ಯತಿ ಸ್ವಂತೀ -206
25-07-2018
ಈ ಕಂಪೆನಿಯಲ್ಲಿ ನಾನು ಮಾತನಾಡುವುದನ್ನು ಕಲಿತುಕೊಂಡೆ. ಅದಕ್ಕೆ ಮೊದಲು ನೆಂಟರು, ಗೆಳೆಯರು, ಮೇಷ್ಟರು, ಮೇಡಮ್ಮುಗಳು, ಸಿನಿಮಾ ಟಿಕೆಟ್ ಕೌಂಟರ್ ಮನುಷ್ಯರು, ಲೇಟಾಗಿ ಸಿನಿಮಾಗೆ ಹೋದರೆ ‘ಶುರುವಾಗಿ ಎಷ್ಟೊತ್ತಾಯ್ತು?’ ಅಂತ ಪಕ್ಕದವರನ್ನು ಕೇಳೋದು ಬಿಟ್ಟರೆ ಸಂಪೂರ್ಣ ಅಪರಿಚತರನ್ನು ಮಾತಾಡಿಸಿದ್ದೇ ಇಲ್ಲ.
ಈಗ ತ್ರಿವೇಂದ್ರಂ, ಸುಳ್ಳೂರು ಪೇಟ, ಕೆ.ಜಿ.ಎಫ್ ಊರುಗಳಲ್ಲಿ ಮಾತ್ರವಲ್ಲದೆ ಇಡೀ ಬೆಂಗಳೂರಿನಲ್ಲಿ ಸೈಕಲ್‍ನಲ್ಲಿ ಓಡಾಡಿ ಭಾವೀ ಗ್ರಾಹಕರನ್ನು ಹಿಡಿಯುತ್ತಿದ್ದೆ.
ಇದು ನನಗೆ ಮಾತು ಕಲಿಸಿತು, ಬೆಂಗಳೂರಿನ ನಕ್ಷೆ ಪರಿಚಯಿಸಿತು. ಈಗಲೂ ನನಗೆ ಹೆಚ್ಚು ಕಡಿಮೆ ಹಳೆಯ ಬೆಂಗಳೂರು ಚೆನ್ನಾಗಿ ಪರಿಚಯ ಇದೆ.
ಬಹುಶಃ ನನಗೆ ಇಂದಿಗೂ ತಿಳಿಯದಿರುವ ಜಾಗಗಳೆಂದರೆ ಫ್ರೇಜರ್ ಟೌನ್, ಬೆನ್ಸನ್ ಟೌನ್ ಇತ್ಯಾದಿಗಳು. ಹೋಗಿಲ್ಲವೆಂತಲ್ಲ, ಹೆಚ್ಚು ಸಲ ಹೋಗಿಲ್ಲ.
ಈ ಕೆಲಸವು ಒಂದು ವರ್ಷದೊಳಗೆ ಬೋರ್ ಹೊಡೆಸಿತು. 300 ರೂಪಾಯಿ ಮಾತ್ರವೇ ಸಂಬಳ ಎಂದೂ ಇರಬಹುದು. ಆಗೆಲ್ಲಾ ಒಬ್ಬ ಇಂಜಿನಿಯರಿಂಗ್ ಪದವೀಧರನಿಗೆ ಎಷ್ಟು ಸಂಬಳ ಕೊಡುತ್ತಿದ್ದರೆಂಬುದನ್ನು ತಿಳಿಯುವುದೂ ಕಷ್ಟವಿತ್ತು.
ಕೆಲವರು ವಯಸ್ಸಾದವರು ಮುಲಾಜಿಲ್ಲದೆ, “ಎಷ್ಟು ನಿಂಗೆ ಸಂಬ್ಳ?” ಅಂತಾರೆ. ನನಗೆ ಹಾಗೆ ಕೇಳಲು ಬರೋದಿಲ್ಲ.
ಕಿರ್ಲೋಸ್ಕರ್ ಎಲೆಕ್ಟ್ರಿಕ್ ಕಂಪೆನಿಯಲ್ಲಿ ಗ್ರ್ಯಾಜುಯೇಟ್ ಇಂಜಿನಿಯರ್ ಟ್ರೈನೀ ಪೋಸ್ಟ್‍ಗೆ ಅಪ್ಲೈ ಮಾಡು ಎಂದರು ನನ್ನ ಅಂಕಲ್.
