ಯತಿ ಸ್ವಂತೀ -211
30-07-2018
ದಿನವೂ ಕೆಲವು ಫೋನ್ ಕಾಲ್‍ಗಳನ್ನು ಅಟೆಂಡ್ ಮಾಡುವುದು. ನಂತರ ಷಾಪ್‍ಥ್ರೀಗೆ ಹೋಗುವುದು. ಅಲ್ಲಿ ನಾವು ಹೋಗುವ ವೇಳೆಗೆ ನಮ್ಮ ಕಂಪೆನಿಯ ದೊಡ್ಡ ಬಾಸ್ ಅಲ್ಲಿಗೆ ಬರುತ್ತಿದ್ದರು. ಅವರ ಬಳಿ ಮಾತುಕತೆ.
ಈ ನಡುವೆ ಮನೆಯ ಬಳಿ ಒಂದು ಹೊಸ ಡೆವೆಲಪ್‍ಮೆಂಟ್ ಆಯಿತು.
ನಮ್ಮ ಮನೆಯ ಬಳಿ ಇದ್ದ ಉದಯ್‍ಗೆ ಕೂಡ ಕಂಟ್ರೋಲ್ ಇಂಜಿನಿಯರಿಂಗ್ ಡಿಪಾರ್ಟ್‍ಮೆಂಟಿನಲ್ಲಿ ಕೆಲಸ ಸಿಕ್ಕಿತ್ತು. ಅವನು ಒಂದು ಸ್ಕೂಟರ್ ಇಟ್ಟುಕೊಂಡಿದ್ದ. ಅವನು ನನ್ನನ್ನು ‘ನೀನೇಕೆ ನನ್ನ ಜೊತೆ ಬರಬಾರದು?’ ಎಂದ. ಅಬ್ಬಾ, ಈ ಬಸ್ಸಿಗೆ ಓಡುವ ದುಃಸ್ಥಿತಿ(!) ತಪ್ಪುವುದೆಂದು ಒಪ್ಪಿಕೊಂಡೆ.
ಅಷ್ಟರಲ್ಲಿ ನಮ್ಮ ತಾಯಿಯವರಿಗೆ ಆರೋಗ್ಯ ಹೆಚ್ಚುಕಮ್ಮಿ ಆಗಿತ್ತು. ಸುಮಾರು ಎರಡು ಮೂರು ವಾರ ದಿನವೂ ಮ್ಯಾಗಿ ನೂಡಲ್ಸ್ ತಿಂದು ತಲೆ ಕೆಟ್ಟಿತ್ತು. ಅಮ್ಮನಿಗೆ ತೊಂದರೆ ಕೊಡುವುದು ಬ್ಯಾಡ ಅಂತ ಆ ಕೆಲಸ ಮಾಡಿಕೊಂಡೆ.
ಉದಯ್ ಮನೆಗೆ ಹೋದಾಗ ನನ್ನ ತಿಂಡಿಯ ಬಗೆಗೆ ಅವನ ತಾಯಿ ಕೇಳಿದರು. ಮ್ಯಾಗ್ಗಿ ಅಂದೆ. ನಮ್ಮ ತಾಯಿಗೆ ತಿಂಡಿ ಮಾಡಲಾಗುತ್ತಿಲ್ಲ ಎಂದೆ.
ಅಯ್ಯೋ ಅದಕ್ಯಾಕೆ ಯೋಚ್ನೆ? ಇಲ್ಲಿಗೇ ದಿನಾ ಬಾ ತಿಂಡಿಗೆ ಎಂದರು.
ನನಗೋ ಮೊದಲೇ ಸಂಕೋಚ, ನಾಚಿಕೆ ಎಲ್ಲಾ ಹೊಳೆಯಿಂದಾಚೆಗೆ. ಮರುದಿನದಿಂದ ಬೆಳಗ್ಗೆ ಅವರ ಮನೆಗೆ ಅವನ ತಿಂಡಿಯ ಹೊತ್ತಿಗೇ ಹಾಜರ್.
