ಯತಿ ಸ್ವಂತೀ -212



31-07-2018

ದಿನಗಳು ಓಡುತ್ತಿದ್ದವು. ನಮಗೆ ಸವಾಲಾಗುತ್ತಿದ್ದುದು ತಿಂಗಳ ಕೊನೆ. ಗುರಿ ಮುಟ್ಟುವ ಕೆಲಸ. ಆಗೆಲ್ಲಾ ಮಳೆಯಿಲ್ಲದೆ ಹಾಹಾಕಾರ. ಎಲ್ಲರಿಗೂ ಜನರೇಟರ್ ಬೇಕು. ಸೋ, ಸೆಲ್ಲರ್ಸ್ ಮಾರ್ಕೆಟ್‍ನಲ್ಲಿದ್ದೆವು.

ಹ್ಞಾಂ... ಇನ್ನೊಂದು ವಿಷಯ ಮರೆತೆ. ನಾನು ಸೇಲ್ಸ್ ಜನರೇಟರ್ಸ್ ಡಿಪಾರ್ಟ್‍ಮೆಂಟ್ ಸೇರಿದ್ದು 17-3-1983. ಆ ವಾರ ಬಂದ ಭಾನುವಾರವೇ ನಮ್ಮ ಡಿಪಾರ್ಟ್‍ಮೆಂಟು ಟೂರು ಹೊರಟಿದ್ದರು. ಹೊಗೆನಕ್ಕಲ್ ಜಲಪಾತಕ್ಕೆ.

ಎಲ್ಲರೊಂದಿಗೆ ಸೇರಿ ಮಾತನಾಡುತ್ತಾ ಹೋದೆ. ಎಲ್ಲರೂ ಹೊಸಬರೇ. ನನ್ನ ಜೊತೆ ಟ್ರೈನಿಂಗ್ ಮಾಡಿದ್ದ ಜಿನ್ ಮತ್ತು ರಮ್ ಬಿಟ್ಟು!

ಹೊಗೆನಕ್ಕಲ್‍ನಲ್ಲಿ ಎಣ್ಣೆ ಮಾಲಿಶ್ ಮಾಡುತ್ತಿದ್ದರು. ನಾವೂ ಎಲ್ಲರೂ ನಮ್ಮ ಕನಿಷ್ಠ ಉಡುಪುಗಳಲ್ಲಿ ಮೈಗೆ ಎಣ್ಣೆ ಬಡಿಸಿಕೊಂಡೆವು. ಅಕ್ಷರಶಃ ಅವನು ಮೈ ಮೇಲೆ ಬಡಿದಿದ್ದ!

ನಂತರ ಅಲ್ಲೇ ಮೇಲಿನಿಂದ ಧುಮುಕುತ್ತಿದ್ದ ನೀರಿನಡಿಯಲ್ಲಿ ನಿಂತೆವು. ಅಬ್ಬಾ! ಮೂಟೆಗಳು ಮೈ ಮೇಲೆ ಬಿದ್ದಂತಾಯಿತು. ಆ ರಭಸಕ್ಕೋ ಏನೋ ಸೋಪು, ಸೀಗೇಕಾಯಿ ಇಲ್ಲದೆ ನಮ್ಮ ಮೈ ಮೇಲಿನ ಎಣ್ಣೆಯೆಲ್ಲಾ ಮಂಗಮಾಯ!

ನಂತರ ಅಲ್ಲಿ ಒಂದು ಹರಿಗೋಲನ್ನು ಬಾಡಿಗೆಗೆ ಪಡೆದು ಎಲ್ಲರೂ ನದಿಯಲ್ಲಿ ಹೋದೆವು. ಕಾವೇರಿ ಅಲ್ಲಿ ಕಪ್ಪುಶಿಲೆಗಳನ್ನು ಚುಂಬಿಸಿ, ಅಪ್ಪಿ, ಚಿತ್ತಾರಗಳನ್ನು ಮೂಡಿಸಿದ್ದಾಳೆ. ಎಷ್ಟಿರಬಹುದು ಆಳ ಎಂದು ಹರಿಗೋಲಿನ ಅಂಬಿಗನನ್ನು ಕೇಳಿದಾಗ ಅವನು ಐವತ್ತು ಅಡಿ ಎಂದಾಗ ನಾವು ಬೆವರಿ, ಬೆದರಿ ಕುಳಿತಿದ್ದೆವು.

