದೇ ಈ ಹುಡುಗಿಯನ್ನು ಒಪ್ಪಿಕೊಂಡು ಬಿಡಬೇಕು ಎಂದುಕೊಂಡೆ.
ಒಳಗೆ ಬಂದರು. ಅವರು ಹಾಸನದ ಕಡೆಯವರಂತೆ. ನಮ್ಮ ಮಾವ ಆಗುವವರು, ಅತ್ತೆ ಆಗುವವರು, ಹುಡುಗಿ, ಮತ್ತು ಅವರ ಅನೇಕ ನೆಂಟರು ಬಂದಿದ್ದರು.
ಹೀಗೇ ಎಲ್ಲಿ ಕೆಲಸ ಯಾವೂರು ಮಾತುಕತೆ ನಡೆಯಿತು.
ನಮ್ಮ ಅಮ್ಮ ಹಾಡು ಬರುತ್ತೇನಮ್ಮ ಎಂದರು.
ಹೂಂ ಎಂದಾಗ ಹಾಡು ಎಂದರು.
Comments
Post a Comment