ಯತಿ ಸ್ವಂತೀ -203
೨೨-೦೭-೨೦೧೮
ಬಾಂಬೆಯಲ್ಲಿ ಒಂದು ದಿನವಿದ್ದು ನಂತರ ರಾತ್ರಿ ಸಿಕಂದರಾಬಾದ್‍ಗೆ ರೈಲು ಹಿಡಿದೆವು.
ಸಿಕಂದರಾಬಾದ್‍ನಲ್ಲಿ ನಮಗೆ ನೋಡಲು ಅನೇಕ ಸ್ಥಳಗಳಿದ್ದವು. ಬಿರ್ಲಾ ಮಂದಿರ್‍ಗೆ ಹೋದೆವು. ಬೆಟ್ಟದ ಮೇಲಿನ ವೇಂಕಟೇಶ್ವರ. ಸಾಲಾರ್‍ಜಂಗ್ ಮ್ಯೂಸಿಯಂ ನೋಡಿದೆವು.
ಎಂತಹ ಅದ್ಭುತ ಸಂಗ್ರಹ ಅನೇಕಾನೇಕ ವಸ್ತುಗಳದ್ದು.
ಒಂದು ಗಡಿಯಾರ, ಅಮೃತಶಿಲೆಯ ಪುರುಷ ಮತ್ತು ಸ್ತ್ರೀ ಬೆನ್ನು ಬೆನ್ನಿಗೆ ಅಂಟಿಕೊಂಡಿದ್ದ ವಿಗ್ರಹ ಇಂದಿಗೂ ನೆನಪಿದೆ.
ಇಲ್ಲಿ ಬಾಲಚಂದ್ರನಿಗೆ ಆರೋಗ್ಯ ಕಮ್ಮಿಯಾಯಿತು.
ಅವನನ್ನು ನೋಡಿಕೊಳ್ಳಲು ಕಲ್ಪನಾ ನಿಂತಳು.
ಬಾಂಬೆಯಲ್ಲಿ ಆರೋಗ್ಯ ತಪ್ಪಿದ್ದ ಬಾಲಕೃಷ್ಣನ ಗೊಣಗೊಣ ಕೇಳಿಸಿತ್ತು. ‘ಛೇ, ನಂಗೆ ಉಷಾರಿಲ್ಲ ಅಂದ್ರೆ ನನ್ನ ನೋಡ್ಕೊಳ್ಳೋಕ್ಕೆ ಯತಿ, ಪ್ರಸನ್ನ. ಬಾಲಚಂದ್ರನಿಗೆ ಹುಡುಗೀನಾ ಅಂತ.
ಎಲ್ಲರೂ ನಕ್ಕೆವು. ಬಹಳವೇ ಕಾಮಿಕಲ್ ಮಾತುಗಳನ್ನು ಆಡುತ್ತಿದ್ದ ಬಾಲಕೃಷ್ಣ. ಅವನು ಕೂಡ ಐದನೇ ವರ್ಷಕ್ಕೆ ಹಾಸನದಿಂದ ನಮ್ಮ ಕಾಲೇಜಿಗೆ ಬಂದವನು.
ಬೆಂಗಳೂರಿನಲ್ಲಿ ಸ್ವಾಗತ್ ಥಿಯೇಟರ್‍ನಲ್ಲಿ ಜಾನ್ವರ್ ಎಂಬ ಶಮ್ಮಿಕಪೂರ್ ಸಿನಿಮಾಗೆ ಹೋದೆವು. ಅದರಲ್ಲಿ ಮೆರಿ ಮೊಹಬ್ಬತ್ ಜವಾ ರಹೀಹೈ ಎನ್ನುವ ರಫಿ ಹಾಡನ್ನು ನೋಡಿ, ‘ಏ ಖುಫ್ರಿ!’ ಎಂದು ಎಲ್ಲರೂ ಕಂಡುಹಿಡಿದೆವು.
ಟೂರ್‍ನಲ್ಲಿ ಕೂಡ ಶಿಮ್ಲಾದಲ್ಲಿ ರಾಜೇಶ್‍ಖನ್ನಾ, ರೇಖಾ, ಮೌಸಮಿ ಅಭಿನಯದ ಪ್ರೇಂ ಬಂಧನ್ ನೋಡಿದ ನೆನಪು. ಚಂಡೀಗಢದಲ್ಲಿ ಸ್ವರ್ಗ್ ನರಕ್ ನೋಡಿದ ಜ್ಞಾಪಕ.
ಕಾಲೇಜಿಗೆ ಮರಳಿದಾಗ ಮೇಷ್ಟರುಗಳಿಗೆ ಮಹಾ ಸಿಟ್ಟು.
