ಯತಿ ಸ್ವಂತೀ -210
29-07-2018
ನನಗೆ ಇಬ್ಬರು ಅಸಿಸ್ಟೆಂಟುಗಳು. ಜಿನೇಂದ್ರ ಮತ್ತು ರಾಮರತ್ನ. ಬಹಳ ಚುರುಕು ಹುಡುಗರು. ಜಿನ್ ಆಂಡ್ ರಮ್ ಅಂತ ಪ್ರೀತಿಯಿಂದ ಕರೆಯುತ್ತಿದ್ದೆ.
ನಮ್ಮಲ್ಲಿ ಎರಡು ಪ್ರೊಡಕ್ಷನ್ ಶಾಪ್‍ಗಳಿದ್ದವು. ಒಂದು ಶಾಪ್ 2 ಮತ್ತೊಂದು ಶಾಪ್ 3. ಮೀಡಿಯಂ ಸೈಜಿನ ಜನರೇಟರುಗಳು ಶಾಪ್ ಟೂನಲ್ಲೂ, ಲಾರ್ಜ್ ಸೈಜು ಜನರೇಟರುಗಳು ಶಾಪ್ ಥ್ರೀನಲ್ಲೂ ಉತ್ಪಾದನೆಗೊಳ್ಳುತ್ತಿದ್ದವು.
ಶಾಪ್‍ಟೂಗೆ ನನ್ನ ಜೂನಿಯರ್ ರಾಮರತ್ನ. ಶಾಪ್‍ಥ್ರೀಗೆ ಜಿನೇಂದ್ರ.
ಬೆಳಗ್ಗೆ ಏಳೂವರೆ ಇತ್ತು ಪಂಚಿಂಗ್ ಟೈಮು. ಆಮೇಲೆ ಎಂಟಾಯಿತು.
ಜಯನಗರದಲ್ಲಿದ್ದೆ ನಾನು. ಬೆಳಗ್ಗೆ ಆರು ಗಂಟೆಗೆ ನಾಲ್ಕನೇ ಬ್ಲಾಕ್ ಕಾಂಪ್ಲೆಕ್ಸ್‍ನಿಂದ ಬಸ್ಸು. ಟಿ ಬ್ಲಾಕ್‍ನಿಂದ ನಡೆದು ಬಸ್ ಸ್ಟಾಪಿಗೆ ಬಂದು ನಂಬರ್ 1 ಯಶವಂತಪುರದ ಬಸ್ಸು ಹತ್ತುತ್ತಿದ್ದೆವು. ಇನ್ನೊಂದು ಬಸ್ಸು 1ಬಿ. ಅದು ಟಾಟಾ ಇನ್ಸ್‍ಟಿಟ್ಯೂಟ್ ಕಡೆಯಿಂದ ಹೋಗುತ್ತಿತ್ತು. ಯಶವಂತಪುರ ಸರ್ಕಲ್ಲಿನಲ್ಲಿಳಿದು ಮೂಲೆಯಲ್ಲಿರುವ ಗಾಯತ್ರಿ ಹೊಟೇಲ್‍ನಲ್ಲಿ ಇಡ್ಲಿ ವಡೆ ತಿಂದು ನಂತರ ಕಾರ್ಖಾನೆ ತಲುಪುತ್ತಿದ್ದೆವು. ಈಗ ಕಾರ್ಖಾನೆ ಅಲ್ಲಿ ಇಲ್ಲ. ಕೇವಲ ಒಂದು ಆಫೀಸ್ ಇದೆ. ಆ ಜಾಗದಲ್ಲೀಗ ಮೆಟ್ರೋ (ರೈಲು ಅಲ್ಲ ಕಣ್ರೀ, ವಸ್ತುಗಳನ್ನು ಮಾರುವ ಮೆಟ್ರೋ), ಬ್ರಿಗೇಡ್ ಮಿಲೇನಿಯಮ್ ಮತ್ತು ಕೊಲಂಬಿಯಾ ಏಸಿಯಾ ಆಸ್ಪತ್ರೆ ಇವೆಲ್ಲವೂ ಇವೆ.
ಮೈಸೂರು ಲ್ಯಾಂಪ್ಸ್ ಫ್ಯಾಕ್ಟರಿ ಇತ್ತು. ಅದರ ಹಿಂದೆ ರೈಲ್ವೇ ಗೇಟ್. ಅದನ್ನು ದಾಟಿದರೆ ಕಿರ್ಲೋಸ್ಕರ್ ಗೇಟು.
