ಯತಿ ಸ್ವಂತೀ -216



04-08-2018

ಇವಳು ನಾನು ‘ನೋಡಿದ’ ಮೊದಲ ಹುಡುಗಿ ಅಲ್ಲ!

ನನಗೆ ಇಪ್ಪತ್ತೈದಾಗುತ್ತಿದ್ದಂತೆ ನಮ್ಮ ಮನೆಯಲ್ಲಿ ವರಾತ ಶುರು ಹಚ್ಚಿಕೊಂಡರು. ಮದುವೆ ಮಾಡಿಕೋ ಎನ್ನತೊಡಗಿದರು. ನನಗೆ ಆಗ ಬರುತ್ತಿದ್ದುದು ನಾಲ್ಕೂವರೆ ಸಾವಿರ ರೂಪಾಯಿ ಸಂಬಳ (ಸರಿಯಾಗಿ ನೆನಪಿಲ್ಲ!). 

‘ಅಮ್ಮಾ, ಫಿಜಿಕಲೀ ಮದುವೆ ಸಿದ್ಧ ಆದರೆ ಮೆಂಟಲೀ ಸಿದ್ಧ ಇಲ್ಲ’ ಎಂದು ಹೇಳುತ್ತಿದ್ದೆ ಅಮ್ಮನಿಗೆ!

ನನ್ನ ತಂಗಿಯ ಬಂಧುವೊಬ್ಬರು ಒಂದು ಹುಡುಗಿಯನ್ನು ನನಗಾಗಿ ‘ಹುಡುಕಿ’ ಭೇಟಿಯನ್ನು ‘ಫಿಕ್ಸ್’ ಮಾಡಿಬಿಟ್ಟಿದ್ದರು!

ವಿಧಿಯಿಲ್ಲ ಹೋಗಲೇಬೇಕು. ದೊಡ್ಡ ಲೇವಾದೇವಿ ಕಛೇರಿಯ ಸೆಕ್ಯೂರಿಟಿ ಆಫೀಸರ್ ಮಗಳಂತೆ.

ಅವರ ಮನೆಗೆ ಹೊರಟೆವು. ಹುಚ್ಚು ಮಳೆ ಆ ದಿನ.

ಒದ್ದೆಯಾಗಿ, ಗಡಗಡ ನಡುಗುತ್ತಾ ಅವರ ಮನೆಗೆ ಹೋದೊಡನೆ ನಾವು ಕೇಳಿದ್ದು ತಲೆ, ಮೈ ಒರೆಸಿಕೊಳ್ಳಲು ಟವೆಲ್‍ಗಳನ್ನು!

ಹುಡುಗಿ ಪರ ಊರಿನಲ್ಲಿ ಕೆಲಸ ಮಾಡುತ್ತಿದ್ದಳು. ಕೆಲವು ನಿಮಿಷಗಳ ಕಾಲ ಮಾತನಾಡಿದೆವು.

ಆ ಊರಿನಲ್ಲಿ ನಮ್ಮ ಕಂಪೆನಿಯ ಶಾಖೆಯಿತ್ತು. ಅಲ್ಲಿಗೇ ವರ್ಗ ಸಾಧ್ಯವೇ ಎಂದಳು. ಏಕೆಂದರೆ ಅವಳಿಗೆ ಅಷ್ಟು ಒಳ್ಳೆಯ ಕೆಲಸ ಬಿಡುವ ಮನಸ್ಸಿರಲಿಲ್ಲ. ಅದು ಬೆಂಗಳೂರಿನಲ್ಲಿ ಶಾಖೆಗಳನ್ನು ಹೊಂದಿರಲಿಲ್ಲ.

ನನ್ನ ತಂದೆಯವರ ಆರೋಗ್ಯ ಸುಮಾರಾಗಿತ್ತು. ಅಮ್ಮನೂ ಬೆನ್ನು ನೋವೆಂದಿದ್ದರು. ಸಾಧ್ಯವಿಲ್ಲ, ನೀನು ಇಲ್ಲಿಗೆ ಬಂದರೆ ಓಕೆ ಎಂದೆ. ಅಷ್ಟೇ.. ಆ ಮಾತುಕತೆ ಅಲ್ಲಿಗೆ ಫುಲ್‍ಸ್ಟಾಪ್!