ನಮ್ಮ ಮನೆಯಿಂದ ಹೊರಗೆ ಬಂದು ಬಲಕ್ಕೆ ತಿರುಗಿ 11ನೇ ಮುಖ್ಯರಸ್ತೆಯಲ್ಲಿ ಎಡಕ್ಕೆ ತಿರುಗಿ ಮತ್ತೆ ಬಲಕ್ಕೆ ತಿರುಗಿ ಮೊದಲ ರಸ್ತೆಯಲ್ಲಿ ಎಡಕ್ಕೆ ತಿರುಗಿದರೆ ಕೊನೆಯ ಮನೆ ಉದಯನದು.
ಅಲ್ಲಿ ಹೋಗಿ ರುಚಿರುಚಿಯಾಗಿ ಎಲ್ಲ ರೀತಿಯ ತಿಂಡಿಗಳನ್ನೂ ತಿಂದೆ. ನಾನು ಅದಕ್ಕೆ ಮೊದಲು ಒಂದು ಸೈಡ್ ಬಿಳಿ ಬಣ್ಣವಿರುವ ದೋಸೆ ತಿಂದಿರಲಿಲ್ಲ. ಅವರೇಕಾಳುಗಳಿಂದ ಆವೃತವಾದ ಬಾಣಲೆ ಅಕ್ಕಿರೊಟ್ಟಿ ತಿಂದಿರಲಿಲ್ಲ.
ಈಗಲೂ ನಮ್ಮ ಮನೆಯಲ್ಲಿ ಆ ವಿಷಯವಾಗಿ ನನ್ನ ಪತ್ನಿ ರೇಗಿಸುತ್ತಾಳೆ.
‘ಏನು, ಉದಯ್ ಅಮ್ಮ ಮಾಡಿರೋ ಥರ ಇದೆಯಾ ದೋಸೆ?’ ಅಂತ.
ಅವರೇಕಾಳುಮಯವಾದ ಅಕ್ಕಿರೊಟ್ಟಿಯನ್ನು ಬಾಣಲೆಯಲ್ಲಿ ಬೇಯಿಸಿ ಕೊಟ್ಟಿದ್ದನ್ನು ಈಗಲೂ ಎಂದಾದರೂ ತಿಂದರೆ ಆ ಅನ್ನಪೂರ್ಣೆಯ ನೆನಪಾಗುತ್ತದೆ. ಅಬ್ಬಾ, ಅದೇನು ವಾತ್ಸಲ್ಯ ಆಕೆಗೆ.
ಆಫೀಸಿನಲ್ಲಿ ಮಧ್ಯಾಹ್ನ ಕ್ಯಾಂಟೀನ್ ಊಟ. ದೊಡ್ಡ ಸ್ಟೀಲ್ ತಟ್ಟೆ ಹಿಡಿದು ಕ್ಯೂ ನಿಂತರೆ ಅನ್ನ, ಸಾಂಬಾರ್, ಸಾರು, ಪಲ್ಯ, ಮೊಸರು ಜೊತೆಗೆ ಸೋಮವಾರ ಉದ್ದಿನ ಬೋಂಡ, ಮಂಗಳವಾರ ಮಸಾಲೆ ವಡೆ, ಬುಧವಾರ ಉದ್ದಿನ ವಡೆ, ಗುರುವಾರ ಆಲೂ ಬೋಂಡಾ ಅಥವಾ ಉದ್ದಿನ ಬೋಂಡಾ, ಶುಕ್ರವಾರ ಮಸಾಲೆ ವಡೆ, ಶನಿವಾರ ಚೌಚೌ.
ಈ ರೊಟೀನ್ ನಮಗೆ ಎಷ್ಟು ರೂಢಿ ಆಗಿತ್ತೆಂದರೆ ನಮ್ಮ ಆಫೀಸಿಗೆ ಇನ್ಸ್‍ಪೆಕ್ಷನ್‍ಗೆ ಬಂದ ಕೆಲವು ಹೊರಗಿನವರು ಕೂಡ ‘ಈವತ್ತು ಉದ್ದಿನ ಬೋಂಡಾ ಅಲ್ವಾ?’ ಎನ್ನುತ್ತಿದ್ದರು ಸೋಮವಾರ ನಮ್ಮ ಆಫೀಸಿಗೆ ಬಂದರೆ.
Comments
Post a Comment