ನಂತರ ಅಲ್ಲಿಯೇ ಮರಳ ದಂಡೆಯ ಮೇಲೆ ಖಾನಾ, ಪೀನಾ, ಮೌಜ್ ಉಡಾನಾ ಆಯಿತು.

ಸಿಕ್ಕಾಪಟ್ಟೆ ಎಂಟರ್‍ಟೈನ್‍ಮೆಂಟು. ಒಂದು ವಿಧದಲ್ಲಿ ಕೆಲಸಕ್ಕೆ ಸೇರಿ ಆಲ್‍ಮೋಸ್ಟ್ ತಕ್ಷಣವೇ ಅವರುಗಳೊಂದಿಗೆ ಹೊರಗೆ ಹೋಗಿದ್ದರಿಂದ ನಮ್ಮ ನಡುವಣ ನಾನ್ ಕಮ್ಯೂನಿಕೇಷನ್ ಮಾಯವಾಗಿತ್ತು!

ಸೋಮವಾರ ಎಲ್ಲರನ್ನೂ ಖುಷಿಯಾಗಿ ಹೊಸ ರೀತಿಯಲ್ಲಿ ಮಾತನಾಡಿಸುವಂತಾಯಿತು.

ಒಮ್ಮೆ ನಮ್ಮ ಬಾಸ್ ಒಬ್ಬರು (ಹೆಸರೇಕೆ?) ಫೋನ್ ಮಾಡುತ್ತಿದ್ದರು. ಧ್ವನಿ ಸ್ವಲ್ಪ ಜೋರಾಗಿತ್ತು. ನಮ್ಮ ಬಿಗ್ಗೆಸ್ಟ್ ಬಾಸ್ ಅಲ್ಲಿಗೆ ಬಂದರು. ಅವರ ರೂಮು ಮೂಲೆಯಲ್ಲಿತ್ತು. ಅನೇಕ ಅಮೆರಿಕನ್ ಪುಸ್ತಕಗಳಲ್ಲಿ ಬಾಸ್ ರೂಮನ್ನು ಕಾರ್ನರ್ ರೂಮ್ ಎಂದು ಏಕೆ ಹೇಳುವರೆಂದು ನನಗೆ ಮೊದಲೇ ಗೊತ್ತಿತ್ತು. ಏಕೆಂದರೆ ನಮ್ಮ ದೊಡ್ಡ ಬಾಸ್ ಅವರ ರೂಮು ಮೂಲೆಯಲ್ಲಿತ್ತಲ್ಲ!

ಹ್ಞಾಂ... ಆ ದೊಡ್ಡ ಬಾಸ್ ಬಂದರು. ನಮ್ಮ ಪಕ್ಕದಲ್ಲಿದ್ದ ಯಾರನ್ನೋ ‘ಯಾರ ಬಳಿ ಮಾತಾಡುತ್ತಿದ್ದಾರೆ?’ ಎಂದು ಮೆಲ್ಲನೆ ಕೇಳಿದರು. ಅವರು ದೊಡ್ಡ ಬಾಸ್‍ಗೆ ‘ಕಲ್ಕತ್ತಾ’ ಎಂದರು. ತಕ್ಷಣವೇ ದೊಡ್ಡ ಬಾಸ್, ‘ಫೋನ್ ಬಳಸಿ ಮಾತಾಡೋಕ್ಕೆ ಹೇಳ್ರೀ ಅವರಿಗೆ’ ಎಂದು ಹೇಳಿ ಹೊರಟರು!

ನಾವು ನಕ್ಕೆವು. ನಮ್ಮ ಬಾಸ್ ಮಾತಾಡ್ತಿದ್ದ ಶೈಲಿ ನೋಡಿದರೆ ಫೋನಿನ ಸಹಾಯವಿಲ್ಲದೇ ನೇರವಾಗಿ ಕಲ್ಕತ್ತಾಗೇ ಮಾತಾಡ್ತಿದ್ದಾರೆ ಎಂಬಂತಹ ಜೋರು ಧ್ವನಿ.

ಇಂತಹ ಚಿಕ್ಕಪುಟ್ಟ ಘಟನೆಗಳು ಇಂದಿಗೂ ಏಕೆ ನೆನಪಿವೆಯೆಂದರೆ ನಾವು ನಮ್ಮ ಕೆಲಸವನ್ನು ಬಹಳವೇ ಪ್ರೀತಿಸುತ್ತಿದ್ದೆವು.

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102