ಯತಿ ಸ್ವಂತೀ -202
21-07-2018
ಆಗ್ರಾದ ರೈಲ್ವೇ ಸ್ಟೇಷನ್ನಿನಲ್ಲಿ ಒಂದು ದೊಡ್ಡ ಕ್ಯೂ. ಅಲ್ಲಿನ ಟಾಯ್ಲೆಟ್‍ಗಳ ಮುಂದೆ. ನಮ್ಮ ಇಡೀ ತಂಡದ ಬಹುತೇಕ ಸದಸ್ಯರದು!
ಅದಕ್ಕೆ ಕಾರಣ ಉಂಟು. ತಾಜ್‍ಮಹಲ್ ನೋಡಿ, ಸಂಜೆ ಯಾವುದೋ ಒಂದು ಹೊಟೇಲ್‍ಗೆ ಹೋದೆವು. ಅಲ್ಲಿ ಅನ್ನ ಕಂಡು ಎಂತಹ ಖುಷಿ ಆಯಿತೆಂದರೆ ಎಲ್ಲರೂ ತಿಂದಿದ್ದೂ ತಿಂದಿದ್ದೇ!
ಬಹುಶಃ ಅಷ್ಟೊಂದು ಜನ ಒಟ್ಟಿಗೆ ಅನ್ನ ಕೇಳುವವರು ಇಷ್ಟು ದಿನ ಆ ಹೊಟೇಲ್‍ಗೆ ಬಂದೇ ಇರಲಿಲ್ಲವೇನೋ!
ತಾಂಬಾಣದಲ್ಲಿ ತಂದು ಅಕ್ಷರಶಃ ಅನ್ನವನ್ನು ನಮ್ಮ ತಟ್ಟೆಗಳಿಗೆ ತಳ್ಳುತ್ತಿದ್ದರು ಮಾಣಿಗಳು. ಅರೆ ಬೆಂದ ಅನ್ನವೋ ಏನೋ... ತಿನ್ನುವಾಗ ನಮಗೆ ತಿಳಿಯಲಿಲ್ಲ.
ನಂತರ ಹೊಟ್ಟೆನೋವು. ರೈಲ್ವೇ ಸ್ಟೇಷನ್ನಿನ ಟಾಯ್ಲೆಟ್‍ಗಳ ಮುಂದೆ ಕ್ಯೂನಲ್ಲಿದ್ದೆವು.
ರಾತ್ರಿ ಆಗ್ರಾ ಬಿಟ್ಟು ಬೆಳಗ್ಗೆ ಭೋಪಾಲಕ್ಕೆ ಬಂದೆವು. ಈ ಊರಿಗೆ ನಂತರ ಒಂದೆರಡು ಸಲ ಹೋದ ನೆನಪಿದೆ.
ಸುಂದರವಾದ ಲೆಯ್ಡ್‍ಬ್ಯಾಕ್ ಸಿಟಿ. ಮಧ್ಯಪ್ರದೇಶದ ರಾಜಧಾನಿ.
ಅಲ್ಲಿ ನಾವು ಒಂದು ಇಂಡಸ್ಟ್ರೀ ವ್ಹಿಜಿಟ್ ಮಾಡಿದೆವು. ಬಿ.ಎಚ್.ಇ.ಎಲ್‍ನಲ್ಲಿ ದೊಡ್ಡ ದೊಡ್ಡ ಜನರೇಟರ್‍ಗಳ ತಯಾರಿಕೆಯನ್ನು ನಾನಾ ಹಂತಗಳಲ್ಲಿ ಕಂಡೆವು.
ಇಲ್ಲಿ ತಯಾರಿಸಲ್ಪಟ್ಟ ಎರಡು ಜನರೇಟರುಗಳು ನಮ್ಮ ಶರಾವತಿಯ ಆನೆಬೈಲು ಸೈಟ್‍ನಲ್ಲಿ ಇದ್ದದ್ದು ನೆನಪಾಯಿತು.
ಬಿ.ಎಚ್.ಇ.ಎಲ್ ಬಿಟ್ಟರೆ ಆ ಊರಲ್ಲಿ ಇದ್ದ ಒಂದು ಕೆರೆಯನ್ನು ನೋಡಿದ ನೆನಪು.
