ಯತಿ ಸ್ವಂತೀ -205
24-07-2018
ಆಗೆಲ್ಲಾ ಕಂಪ್ಯೂಟರ್ ಇರಲಿಲ್ಲ. ನಾನೇ ನಮ್ಮ ಬೆಂಗಳೂರು ಕಂಪೆನಿಯ ಪರಿಚಯ ಪತ್ರವನ್ನು ಟೈಪ್‍ರೈಟರ್‍ನಲ್ಲಿ ಟೈಪ್ ಮಾಡಿಕೊಂಡು ಜೊತೆಗೆ ಪ್ರಾಡಕ್ಟ್ ಕೆಟಲಾಗ್ ಲಗತ್ತಿಸಿ ಭಾವೀ ಗ್ರಾಹಕರಿಗೆ ಕೊಟ್ಟು ಬರುತ್ತಿದ್ದೆ.
ಯಾವುದಾದರೂ ಕಂಪೆನಿಗೆ ಹೋದಾಗ “ನಾನು ಯತಿರಾಜ್, ಜೈಭಾರತ್ ಇಂಡಸ್ಟ್ರೀಸ್ ಕಲ್ಕತ್ತಾದಿಂದ ಬರ್ತಿದ್ದೀನಿ” ಎಂದೊಡನೆ ಒಳಗೆ ಸೇರಿಸುತ್ತಿದ್ದರು. ಆಮೇಲೆ ನಾನು ಕಲ್ಕತ್ತಾ ಕಂಪೆನಿಯ ಬೆಂಗಳೂರು ಪ್ರತಿನಿಧಿ ಎನ್ನುತ್ತಿದ್ದೆ! ಈ ಟ್ರಿಕ್ ಚೆನ್ನಾಗಿ ಕೆಲಸ ಮಾಡಿತು.
ಇಲ್ಲಿದ್ದಾಗಲೇ ನಾನು ಬಿ.ಇ.ಎಮ್.ಎಲ್, ಕೋಲಾರ್ ಗೋಲ್ಡ್ ಫೀಲ್ಡ್ಸ್‍ಗೆ ಹೋಗಲಾರಂಭಿಸಿದೆ.
ಬೆಳಗ್ಗೆ ಬೇಗ ಹೊರಟು ಜಯನಗರದಿಂದ ಬೆಂಗಳೂರು ರೈಲ್ವೇ ಸ್ಟೇಷನ್ ತಲುಪಿ (ಈಗಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ) ಆರು ಹತ್ತಕ್ಕೆ ಹೊರಡುತ್ತಿದ್ದ ಕುಪ್ಪಂ ಪ್ಯಾಸೆಂಜರ್ ಹತ್ತುತ್ತಿದ್ದೆ.
ಕೆ.ಜಿ.ಎಫ್. ರೈಲು ನಿಲ್ದಾಣ ತಲುಪಿ ಅಲ್ಲಿಂದ ನಡೆದು ನನ್ನ ಸಹಪಾಠಿ ಮಿಸ್. ವಿಜಯ ಮನೆಗೆ ಹೋಗುತ್ತಿದ್ದೆ. ಅಲ್ಲಿ ಅವರ ಮನೆಯವರೆಲ್ಲಾ ಆದರಿಸುತ್ತಿದ್ದರು. ವಿಜಯ ನನ್ನ ಐದು ವರ್ಷಗಳ ಇಂಜಿನಿಯರಿಂಗ್ ಸಹಪಾಠಿ. ನನ್ನ ದೊಡ್ಡ ತಂಗಿಗೂ, ವಿಜಯಾಗೂ ಒಂದಿಷ್ಟು ಗೆಳೆತನ ಬೆಳೆದಿತ್ತು.
ವಿಜಯ ಕೆ.ಇ.ಬಿ.ಗೆ ಅಪ್ಲೈ ಮಾಡಿದ್ದರೆಂದು ನೆನಪು.
