ಯತಿ ಸ್ವಂತೀ -214



02-08-2018

ದಿನಗಳು ಚೆನ್ನಾಗಿ ಕಳೆಯುತ್ತಿದ್ದವು. 

ಮನೆಯಿಂದ ಕೆಲವು ಸಲ ಊಟ ತೆಗೆದುಕೊಂಡು ಹೋಗುತ್ತಿದ್ದೆ. ಕೆಲವು ಸಲ ಉದಯನ ಕ್ಯಾರಿಯರ್‍ನಿಂದ ಊಟ ತೆಗೆದುಕೊಳ್ಳುತ್ತಿದ್ದೆ!

ಅವನ ಮನೆಯಲ್ಲಿನ ತಿಂಡಿ ಸೇವನೆ ಮುಂದುವರಿದಿತ್ತು. ಜಯನಗರದಿಂದ ಮಲ್ಲೇಶ್ವರಂ ಕೊನೆಗೆ. ಅಬ್ಬಾ... ಬೇಗ ಹೊರಡುತ್ತಿದ್ದುದರಿಂದ ಬಹುಶಃ ಬೇಗ ಮತ್ತು ಭದ್ರವಾಗಿ ತಲುಪುತ್ತಿದ್ದೆವೇನೋ!

ಕೆಲವು ಶನಿವಾರಗಳು ನಾರಾಯಣ ಮತ್ತು ಅಶೋಕ ಎನ್ನುವ ಸಹೋದ್ಯೋಗಿಗಳ ಜೊತೆ ಆಫೀಸಿಗೆ ಹೋದ ನೆನಪಿದೆ. ನಾರಾಯಣನ ಲ್ಯಾಂಬ್ರೆಟ್ಟಾ, ಮತ್ತು ಅಶೋಕನ ವಿಶೇಷ ಮೊಪೆಡ್ ಪರ್ಲಿಯಾಮಾ. 

ನನ್ನನ್ನು ಬಹಳ ಇಷ್ಟದಿಂದ ಕರೆದೊಯ್ಯುತ್ತಿದ್ದರು. ಅವರನ್ನು ಕಾರಣ ಕೇಳಿದಾಗ ಅವರು ಹೇಳಿದ್ದು ಕೇಳಿ ನಗಬೇಕೋ ಅಳಬೇಕೋ ತಿಳಿಯಲಿಲ್ಲ!

‘ನೀನು ವಟವಟಾಂತ ಚೆನ್ನಾಗಿ ಮಾತಾಡ್ತೀಯ. ಅದಕ್ಕೇ ನಿನ್ನನ್ನ ಕರೆದುಕೊಂಡುಹೋಗೋದು!’

ಅಲೆಲೆ... ಎಂತಹ ಬಿರುದು! 

ಆದರೆ ಒಂದು ವಿಷಯ ಅರ್ಥವಾಗಿತ್ತು. ನಾನು ಮೂಕನಂತಿದ್ದವನು ಈಗ ಸಖತ್ ಹರಟೆಮಲ್ಲನಾಗಿದ್ದೆನೆಂದು ಅರಿವಾಯಿತು.

ಹೊರಗಿನ ಜನರ ಬಳಿ ನಾನು ಸಾಕಷ್ಟು ಕಾಲ ಕಳೆಯುತ್ತಿದ್ದೆ ಎಂದರೂ ತಪ್ಪಿಲ್ಲವೇನೋ.

ನಮ್ಮ ಜನರೇಟರ್ ವಿಭಾಗದಲ್ಲಿ ಕೆಲವು ವಿಶೇಷ ಜನರೇಟರುಗಳನ್ನು ತಯಾರಿಸುತ್ತಿದ್ದೆವು. ಅವುಗಳನ್ನು ಹಂತ ಹಂತದಲ್ಲೂ ಪರೀಕ್ಷಿಸಲು ಇನ್ಸ್‍ಪೆಕ್ಷನ್ ಏಜೆನ್ಸಿಗಳ ಜನರು ಬರುತ್ತಿದ್ದರು.

