ಯತಿ ಸ್ವಂತೀ -215
03-08-2015
ಅನೇಕ ಇನ್ಸಪೆಕ್ಟರುಗಳು ನನಗೆ ಪರಿಚಯವಾದರು. ಅವರೊಂದಿಗೆ ನಾನು ಊಟಕ್ಕೆ ಹೋದ ಹೊಟೇಲುಗಳೆಷ್ಟೋ.
ಇನ್ನೂ ಒಂದು ಅಭ್ಯಾಸವಿತ್ತೆನಗೆ. ಉದಯನ ಜೊತೆ ಪ್ರತಿ ತಿಂಗಳು ಸಂಬಳ ಬಂದ ನಂತರ ಯಾವುದಾದರೊಂದು ಹೊಟೇಲ್‍ನಲ್ಲಿ ಡಿನ್ನರ್.
ಮಧ್ಯೆ ಮಧ್ಯೆ ನನ್ನ ಸೋದರತ್ತೆಯ ಮನೆಗೆ ಹೋಗುತ್ತಿದ್ದೆ. ಇವರು ನಾಲ್ಕನೆಯವರು. ಇವರ ಇಬ್ಬರು ಗಂಡು ಮಕ್ಕಳೂ ನನಗಿಂತ ಆರು ಮತ್ತು ಹತ್ತು ವರ್ಷಗಳಿಗೆ ಚಿಕ್ಕವರು. ಆದರೂ ಒಂದು ರೀತಿಯ ಸಲಿಗೆ ಇತ್ತು. ರಜೆ ಬಂದಾಗ ಅವರ ಮನೆಗೆ ಹೋಗಿ, ಮರುದಿನ ಬೆಳಗ್ಗೆ ಅವರ ಮನೆಯಿಂದ ಕಾರ್ಖಾನೆಗೆ ನಡೆದು ಹೋಗುತ್ತಿದ್ದೆ. ಅವರ ಮನೆಯ ಪಕ್ಕದಲ್ಲೇ ಮಲ್ಲೇಶ್ವರಂ ಹದಿನೇಳನೇ ಕ್ರಾಸ್ ಸೇತುವೆ ಇತ್ತು. ಅದರ ಕೆಳಗಿಂದ ಹೋಗಿ ಮಿಲ್ಕ್ ಕಾಲೋನಿಯ ಮೂಲಕ ಕಾರ್ಖಾನೆಗೆ ಹೋಗಬಹುದಿತ್ತು.
ನನ್ನ ನಡಿಗೆಯಲ್ಲಿ ಎಂತಹ ಅವಸರವಿದ್ದಿತೆಂದರೆ ನಾನು ಡಾನ್ಸಿಂಗ್ ಮಾಡ್ತೀನಿ ವಾಕಿಂಗ್ ಮಾಡುತ್ತಿಲ್ಲ ಎಂದು ನನ್ನ ಸಹೋದ್ಯೋಗಿಗಳು ರೇಗಿಸುತ್ತಿದ್ದರು.
ಎಲ್ಲರೊಂದಿಗೆ ಒಳ್ಳೆಯ ಗೆಳೆತನ. ಬೆಳಗ್ಗೆ ಬಂದರೆ ರಾತ್ರಿ (ಹೌದು, ನಾನು ಬಹಳ ದಿನ ಮನೆ ತಲುಪುತ್ತಿದ್ದುದು ತಡವಾಗಿಯೇ).
ದೆಹಲಿಯಿಂದ ಜಲ ಟರ್ಬೈನ್‍ಗಳ ಕೊಳ್ಳುವಿಕೆಗೆ ಒಂದಿಬ್ಬರು ಬರುತ್ತಿದ್ದರು. ಅವರುಗಳ ಜೊತೆಗೆ ಕೂಡ ಡಿನ್ನರ್ ಇರುತ್ತಿತ್ತು.
ರಾತ್ರಿ ಆಫೀಸ್‍ಕಾರಿನಲ್ಲಿ ಮನೆ ತಲುಪುತ್ತಿದ್ದೆ.
ಮನೆಯನ್ನು ಬದಲಾಯಿಸಿದೆವು. ನಾವಿದ್ದ 16ನೇ ಮುಖ್ಯರಸ್ತೆಯಿಂದ 13ನೇ ಮುಖ್ಯರಸ್ತೆಯ ಔಟ್‍ಹೌಸೊಂದಕ್ಕೆ ವಾಸ್ತವ್ಯ ಬದಲಾಯಿಸಿದ ಸಮಯವದು. ಮನೆಯ ಎದುರಿಗೆ ಶ್ರೀರಾಮನ ಗುಡಿ, ಪರಿಮಳ ಛತ್ರ ಮತ್ತು ರಾಘವೇಂದ್ರಸ್ವಾಮಿಗಳ ಮಠ.