ಕೊನೆಯ ಸೆಮೆಸ್ಟರ್ ಕ್ಲಾಸಿಗೆ ಬರದೇ ಹಾಯಾಗಿ ಆಲ್‍ಇಂಡಿಯಾ ಟೂರ್‍ನಲ್ಲಿ ಮುಳುಗಿದೆವೆಂದು ಕೋಪ.
ರಾಘವೇಂದ್ರರಾವ್ ಅನ್ನೋ ಮೇಷ್ಟರು ತರಗತಿಗಳನ್ನು ಬಾಯ್ಕಾಟ್ ಕೂಡ ಮಾಡಿದ್ದರು.
ಆದರೆ ಕೊನೆಗೆ ತರಗತಿಗಳು ಶುರುವಾದವು.
ನನ್ನ ಬದುಕಿನಲ್ಲಿ ಕೆಲವು ಬದಲಾವಣೆಗಳಾದವು. ನನ್ನ ಸೋದರ ಮಾವನ ಮನೆಯಿಂದ ನಾನು ನನ್ನ ಗೆಳೆಯನ ಮನೆಗೆ ಹೋಗಿ ಸೇರಿಕೊಂಡೆ.
ಆಮೇಲೆ ಪ್ರಾಜೆಕ್ಟ್ ವರ್ಕ್‍ಗಾಗಿ ಮೈಸೂರಿನ ಆಗಿನ ಸರಹದ್ದಿನಲ್ಲಿದ್ದ ಮೂರ್ನಾಲ್ಕು ಹಳ್ಳಿಗಳಿಗೆ ಹೋಗಿ ಅಲ್ಲಿ ಹತ್ತನೇ ತರಗತಿ ಪಾಸು ಮಾಡಿದ್ದ ಕೆಲವು ಯುವಕರಿಗೆ ಎಲೆಕ್ಟ್ರಿಕಲ್ ಕಂಟ್ರಾಕ್ಟರ್ ಕೆಲಸ ಕಲಿಸಿ, ಲೈಸೆನ್ಸ್ ಕೊಡಿಸುವ ಪ್ರಾಜೆಕ್ಟ್.
ನನ್ನ ಗೆಳೆಯನ ಮನೆಯಲ್ಲಿ ಬಹಳವೇ ಚೆನ್ನಾಗಿತ್ತು. ತುಂಬಾ ಚೆನ್ನಾಗಿ ಆದರಿಸಿದರು.
ನೋಡುತ್ತಾ ನೋಡುತ್ತಾ ಪರೀಕ್ಷೆ ಬಂದಿತು.
ರಿಸಲ್ಟ್‍ಗಾಗಿ ಕಾಯುವಾಗ ನನ್ನ ದೊಡ್ಡ ತಂಗಿ ಅವಳ ಬಿ.ಎಸ್ಸಿ. ಡಿಗ್ರೀ ಮುಗಿಸಿ ಮೈಸೂರಿಗೆ ಬಂದಳು. ಈಗ ನಾನು ನನ್ನ ವಾಸ್ತವ್ಯವನ್ನು ನನ್ನ ದೊಡ್ಡಮ್ಮನ ಮನೆಗೆ ಬದಲಾಯಿಸಿದ್ದೆ.
ಅವರು ನಮ್ಮ ಅಮ್ಮನ ಕಸಿನ್. ಆದರೆ ಒಡಹುಟ್ಟಿದವರಿಗಿಂತ ಹೆಚ್ಚಿನ ಅನುಬಂಧ. ಇವರು ತುಲಸೀ ರಾಮಾಯಣವನ್ನು ತುಳಸೀದಾಸನ ಶೈಲಿಯಲ್ಲೇ ಚೌಪಾಯಿಯಲ್ಲಿ ಕನ್ನಡಕ್ಕೆ ತರ್ಜುಮೆ ಮಾಡಿದ್ದಾರೆ. ಮಾನಸ ಹಂಸ ಎನ್ನುವ ಈ ಬೃಹತ್ ಗ್ರಂಥ ಬಹಳವೇ ಚೆನ್ನಾಗಿದೆ. ಅದಲ್ಲದೇ ಸೂರ್‍ದಾಸನ ಪದ್ಯಗಳು, ರಾಮಾನುಜ ನಾಟಕ ಬರೆದಿದ್ದಾರೆ.
ಇವರ ಸೂರ್‍ದಾಸ್ ಪದ್ಯಗಳು ನನ್ನ ಬಾಳಿನಲ್ಲಿ ಆರೇಳು ವರ್ಷಗಳ ನಂತರ ಪ್ರಾಮುಖ್ಯತೆ ಪಡೆದವು.
Comments
Post a Comment