ಸ್ಕೂಟರ್ ಸ್ಟ್ಯಾಂಡ್ ಪಕ್ಕದಿಂದ ಹೋದರೆ ಬಲಗಡೆ ಹಣಕಾಸು ಇಲಾಖೆ. ನಡುವೆ ದೊಡ್ಡ ಖಾಲಿ ಜಾಗದಲ್ಲಿ ಅನೇಕ ಮರಗಳು. ಎದುರಿಗೆ ಪರ್ಚೇಸ್ ಡಿಪಾರ್ಟ್‍ಮೆಂಟ್. ಅದರ ಪಕ್ಕ ಎಡಕ್ಕೆ ತಿರುಗಿ ನಡೆದರೆ ಟೈಂ ಆಫೀಸ್. ಮತ್ತೆ ಕ್ಯಾಂಟೀನ್. ಅದನ್ನು ದಾಟಿ ಬಲಕ್ಕೆ ತಿರುಗಿದರೆ ಅದೋ, ನಮ್ಮ ಬಿಲ್ಡಿಂಗ್. ಕೆಳಗೆ ನಮ್ಮ ಟೈಂ ಕಾರ್ಡ್. ನಾಲ್ಕು ಸಲ ಪಂಚ್ ಮಾಡಬೇಕಿತ್ತು. ಹಳದಿಬಣ್ಣದ ಕಾರ್ಡನ್ನು ಅಲ್ಲಿದ್ದ ರಂಧ್ರದೊಳಗೆ ತೂರಿಸಿ ಪಿಡಿಯೊಂದನ್ನು ಒತ್ತಿದರೆ ನಮ್ಮ ಕಾರ್ಡ್ ಮೇಲೆ ಪರ್ಪಲ್ ಕಲರ್‍ನಲ್ಲಿ ಸಮಯ ಪ್ರಿಂಟ್ ಆಗುತ್ತಿತ್ತು. ಮಾರ್ನಿಂಗ್ ಇನ್, ಮಾರ್ನಿಂಗ್ ಔಟ್, ಆಫ್ಟರ್ ನೂನ್ ಇನ್, ಮತ್ತೆ ಔಟ್.
ನಾಲ್ಕು ಪಂಚ್ ಇಲ್ಲದಿದ್ದರೆ ಅಂದಿನ ಸಂಬಳ ಕಟ್. ನೋ ಪಂಚ್ ನೋ ಪೇ.
ಆ ಬಿಲ್ಡಿಂಗ್‍ನಲ್ಲಿ ಮೂರು ಭಾಗಗಳಿದ್ದವು. ನಮ್ಮ ಇಲಾಖೆ ಎರಡು ಭಾಗಗಳಲ್ಲಿ ಇತ್ತು. ಮಧ್ಯದ ಭಾಗದಲ್ಲಿ ನಮ್ಮ ಅಕೌಂಟ್ಸ್, ಡಿಸ್ಪ್ಯಾಚ್, ಸ್ಟೆನೋಗಳು ಕೂರುತ್ತಿದ್ದರು. ನಾವು ಕೊನೆಯ ವಿಂಗ್‍ನಲ್ಲಿ ಎರಡನೆಯ ಮಹಡಿಯ ಮೇಲೆ.
ಅಲ್ಲಿ ಎರಡು ಬಾಗಿಲುಗಳು. ಮೊದಲ ಬಾಗಿಲ ಒಳಗೆ ಎಕ್ಜೆಕ್ಯೂಟಿವ್ ಕ್ಯಾಂಟೀನ್. ಬಲಗಡೆಯ ಬಾಗಿಲಲ್ಲಿ ಎಂಟರ್ ಆದರೆ ನನ್ನದೇ ಮೊದಲ ಸೀಟು. ರಿಸೆಪ್ಷನಿಸ್ಟ್ ಆಗಿದ್ದೆ ಕೆಲವು ಕಾಲ! ಬಂದವರೆಲ್ಲಾ ಅವರ್ಯಾರು, ಇವರೆಲ್ಲಿ ಎಂದು ನನ್ನನ್ನೇ ಕೇಳುತ್ತಿದ್ದರು!!
Comments
Post a Comment