ಯತಿ ಸ್ವಂತೀ -208



27-07-2018

ಇನ್ನೇನು ನನ್ನ ಟ್ರೈನಿಂಗ್ ಮುಗಿಯಬೇಕು ಆಗ ನಡೆದಿತ್ತು ಆ ಘಟನೆ.

ಅಂದ ಹಾಗೆ ನನಗೆ ರೂ.650/- ಸ್ಟೈಪಂಡ್ ಬರುತ್ತಿದ್ದುದು ಮೂರು ತಿಂಗಳಿಗೆ ರೂ.750/- ಆಯಿತು. ಮನೆಗೆ ಅಷ್ಟೋ ಇಷ್ಟೋ ನನ್ನಿಂದ ಮನೆಗೆ ಸಹಾಯ ಆಗತೊಡಗಿತು.

ನನ್ನ ಇನ್ನೊಂದು ಸಮಸ್ಯೆ ಇತ್ತು. ನಮ್ಮ ಟ್ರೈನಿಂಗ್ ಸಮಯದಲ್ಲಿ ನಾವು ಹಾಕುತ್ತಿದ್ದ ಗ್ರೇ ಬಣ್ಣದ ಶರ್ಟು ನನ್ನ ತಲೆಯಲ್ಲಿ ಎಷ್ಟು ನಿಂತಿತ್ತೆಂದರೆ ನಾನು ಮತ್ತೊಮ್ಮೆ ಆ ಕಲರ್ ಷರಟು ಕೊಂಡುಕೊಳ್ಳಲಿಲ್ಲ!

ನನ್ನ ಕೆಲವು ಸಹೋದ್ಯೋಗಿಗಳು ನನ್ನನ್ನು ಬೈಯುತ್ತಿದ್ದರು. ಏಕೆಂದರೆ ನಾನು ಅವರನ್ನು ಅವರ ಬೇರೆ ಉಡುಪುಗಳಲ್ಲಿ ಕಂಡು ಹಿಡಿಯಲು ವಿಫಲನಾಗುತ್ತಿದ್ದೆ!

‘ಸಾರಿ, ನೀನು ಯೂನಿಫಾರಂ ಹಾಕಿಲ್ಲ ನೋಡು, ಅದಕ್ಕೇ ನನಗೆ ಗುರ್ತು ಸಿಗಲಿಲ್ಲ’ ಎಂದು ಕುರಿಯಂತೆ ನಗುತ್ತಿದ್ದೆ.

ಹ್ಞಾಂ... ಒಂದು ಘಟನೆ ಎಂದೆನಲ್ಲಾ...

ನನ್ನನ್ನು ಸೇಲ್ಸ್ ಡಿಪಾರ್ಟ್‍ಮೆಂಟಿನ ಬಿ.ಎಸ್. ಜಗನ್ನಾಥ್ ಕರೆಸಿದರು. ಕಳೆದ ಒಂದು ವರ್ಷ ಎಂದೂ ಅಲ್ಲಿಗೆ ಹೋಗಿರಲಿಲ್ಲ ನಾನು.

ಬಿಎಸ್‍ಜೆ ನನಗೆ, ‘ನಿನ್ನನ್ನು ನಮ್ಮ ಡಿಪಾರ್ಟ್‍ಮೆಂಟ್‍ಗೆ ಅಪಾಯಿಂಟ್ ಮಾಡಿಕೊಳ್ಳಬೇಕೆಂದಿದ್ದೇವೆ. ಯಾವಾಗ ನಿನಗೆ ಅಪಾಯಿಂಟ್‍ಮೆಂಟ್ ಆರ್ಡರ್ ಬರುವುದೋ ಆಗ ಬಂದು ಸೇರು’ ಎಂದರು. ನನಗೆ ತಬ್ಬಿಬ್ಬು, ಖುಷಿ ಎಲ್ಲಾ.

ಅಬ್ಬಾ, ತರಬೇತಿ ಮುಗಿದ ನಂತರ ಸಧ್ಯ, ಕೆಲಸ ಸಿಗಲಿದೆ ಎಂದುಕೊಂಡೆ.

ಫೆಬ್ರುವರಿ 7 1983ರಂದು ಟ್ರೈನಿಂಗ್ ಮುಗಿದುಹೋಯಿತು.

