ಯತಿ ಸ್ವಂತೀ -213
01-08-2018
ದಿನಗಳು ಉರುಳುತ್ತಿದ್ದವು.
ನನ್ನ ಉದಯನ ಸ್ಕೂಟರ್ ಸವಾರಿ ಒಂದೆರಡು ವರ್ಷ ನಡೆಯಿತು.
ನಾವು ಕೆಲಸಕ್ಕೆ ಸೇರಿದ ಕೆಲವೇ ದಿನಗಳಲ್ಲಿ ನಮ್ಮ ಫ್ಯಾಕ್ಟರಿಯ ಸಸ್ಪೆನ್ಷನ್ ಆಫ್ ಆಪರೇಷನ್ ಆಗಿಬಿಟ್ಟಿತು. ಅದ್ಯಾಕೋ ಅದಕ್ಕೆ ಲಾಕೌಟ್ ಎನ್ನಲಿಲ್ಲ ಅವರು.
ನಮಗೆ ಎಂತಹ ವಿಚಿತ್ರ ಪರಿಸ್ಥಿತಿ ಎಂದರೆ ಇಲ್ಲೇ ಇರಬೇಕಾ? ಅಥವಾ ಬೇರೆ ಕೆಲಸ ಹುಡುಕಬೇಕಾ ತೋಚಲಿಲ್ಲ. ಏಕೆಂದರೆ ಅನಿರ್ದಿಷ್ಟ ಕಾಲ ಮುಚ್ಚಲಾಗಿದೆ ಎಂದಿತ್ತು ನಮ್ಮ ಫ್ಯಾಕ್ಟರಿ ಗೇಟಿನ ಮುಂದಿದ್ದ ನೊಟೀಸ್.
ಎಂತಹ ಡೋಲಾಯಮಾನ ಸ್ಥಿತಿ... ಬಿಟ್ಟರೆ ಮತ್ತೆ ಹೊಸ ಕೆಲಸ ಸಿಗುವ ಭರವಸೆ ಇರಲಿಲ್ಲ. ಇಲ್ಲೇ ಇದ್ದರೆ ಸಂಬಳ ಇಲ್ಲ. ಫ್ಯಾಕ್ಟರಿ ತೆರೆದಿದ್ದರೆ ತಾನೇ.
ನಮಗೆ ಸಿನಿಮಾ ನೋಡುವ ಹುಚ್ಚು. ಆಗೇನೂ ಈಗಿನಂತೆ ಐನೂರು ಸಾವಿರ ಇರುತ್ತಿರಲಿಲ್ಲ ಟಿಕೆಟ್ ಬೆಲೆ. ಆದರೂ ಕಾಸಿಗೆ ತಕ್ಕ ಕಜ್ಜಾಯ!
ನನಗೆ ನೆನಪಿದೆ. ಬ್ಯಾಂಕಿಗೆ ಹೋಗಿ ಹಣವನ್ನು ಡ್ರಾ ಮಾಡಲು ವಿತ್‍ಡ್ರಾವಲ್ ಸ್ಲಿಪ್ ಕೊಟ್ಟೆ. ಬ್ಯಾಂಕಿನವರು ಆಗಲ್ಲಾರೀ ಎಂದಿದ್ದರು. ನಾನು ಏಳು ರೂಪಾಯಿ ಬಿಟ್ಟು ಅಲ್ಲಿದ್ದ ಐವತ್ತು ರೂಪಾಯಿ ಡ್ರಾ ಮಾಡಲಿಚ್ಛಿಸಿದ್ದೆ.
‘ಏನು ಆಗಲ್ಲ? ನೀವೇನು ನಮಗೆ ಸಂಬಳ ಕೊಟ್ಟು ಸಾಕ್ತೀರಾ? ನಮ್ಮ ಫ್ಯಾಕ್ಟರಿ ಬೇರೆ ಮುಚ್ಚಿದೆ’ ಎಂದು ಗಲಾಟೆ ಮಾಡಿದ್ದೆ.
ಈಗಲೂ ನಾನು ಆಗಾಗ ಅಂಬರೀಷ್ (ರೆಬೆಲ್)ಆಗುವುದು ಬ್ಯಾಂಕಿನಲ್ಲಿ ಉಂಟು.