ಆಫೀಸಿನಲ್ಲಿ ಬಿಗ್ ಬಾಸ್ ಬದಲಾದರು. ಅವರ ಮನೆಯಲ್ಲಿ ಒಮ್ಮೆ ಪಾರ್ಟಿಗೆ ಹೋದ ನೆನಪಿದೆ!
1986ರ ಕೊನೆ ಬಂದಿತು.
ಜೀವನದಲ್ಲಿ, ಆಫೀಸಿನ ಬದುಕಿನಲ್ಲಿ ಮಾರ್ಪಾಡು ಬಂದ ಸಮಯವದು.
ಅಕ್ಟೋಬರ್ ತಿಂಗಳಲ್ಲಿ ನನ್ನ ಆಪ್ತಗೆಳೆಯನ ಅತ್ತೆಯ ಮನೆಯ ಬಳಿ ಇದ್ದ, ಆತನ ಮಾವನ ಗೆಳೆಯನ ಮಗಳು ಮತ್ತು ಪತ್ನಿ ನನ್ನ ಗೆಳೆಯನ ಮದುವೆಗೆ ಬಂದಿದ್ದರು.
ಹೇಗೋ ಏನೋ ಅದೂ ಇದೂ ಮಾತನಾಡುತ್ತಾ, ನನ್ನ ಇನ್ನೊಬ್ಬ ಆಪ್ತಗೆಳೆಯನ ತಾಯಿ (ಅದೇ, ನಾನು ಇದ್ದಕ್ಕಿದ್ದಂತೆ ಹೋಗಿ ಅವರ ಮನೆಯಲ್ಲಿ ನೆಲೆಸಿದ್ದೆನಲ್ಲ!) ನನ್ನನ್ನು ಕರೆದರು.
ಮದುವೆ ಮನೆಯ ಗಲಾಟೆಯಲ್ಲಿ ಒಂದು ಸಂಭಾಷಣೆ ನಡೆದಿತ್ತು.
ನನ್ನ ಗೆಳೆಯನ ತಾಯಿಯ ಮಿಡ್ಲ್‍ಸ್ಕೂಲ್ ವಿದ್ಯಾರ್ಥಿನಿ ಉಷಾ. ಅವಳೂ, ಅವಳ ತಾಯಿಯೂ ಮದುವೆಗೆ ಬಂದಿದ್ದರು. ಉಷಾಳ ತಂದೆಯ ಪರಿಚಿತರು ನನ್ನ ಗೆಳೆಯ ಶ್ರೀಧರನ ಮಾವ ಆಗುತ್ತಿದ್ದವರು. ಜಯನಗರದಲ್ಲಿ ಹತ್ತಿರ ಹತ್ತಿರ ಮನೆಗಳಿದ್ದವು ಅವರಿಬ್ಬರದೂ.
ಹಾಗಾಗಿ ಉಷಾ ಮತ್ತು ಅವಳ ತಾಯಿ ಮದುವೆಗೆ ಬಂದಿದ್ದರು.
ಮಾತಿನ ಮಧ್ಯೆ ‘ಉಷಾ ಬಿ.ಎ. ಮುಗಿಸಿದ್ದಾಳೆ’ ಎಂದರು ಆಕೆಯ ತಾಯಿ.
‘ಮದುವೆ ಮಾಡಲ್ವಾ?’ ನನ್ನ ಗೆಳೆಯನ ತಾಯಿಯ ಪ್ರಶ್ನೆ.
‘ನೀವೇ ಯಾರನ್ನಾದ್ರೂ ಹೇಳಿ’ ಇದು ಮದುವೆಗೆ ಬಂದ ಎಲ್ಲ ಹೆಣ್ಣು ಗಂಡು ಮಕ್ಕಳ ತಾಯಿ ತಂದೆಯರು ಹೇಳುವ ಉತ್ತರ.
‘ಯತಿ ಬಾರೋ ಇಲ್ಲಿ’ ಎಂದರು ನನ್ನ ಗೆಳೆಯನ ತಾಯಿ.
‘ಏನು ನಾಗೂಮ್ಮ?’ ಎಂದೆ.
‘ಈ ಹುಡುಗೀನ್ನ ಮದುವೆ ಮಾಡ್ಕೋತೀಯೇನೋ?’ ಎಂದರು ನಾಗೂಮ್ಮ.
ನಾನು ಸ್ಟನ್!
Comments
Post a Comment