ಕೆಲವು ಸಹೋದ್ಯೋಗಿಗಳ ಜೊತೆ ಒಂದಿಷ್ಟು ಗೆಳೆತನ ಬೆಳೆದಿತ್ತು. ಅದರಲ್ಲಿ ಒಬ್ಬ ಉದಯಸಿಂಹ. ನಾನು 16ನೇ ಮೆಯಿನ್‌ನಲ್ಲಿದ್ದರೆ ಅವನು 10 ಎ ಮೆಯಿನ್‍ನಲ್ಲಿದ್ದ.

ಮಾರ್ಚ್ 17ಕ್ಕೆ ನಾನು ಸೇಲ್ಸ್ ಎ.ಸಿ. ಜನರೇಟರ್ಸ್ ಸೇಲ್ಸ್ ಡಿಪಾರ್ಟ್‍ಮೆಂಟ್ ಸೇರಿಕೊಂಡೆ. ಏನೋ ಥ್ರಿಲ್. ಜಗನ್ನಾಥ್ ಅವರ ಪರಿಚಯ ಆಗಿತ್ತಲ್ಲ. ಉಳಿದವರೆಲ್ಲಾ ಹೊಸಬರು ನನಗೆ!

ನನ್ನ ಜೊತೆ ಟ್ರೈನಿಂಗ್ ಮಾಡಿದ್ದ ಜಿನೇಂದ್ರ ಮತ್ತು ರಾಮರತ್ನ ಇಬ್ಬರನ್ನೂ ಅಪಾಯಿಂಟ್ ಮಾಡಿಕೊಂಡರು.

ಎರಡನೇ ಮಹಡಿಯಲ್ಲಿ ಆಫೀಸ್. ಯಾವುದೇ ಮೆಷಿನ್ನುಗಳಿಲ್ಲ. ಕೇವಲ ಟೇಬಲ್‍ಗಳು. ನಮ್ಮ ಬಾಸ್‍ಗಳು ನಮ್ಮ ಪಕ್ಕದಲ್ಲೇ!

ಮೊದಲೇ ಹೇಳಿಬಿಟ್ಟಿದ್ದರು, ಇಲ್ಲಿ ಯಾರೂ ‘ಸಾರ್’ ಅನ್ನಬೇಕಿಲ್ಲ. ನಮ್ಮ ನಮ್ಮ ಹೆಸರು ಹಿಡಿದೇ ಕರೆಯಿರಿ ಎಂದು.

ವಾಹ್, ಇದೂ ಒಂದು ಹೊಸ ಅನುಭವ. ಸ್ವಾಮಿ ಅಂತ ಬಾಸ್ ಛೇಂಬರ್ ಒಳಗೆ. ಹೊರಗೆ ಸಾಲಾಗಿ ಜಗನ್ನಾಥ್, ಹರಿಪ್ರಸಾದ್, ಮಧುಸೂದನ್, ಕ್ರಿಸ್ಟೋಫರ್. ಜೊತೆಯಲ್ಲಿ ಈಗ ನಾನು.

ನಮ್ಮ ವಿಂಗ್ ಹೊರಗೆ ಬಂದು ಮೆಟ್ಟಿಲುಗಳ ಲ್ಯಾಂಡಿಂಗ್ ದಾಟಿದರೆ ಅಲ್ಲಿ ನಮ್ಮ ಆಫೀಸ್ ಸ್ಟೆನೋಗಳು, ಅಕೌಂಟೆಂಟುಗಳು, ಜಿನೇಂದ್ರ, ರಾಮರತ್ನ ಕೂರುತ್ತಿದ್ದರು. ಅವರೆದುರಿಗೆ ಮೋಟರ್ ಸೇಲ್ಸ್.

ಏನೋ ಒಂದು ರೋಮಾಂಚನ.

ಬಾಸ್‍ಗಳಲ್ಲಿ ಇಬ್ಬರು ಸದಾ ಸೀಟಲ್ಲಿ ಕೂತು ಸಿಗರೇಟ್ ಹೊಡೆಯುತ್ತಿದ್ದರು. ಅಬ್ಬಾ, ಎಂತಹ ಸ್ವಾತಂತ್ರ್ಯ! ಎನಿಸಿತ್ತು ಆಗ. ಆಮೇಲೆ ಸಮಯ ಬದಲಾಯಿತು. ಅಲ್ಲಿ ಸೇದಬಾರದು ಎನ್ನುವ ರೂಲು ತಂದರು ದೊಡ್ಡ ಬಾಸ್.

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102