ಬಾಯಿ ಮುಚ್ಚಿ ಹಣ ಕೊಟ್ಟಿದ್ದ ಆಗ. ಅದನ್ನು ತೆಗೆದುಕೊಂಡು ಮನೆಯ ಬಳಿ ಇದ್ದ ಸ್ವಾಗತ್ ಥಿಯೇಟರ್‍ಗೆ ಹೋದ ನೆನಪು! (ಈಗ ಅದು ಗರುಡ ಸ್ವಾಗತ್ ಆಗಿದೆ)
ಸಧ್ಯ! 42 ದಿನಗಳ ನಂತರ ಫ್ಯಾಕ್ಟರಿ ತೆರೆಯಿತು ಮತ್ತೆ. ಯಥಾಪ್ರಕಾರ ಫ್ಯಾಕ್ಟರಿಗೆ ಹೋಗಲು ಆರಂಭಿಸಿದೆವು.
ನಮ್ಮ ಚೇರ್‍ಮನ್ ರವಿ ಕಿರ್ಲೋಸ್ಕರ್ ಈ ಸಮಯದಲ್ಲೇ ತೀರಿಕೊಂಡರು. ಆಗ ನಾವೆಲ್ಲಾ ಅವರ ವೈಕುಂಠ ಸಮಾರಾಧನೆಯ ಊಟಕ್ಕೆ ಹೋಗಿದ್ದೆವು.
ಆಗ ನಮ್ಮ ಬಾಸ್‍ಗಳೂ ನಮ್ಮ ದೊಡ್ಡ ಕ್ಯಾಂಟೀನಿನಲ್ಲಿ ನಮ್ಮ ಪಕ್ಕದಲ್ಲೇ ಎದುರಿನಲ್ಲೇ ಕುಳಿತಿದ್ದುದು ನೆನಪಿದೆ.
ಹ್ಞಾಂ... ಇದಕ್ಕೂ ಬಹಳ ಮುಂಚೆ....
ನಮ್ಮ ಆಫೀಸಿನಲ್ಲಿ ಟೆಲೆಕ್ಸ್ ಮೆಷಿನ್ ಮತ್ತು ಟೆಲಿಪ್ರಿಂಟರ್‍ಗಳಿದ್ದವು. ಟೆಲೆಕ್ಸ್ ಗ್ರಹಾಂಬೆಲ್‍ನ ಫೋನಿನ ಮತ್ತೊಂದು ಅವತಾರ.
ಈಗ ದೆಹಲಿಯಲ್ಲಿ ನಮ್ಮ ಆಫೀಸಿನಲ್ಲಿ ಕುಳಿತು ಒಬ್ಬ ಒಂದು ಸಂದೇಶವನ್ನು ಅಲ್ಲಿರುವ ಟೆಲೆಕ್ಸ್ ಮೆಷಿನ್‍ನಲ್ಲಿ ಟೈಪ್ ಮಾಡಿದರೆ, ಇಲ್ಲಿ ಅದೇ ಸಮಯದಲ್ಲಿ ಅದು ಟೈಪ್ ಆಗುತ್ತಿತ್ತು.
ಒಮ್ಮೆ ಅದರ ಬಳಿಗೆ ಹೋಗಿ ಅಲ್ಲಿದ್ದ ಆಪರೇಟರ್ ನಾಗರಾಜ್ ಬಳಿ ಯಾವುದೋ ಸಂದೇಶ ಕಳಿಸಲು ಎತ್ತಿಕೊಂಡು ಹೋಗಿದ್ದೆ.
ನಮ್ಮ ದೆಹಲಿ ಆಫೀಸಿನಿಂದ ಒಂದು ಕಳವಳಕಾರಿ ಸಂದೇಶ ಬಂತು.
ಪ್ರಧಾನಿ ಇಂದಿರಾಗಾಂಧಿ ಅವರಿಗೆ ಗುಂಡು ಹಾರಿಸಲಾಗಿದೆ ಎಂದು.
ರೇಡಿಯೋ, ಟಿವಿಯಲ್ಲಿ ಅದರ ಬಗ್ಗೆ ಸುದ್ದಿಯೇ ಇಲ್ಲ.
ನಮ್ಮ ಆಫೀಸಿಗೆ ಮಧ್ಯಾಹ್ನ ರಜೆ ಘೋಷಿಸಿ ನಮ್ಮನ್ನು ಮನೆಗೆ ಕಳಿಸಿಬಿಟ್ಟರು.
Comments
Post a Comment