ಉದಾಹರಣೆಗೆ ಒಂದು ಜನರೇಟರ್‍ನ ತಿರುಗುವ ಭಾಗವಾದ ರೋಟಾರ್‍ಗೆ ಬಳಸುವ ಕಾರ್ಬನ್ ಸ್ಟೀಟ್ ಒಂದು ನಿರ್ದಿಷ್ಟ ಗುಣ ಹೊಂದಿರಬೇಕು. ಅದನ್ನು ಬಂದು ಪರೀಕ್ಷೆ ಮಾಡಿ, ಅದರ ಒಂದು ಚಿಕ್ಕ ಸ್ಯಾಂಪಲ್ ತೆಗೆದುಕೊಂಡು ಆ ಇನ್ಸ್‍ಪೆಕ್ಟರುಗಳು ಹೋಗುತ್ತಿದ್ದರು. ಅವರು ಮದ್ರಾಸ್ ಅಥವಾ ಬಾಂಬೆಯಿಂದ ಬರುತ್ತಿದ್ದವರು.

ಅವರು ಮತ್ತೆ ಬಂದು ಆ ರೋಟಾರನ್ನು ಪರೀಕ್ಷಿಸಿದ ಮೇಲೆ ಅದು ಮುಂದಕ್ಕೆ ಲೇತ್‍ನಲ್ಲಿ ಸಿದ್ಧವಾಗುತ್ತಿತ್ತು.

ಮತ್ತೆ ಇಡೀ ಜನರೇಟರ್ ಸಿದ್ಧವಾಗುವ ವೇಳೆಗೆ ಮತ್ತೆರಡು ಟೆಸ್ಟ್.

ಕೊನೆಗೆ ಆ ಜನರೇಟರ್ ಟೆಸ್ಟಿಂಗ್ ಇಲಾಖೆಯಲ್ಲಿ ಹೀಟ್ ರನ್ ಟೆಸ್ಟ್‍ಗೆ ಒಳಗಾಗುತ್ತಿತ್ತು.

ಅಂದರೆ ಅದು ಅನೇಕ ಗಂಟೆಗಳ ಕಾಲ ಒಂದೇ ಸಮನೆ ಓಡಿದರೂ ಅದರ ಶಾಖ ಒಂದು ನಿಖರವಾದ ಮಿತಿಯನ್ನು ಮೀರಕೂಡದು ಎಂಬುದು ಆ ಟೆಸ್ಟ್‍ನ ಫಲಿತಾಂಶ.

ಈ ಟೆಸ್ಟ್ ಮಾಡುವಾಗ ನಾಲ್ಕೈದು ಗಂಟೆಗಳ ಕಾಲ ಸಮಯ ಕಳೆಯಬೇಕಿತ್ತು. 

ಆ ಟೆಸ್ಟ್ ಮಾಡಲು ಬಂದವರನ್ನು ನಾನು ಮಧ್ಯಾಹ್ನದ ಊಟಕ್ಕೆ ಮತ್ತು / ಅಥವಾ ರಾತ್ರಿ ಊಟಕ್ಕೆ ಕರೆದೊಯ್ಯುತ್ತಿದ್ದೆ.

ನಾನು ನೋಡಿರದ ಹೊಟೇಲ್‍ಗಳಿಗೆ ಹೋಗುತ್ತಿದ್ದೆ!!

ನನ್ನಂತಹ ಕೆಳ ಮಧ್ಯಮವರ್ಗದವನು ಸ್ವಂತವಾಗಿ ಅಂತಹ ಹೊಟೇಲ್‍ಗೆ ಕನಸಿನಲ್ಲಿಯೂ ಹೋಗಲು ಸಾಧ್ಯವಾಗುತ್ತಿರಲಿಲ್ಲ!

ಈಗ ಕಂಪೆನಿಯ ಖರ್ಚಿನಲ್ಲಿ ಹೋಗುತ್ತಿದ್ದೆ.

ಆಹಾ ಮಜಾ ಉಡಾಯಿಸಿದ್ದೀಯಾ ಎನ್ನುಬಹುದು ನೀವು. ಆದರೆ ಒಂದು ವಿಷಯ ತಿಳಿದುಕೊಳ್ಳಬೇಕು ನೀವು.

ಒಂದಿಷ್ಟೂ ಪರಿಚಯವಿರದ ಅಥವಾ ಸ್ವಲ್ಪ ಪರಿಚಯವಿರುವ ಮನುಷ್ಯನೊಂದಿಗೆ ಮೂರು ನಾಲ್ಕು ಗಂಟೆಗಳ ಕಾಲ ಆಸಕ್ತಿ ತೋರಿಸುತ್ತ, ಆಸಕ್ತಿಕರವಾಗಿ ಮಾತನಾಡುವುದು ಒಂದು ಕಲೆ ಮತ್ತು ಶ್ರಮ ಕೂಡ!

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102