ಯತಿ ಸ್ವಂತೀ -207
26-07-2018
“ನಿನಗೆ ಟ್ರೈನಿಂಗ್ ಪಡೆಯಲು ರಹದಾರಿ ಪತ್ರ ಸಿಕ್ಕಿದೆ” ಎಂಬ ಪತ್ರ ಮನೆಗೆ ಬಂದಿತು.
ಖುಷಿಯೋ ಖುಷಿ. 650 ರೂಗಳ ಸಂಬಳ... ಉಹೂಂ ಸ್ಟೈಪಂಡ್!
ಈ ನಡುವೆ ನಾನು ಮೈಸೂರು ಬಿಟ್ಟು ಬರುವಾಗ ದಾಸ್‍ಪ್ರಕಾಶ್ ಹೊಟೇಲ್‍ನಲ್ಲಿ ನನಗೆ ನನ್ನ ಹನ್ನೆರಡು ಗೆಳೆಯರು ಸೆಂಡಾಫ್ ನೀಡಿದರು. ಒಂದು ಪಟ ತೆಗೆಸಿಕೊಂಡೆವು. ಅದೊಂದು ಚರಿತ್ರಾರ್ಹ ಪಟ. ಏಕೆಂದರೆ ಈಗ ಅದರಲ್ಲಿನ ಮೂವರು ಇಲ್ಲ...
ಎಲ್ಲರಿಗೂ ಪತ್ರ ಬರೆಯುತ್ತಿದ್ದೆ. ಎಲ್ಲರೂ ಉತ್ತರ ಬರೆಯುತ್ತಿದ್ದರು. ಆಗಿನ್ನೂ ನಾನು ನನ್ನ ಮೊದಲ ಕೆಲಸಕ್ಕೂ ಸೇರಿರಲಿಲ್ಲ.
ಪೋಸ್ಟ್‍ಮ್ಯಾನ್ ನಗುತ್ತಿದ್ದ. ಯತಿರಾಜ್ ಎನ್ನುವ ಹೆಸರಿನ ಕಾಗದ ಬೇರೆ ಯಾವುದೋ ಬ್ಲಾಕ್‍ನದೂ ಇದ್ದರೂ ನನಗೇ ತಂದು ಒಪ್ಪಿಸುತ್ತಿದ್ದ.
ಅಂತೂ ಅದೊಂದು ಗೋಲ್ಡನ್ ಎಕ್ಸ್‍ಪೀರಿಯೆನ್ಸ್. ದುರದೃಷ್ಟವಶಾತ್ ಆ ಪತ್ರಗಳು ಇಂದು ನನ್ನ ಬಳಿ ಇಲ್ಲ.
ಹೂಂ. ಸ್ಟೈಪಂಡ್ ಸಿಕ್ಕಿತು. ಕಿರ್ಲೋಸ್ಕರ್ ಎಲೆಕ್ಟ್ರಿಕ್ ಕಂಪೆನಿಯ ಟ್ರೈನಿಂಗ್ ಸೆಂಟರ್‍ಗೆ ಡಾರ್ಕ್ ಗ್ರೇ ಬಣ್ಣದ ಸಮವಸ್ತ್ರ. ಪ್ಯಾಂಟಿನ ಕಲರ್ ಕಡ್ಡಾಯವಿರಲಿಲ್ಲ. ಆದರೆ ಇನ್‍ಸರ್ಟ್ ಮಾಡಬೇಕು. ನನಗಂತೂ ಅದು ಅಭ್ಯಾಸವೇ ಇರಲಿಲ್ಲ. ಈಗ ವಿಧಿಯಿಲ್ಲ.
ವಿಂಗ್ ಕಮ್ಯಾಂಡರ್ ಒಬ್ಬರು ನಮ್ಮ ಟ್ರೈನಿಂಗ್ ಮ್ಯಾನೇಜರ್. ಸ್ಮಿತ್ತಿ, ಲೇತ್‍ವರ್ಕ್, ಕಾರ್ಪೆಂಟರಿ ಕಲಿಸಿದರು. ಜೊತೆಗೆ ಲೆಕ್ಚರ್‍ಗಳು ಬಹಳವೇ ಇರುತ್ತಿದ್ದವು. ಕಂಪೆನಿಯ ದೊಡ್ಡ ಅಧಿಕಾರಿಗಳು ಮತ್ತು ಹೊರಗಿನಿಂದ ಬಂದವರೂ ಭಾಷಣ ಮಾಡುತ್ತಿದ್ದರು.