ಮತ್ತೊಂದು ಹುಡುಗಿ ಬಂದಿತು. ಈ ಸಲ ಇನ್ನೊಂದು ವಿಶಿಷ್ಟ ಕತೆ. ಆದಷ್ಟೂ ಹೆಸರುಗಳನ್ನು ಹೇಳಲಾಗದ ಪರಿಸ್ಥಿತಿ ನನ್ನದು!

ಆ ಹುಡುಗಿ ನನ್ನ ಗೆಳೆಯನೊಬ್ಬನ ಸಹಪಾಠಿ. ಅವನು ಸದಾ ಅವಳೊಂದಿಗೆ ಸಿನಿಮಾಗೆ ಹೋದೆ, ಹೊಟೇಲ್‍ಗೆ ಹೋದೆ ಎಂದು ಹೇಳುತ್ತಿದ್ದ. ನಮಗೆಲ್ಲಾ ಅವನ ಧೈರ್ಯ ನೋಡಿ ಆಶ್ಚರ್ಯ, ಮತ್ಸರ. ಏಕೆಂದರೆ ನಾವು ಹಾಗೆ ಹೋಗಿದ್ದು ನೆನಪಿಲ್ಲ. ನನಗಿಂತ ನಾಲ್ಕು ವರ್ಷಗಳು ಚಿಕ್ಕವನು ಅವನು.

ನನಗೆ ಈ ಹುಡುಗಿ ‘ವರಪರೀಕ್ಷೆ’ಗೆ ಬರುತ್ತಿದ್ದಾಳೆಂದೊಡನೆ ನನ್ನ ಮತ್ತೊಬ್ಬ ಆಪ್ತಮಿತ್ರನಿಗೆ ನಗುತ್ತಾ ‘ಹೀಗೆ, ಆ ಹುಡುಗಿ ಬರುತ್ತಿದ್ದಾಳೆ’ ಎಂದು ಹೇಳಿದೆ. ಅವನು ನನ್ನನ್ನು ಹುಡುಕಿಕೊಂಡು ಧಾವಿಸಿ ಬಂದ.

ಆ ಫ್ರೆಂಡು ಒಬ್ಬನೇ ಅವಳೊಂದಿಗೆ ಎಲ್ಲೂ ಹೋಗಿಲ್ಲವಂತೆ. ಇಡೀ ತರಗತಿ ಹೋಗುವಾಗ ಇವನೂ ಅವಳೂ ಆ ಗುಂಪಿನವರಾಗಿದ್ದರಂತೆ ಎಂದ.

ನಾನು ನಕ್ಕೆ. ಹುಡುಗಿ ಬಂದಳು. ನನ್ನನ್ನು ಒಂಟಿಯಾಗಿ ಕರೆದು, ‘ನನಗೆ ಬಹಳ ಜವಾಬ್ದಾರಿಗಳಿವೆ. ನನ್ನ ತಮ್ಮ, ತಂಗಿಯನ್ನು ಓದಿಸಬೇಕು. ನನ್ನನ್ನು ಬೇಡ ಎಂದುಬಿಡಿ ದಯವಿಟ್ಟು’ ಎಂದಳು!

ಅದನ್ನೇ ಹೇಳಿದ್ದಾಯಿತು.

ಆ ಹುಡುಗಿಯನ್ನೂ ನಾನು ರಿಜೆಕ್ಟ್ ಮಾಡಿದ್ದು ನೋಡಿ ಅಮ್ಮನಿಗೆ ಸ್ವಲ್ಪ ಬೇಸರವಾಯಿತು. ಏಕೆಂದರೆ ಆಕೆ  ನಮ್ಮ ಜನ!

ಆಗ ಮೈಸೂರಿಗೆ ಹೋಗಿದ್ದೆ. ಉಷಾಳನ್ನು ಕಂಡಿದ್ದೆ. ನಾಗೂಮ್ಮ ಇವಳನ್ನು ಮದ್ವೆ ಆಗ್ತೀಯೇನೋ ಅಂದಿದ್ದರು!

ಮತ್ತೊಂದು ಹುಡುಗಿ ಈಗ ಮನೆಗೆ ಬಂದಳು!

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102