ವಿಜಯಾ ಮನೆಯಲ್ಲಿ ಆಕೆಯ ಅಮ್ಮ ಮಾಡಿದ ರುಚಿಯಾದ ತಿಂಡಿ ತಿಂದು (ಒಂದು ವರ್ಷದಲ್ಲಿ ಅನೇಕ ಸಲ ಹೋಗಿದ್ದೇನೆ) ನಂತರ ಅಲ್ಲಿಂದ ಬಸ್ ಹಿಡಿದು ಬಿ.ಇ.ಎಂ.ಎಲ್. ಫ್ಯಾಕ್ಟರಿಗೆ ಬರುತ್ತಿದ್ದೆ. ಅಲ್ಲಿ ಕೆಲಸ ಮುಗಿಸಿ ಮಧ್ಯಾಹ್ನ ಮತ್ತೆ ಕುಪ್ಪಂ ಪ್ಯಾಸೆಂಜರ್ ಬೆಂಗಳೂರಿಗೆ ಹಿಡಿಯುತ್ತಿದ್ದೆ.
ಅಮ್ಮ ನನಗೆ ಚಪಾತಿ ಮಾಡಿ ಕೊಟ್ಟಿರುತ್ತಿದ್ದರು. ಎರಡು ಚಪಾತಿಗಳ ನಡುವೆ ಒಂದಿಷ್ಟು ತುಪ್ಪ ಸವರಿ, ಸಕ್ಕರೆ ಉದುರಿಸಿ ಅವನ್ನು ಸುರುಳಿ ಸುತ್ತಿ ಪೇಪರ್‍ನಲ್ಲಿ ಸುತ್ತಿ ಕೊಡುತ್ತಿದ್ದರು. ಜೊತೆಗೆ ನಾನು ಪಾರ್ಲೆ ಗ್ಲುಕೋ (ಈಗಿನ ಪಾರ್ಲೆ ಜಿ) ಬಿಸ್ಕೆಟ್ ಪ್ಯಾಕೆಟ್ ಕೊಂಡು, ಅವನ್ನೇ ನನ್ನ ಊಟವಾಗಿ ಬಳಸುತ್ತಿದ್ದೆ.
ರಾತ್ರಿ ಬೆಂಗಳೂರು ಸೇರಿ ಮನೆ ತಲುಪಿ ಮನೆಯಲ್ಲಿ ರಾತ್ರಿ ಊಟ.
ಇದಲ್ಲದೇ ನಾನು ತ್ರಿವೆಂದ್ರಮ್ (ತಿರುವನಂಧಪುರಂ)ಗೆ ಅನೇಕ ಸಲ ಹೋಗಿದ್ದೇನೆ. ರೈಲು ಹತ್ತಿ ತ್ರಿವೇಂದ್ರಂ ತಲುಪಿ ಅಲ್ಲಿನ ಥುಂಬಾ ರಾಕೆಟ್ ಸ್ಟೇಷನ್ (ಇಸ್ರೋ)ನಲ್ಲಿ ನಮ್ಮ ಕಂಪೆನಿಯ ಉತ್ಪನ್ನಗಳ ಬಗ್ಗೆ ವಿವರಿಸುತ್ತಿದ್ದೆ. ಆರ್ಡರ್‍ಗಾಗಿ ಫಾಲೋ ಅಪ್ ಮಾಡಲು ಹೋಗುತ್ತಿದ್ದೆ.
ಮತ್ತೊಂದು ಜಾಗ ಬಹಳ ವಿಶಿಷ್ಟವಾದದ್ದು. ಎಸ್ ಹೆಚ್ ಎ ಆರ್ ಸೆಂಟರ್ (ಇದೂ ಇಸ್ರೋ). ಇದು ಸೂಳ್ಳೂರ್ ಪೇಟ ಎನ್ನೋ ಆಂಧ್ರಪ್ರದೇಶದ ಊರು. ಆದರೆ ಚೆನ್ನೈಗೆ (ಆಗ ಮದ್ರಾಸ್) ಬಹಳ ಹತ್ತಿರದ ಊರು.
ಊರು ತಲುಪಿ ಅಲ್ಲಿಂದ ಇಸ್ರೋ ಅವರ ಗಾಡಿಗಳಲ್ಲಿ ಹೋಗಬೇಕು. ಕೆಲವು ಆಫೀಸುಗಳು ಬಂಗಾಳ ಕೊಲ್ಲಿಯ ಮಧ್ಯೆ ಇದ್ದವು.
ಇವೆಲ್ಲಾ ಶತ್ರುದೇಶವರ ಕಣ್ಣಿಗೆ ಮಣ್ಣೆರೆಚಲು ಎನ್ನುತ್ತಿದ್ದರು. ಈಗ ಸ್ಯಾಟಲೈಟ್‍ಗಳು ಎಲ್ಲವನ್ನೂ ಬತ್ತಲು ಮಾಡುತ್ತವೆ.
Comments
Post a Comment