ಅವರೀಗ ಮತ್ತೆ ಬೆಂಗಳೂರಿನಲ್ಲಿ ಉಳಿದುಕೊಂಡಿದ್ದರಲ್ಲ. ಜಯನಗರದ 16ನೇ ಮೆಯ್ನ್ ನಾಲ್ಕನೇ ಟಿ ಬ್ಲಾಕ್‍ನಲ್ಲಿ ಮನೆ.
ನನ್ನ ತಾಯ್ತಂದೆಯರೂ ಇಲ್ಲಿಗೆ ಬಂದಾಗಿತ್ತು. ನಮ್ಮ ಇಡೀ ಸಂಸಾರ ಈಗ ಬೆಂಗಳೂರು.
ನಮ್ಮ ಪಕ್ಕದ ಮನೆಯಾತ ಅವರ ಮನೆಯ ಹಿಂದೆ ಔಟ್‍ಹೌಸ್ ಕಟ್ಟಿದ್ದರು. ರೈಲಿನಂತೆ ಇದ್ದ ಮನೆ. ಒಂದು ರೂಮು, ಒಂದು ಹಾಲ್, ಅಡಿಗೆ ಮನೆ, ಬಾತ್‍ರೂಮ್ ಮತ್ತು ಹೊರಗೆ ಟಾಯ್ಲೆಟ್.
ನಮ್ಮ ಅಂಕಲ್ ಮನೆಯ ಹಿಂಭಾಗದಲ್ಲಿ ಕಾಂಪೌಂಡ್ ಒಡೆದು ಅಲ್ಲಿ ಒಂದು ಗೇಟ್ ಮಾಡಿಸಿ ಅಲ್ಲಿಂದ ನಮ್ಮ ಮನೆ, ಅಂಕಲ್ ಮನೆ ಎಂದು ಓಡಾಡುತ್ತಿದ್ದೆವು.
ತಿನಿಸುಗಳು ನಮಗೆ ಎರಡೆರಡು ಕಡೆ ಸಿಗುತ್ತಿತ್ತು!
ಸರಿ, ಕಿರ್ಲೋಸ್ಕರ್‍ಗೆ ಅಪ್ಲೈ ಮಾಡಿದೆ.
ಇಂಟರ್‍ವ್ಯೂ ದಿನ ಹೋದರೆ ಎದೆ ಝಲ್ಲೆಂದಿತ್ತು.
ಒಂದು ಇಂಜಿನಿಯರಿಂಗ್ ಸಬ್ಜೆಕ್ಟ್ ಕೊಟ್ಟಿದ್ದರು. ಅದರ ಬಗೆಗೆ ಲೆಕ್ಚರ್ ಕೊಡಬೇಕಿತ್ತು. ನನ್ನಂತೆ ಇತರ ಅಭ್ಯರ್ಥಿಗಳು, ನಮ್ಮ ಎಂ.ಡಿ. ಮತ್ತು ಇನ್ನೂ ಹಲವು ಅಧಿಕಾರಿಗಳು!
ಚಿಕ್ಕಂದಿನಿಂದ ಅದೆಷ್ಟು ಸಲ ವೇದಿಕೆ ಹತ್ತಿ ಮಾತು, ನೃತ್ಯ, ನಾಟಕ ಎಲ್ಲವನ್ನೂ ಮಾಡಿದವನು ಈಗ ಬ್ಬೆ ಬ್ಬೆ ಬ್ಬೆ ಎಂದೆ.
ಬೋರ್ಡ್ ಮೇಲೆ ಬರೆದು ವಿವರಣೆ ನೀಡಬೇಕಿತ್ತು.
ಕೈಯಿಂದ ಅದೆಷ್ಟು ಸಲ ಚಾಕ್‍ಪೀಸ್ ಬಿತ್ತೋ ನನಗೆ ನೆನಪಿಲ್ಲ.
ಹೋಯಿತು ಟ್ರೈನಿಂಗ್ ಸಿಗೋದಿಲ್ಲ. ಮತ್ತೆ ಕೆಲಸ ಹುಡುಕಬೇಕು ಎಂದುಕೊಂಡೆ.
ಮನದಲ್ಲಿ ಅದೇ ಆಲೋಚನೆ. ಅಪ್ಪ ರಿಟೈರ್ ಆಗಿ 5 ವರ್ಷಗಳು. ನನಗಿನ್ನೂ ಸರಿಯಾದ ಕೆಲಸವಿಲ್ಲ. ಅಬ್ಬಾ!
Comments
Post a Comment