ನಂತರ ನಮ್ಮನ್ನು ಬೇರೆ ಬೇರೆ ಡಿಪಾರ್ಟ್‍ಮೆಂಟಿಗೆ ಕಳಿಸಿದರು. ಪ್ರೊಡಕ್ಷನ್, ಡಿಸೈನ್, ಟೆಸ್ಟಿಂಗ್ ಎಲ್ಲ ಇಲಾಖೆಗಳಿಗೂ ಹೋದೆ. ಜೊತೆಯಲ್ಲಿ ಒಂದು ಪ್ರಾಜೆಕ್ಟ್. ಅದು ಆರ್ ಆಂಡ್ ಡಿ ಇಲಾಖೆಯಲ್ಲಿತ್ತು. ಅದಕ್ಕೆ ನನಗೊಬ್ಬ ಶಿಷ್ಯ. ಜಯರಾಜ್ ಎಂದಿರಬೇಕು ಅವನ ಹೆಸರು.
ಅಲ್ಲಿ ಡಾ. ಚೆನ್ನಕೇಶವ ಅವರ ಸುಪರ್ದಿಯಲ್ಲಿ ‘ಡ್ರೈಟೈಪ್ ಟ್ರಾನ್ಸ್‍ಫಾರ್ಮರ್’ ಡಿಸೈನ್ ಮಾಡಿ, ತಯಾರು ಮಾಡಿಸಿ, ಟೆಸ್ಟ್ ಮಾಡುವ ಪ್ರಾಜೆಕ್ಟ್. ತುಂಬಾ ಇಷ್ಟವಾಗಿ ಮಾಡಿದ ಕೆಲಸವದು.
ಕೆಲವು ಡಿಪಾರ್ಟ್‍ಮೆಂಟುಗಳಲ್ಲಿ ಕೆಲಸವೇ ಇರುತ್ತಿರಲಿಲ್ಲ ಇದ್ದರೂ ಯಾವುದೋ ಒಂದು ಚಿಕ್ಕ ಕೆಲಸ.
ಅಂತೂ ಒಂದು ವರ್ಷ ಚಿಟಿಕೆ ಹೊಡೆಯುವಷ್ಟರಲ್ಲಿ ಕಳೆದುಹೋಯಿತು.
ತರಲೆ ಹುಡುಗರ ಆಟಗಳಿಂದ ದಿನವೆಲ್ಲಾ ಎಂಜಾಯ್ ಮಾಡುತ್ತಿದ್ದೆವು. ಎಲ್ಲರೂ ಒಂದು ರೀತಿ ಅಂಬರೀಶ್‍ಗಳೇ. ಐ ಮೀನ್ ರೆಬೆಲ್ಸ್.
ಅಮೆರಿಕದಲ್ಲಿ (ಮತ್ತು ಈಗ ಭಾರತದಲ್ಲಿ ಕೂಡ) ಟೀನೇಜರುಗಳು (13ರಿಂದ 19ವರ್ಷದ ಮಕ್ಕಳು) ಸಾಮಾನ್ಯವಾಗಿ ರೆಬೆಲ್‍ಗಳು. ನಾವುಗಳು ಈಗ ರೆಬೆಲ್‍ಗಳಾಗಿದ್ದ ನೆನಪು! ಬಹುಶಃ ಆಗ ಭಾರತೀಯ ಮಕ್ಕಳ ‘ಬೆಳವಣಿಗೆ’ ತಡವಾಗಿ ಆಗುತ್ತಿತ್ತೇನೋ.
ಈಗ ಮೊಬೈಲ್ ಇರುವುದರಿಂದ ಇಡೀ ಪ್ರಪಂಚದ ‘ಪ್ರತಿಯೊಂದನ್ನೂ’ ಬೆರಳ ತುದಿಯಲ್ಲಿ ನೋಡಬಲ್ಲವಾಗಿರುವುದರಿಂದ ಮಕ್ಕಳು ಬಹಳ ಬೇಗ (ಬೇಡದ)ಬೆಳವಣಿಗೆ ಹೊಂದುತ್ತಾರೆ.
ಒಂದು ರೀತಿ ಹಲಸಿನಕಾಯಿಯನ್ನು ಗೋಣೀಚೀಲದಲ್ಲಿಟ್ಟು ಹಣ್ಣು ಮಾಡಿದ ಹಾಗೆ!
ಒಬ್ಬ ದಾರ್ಶನಿಕರು ಹೇಳಿರುವಂತೆ ಇನ್ನು ಮುಂದೆ ಜನರು ‘ಬೋರ್‍ಡಂ’ನಿಂದಲೇ ಆತ್ಮಹತ್ಯೆ ಮಾಡಿಕೊಳ್ಳಬಹುದು. ನಮಗಿದ್ದಂತೆ ಎಲ್ಲದರಲ್ಲೂ ಕುತೂಹಲ. ಹಂತಹಂತವಾಗಿ ಜೀವನವನ್ನು ತಿಳಿದುಕೊಳ್ಳುವ ಉತ್ಸುಕತೆ ಈಗಿರಲು ಸಾಧ್ಯವಿಲ್ಲ ಅಲ್ಲವೇ?
Comments
Post a Comment