ರಾತ್ರಿ ಅಲ್ಲಿಂದ ರೈಲು ಹಿಡಿದು ಅಮ್ಚೀ ಮುಂಬೈಗೆ ಬಂದೆವು!
ಬಾಂಬೆ, ಮುಂಬೈ... ವಾಹ್! ಎಂತಹ ಮಾಯಾನಗರಿ ಇದು!
ಇಲ್ಲಿ ಹಣ ಖರ್ಚಾದರೆ ಒಂದಿಷ್ಟೂ ತಿಳಿಯುವುದಿಲ್ಲ. ಎಲ್ಲವೂ ಸರಸರ ಓಡಾಡುತ್ತವೆ. ಲಾಡ್ಜ್ ಒಂದರಲ್ಲಿ ಇಳಿದುಕೊಂಡೆವು.
ಬಾಲಕೃಷ್ಣನಿಗೆ ಹುಷಾರು ತಪ್ಪಿತು.
ಇದಕ್ಕೆ ಮುಂಚೆ ನಮ್ಮ ಜ್ಯೂನಿಯರ್ ಒಬ್ಬಳು ನಮ್ಮೊಂದಿಗೆ ನಡುವಿನಲ್ಲಿ ಸೇರಿಕೊಂಡಳು. ಅವಳ ಹೆಸರು ಕಲ್ಪನಾ. ಅವಳ ತಾಯಿ ಕನ್ನಡದಲ್ಲಿ ಕೆಲವು ಕಾದಂಬರಿಗಳನ್ನು ಬರೆದಿರುವವರು.
ಆದರೆ ಅವಳು ಬೆಳೆದಿದ್ದು ಮುಂಬೈನಲ್ಲಿ. ಕನ್ನಡ ಗೊತ್ತಿರಲಿಲ್ಲ.
ಅವಳು ನಮ್ಮೊಂದಿಗೆ ಪ್ರಯಾಣ ಮಾಡುವಾಗ ಅಂತ್ಯಾಕ್ಷರಿ ಆಡುತ್ತಿದ್ದೆವು ರೈಲಿನಲ್ಲಿ. ಕ ಅಕ್ಷರ ಬಂದಾಗ ನಾನು, ಪ್ರಸನ್ನ ಕಲ್ಪನಾ ರೂಪರಾಸಿ, ಬಂದಿಹೆ ನಿನ್ನ ಬಯಸಿ ಎಂದು ಒಟ್ಟಿಗೇ ಆರಂಭಿಸಿದ್ದೆವು. ಆಕೆಗೆ ಕನ್ನಡ ಬರುವುದಿಲ್ಲವಲ್ಲಾ ಎನಿಸದಿರಲಿಲ್ಲ ನಮಗೆ!
ಬಾಲಕೃಷ್ಣನಿಗೆ ಜ್ವರ. ಏನು ಮಾಡುವುದೆಂದೇ ತೋಚಲಿಲ್ಲ. ಬೆಳಗ್ಗೆ ಬೆಳಗ್ಗೆ ಯಾವ ಡಾಕ್ಟರ್ ಸಿಕ್ಕಾರು? ಆದರೂ ನಾನು, ಪ್ರಸನ್ನ ಬಾಂಬೆಯ ರಸ್ತೆಗಳಲ್ಲಿ ನಡೆದೆವು. ಮನೆಯೊಂದರ ಮುಂದೆ ಒಂದು ಕಾರು ನಿಂತಿತ್ತು. ಅದರ ಮೇಲೆ ಕೆಂಪು ಬಣ್ಣದ + ಸ್ಟಿಕ್ಕರ್ ಇತ್ತು.
ನಮಗೆ ತಿಳಿದ ಹರುಕುಮುರುಕು ಹಿಂದಿಯಲ್ಲಿ ಆ ಡಾಕ್ಟರನನ್ನು ಕರೆತಂದು ಬಾಲಕೃಷ್ಣನಿಗೆ ಔಷಧಿ ಕೊಡಿಸಿದೆವು.
ತಾರಾಪೋರ್‍ವಾಲಾ ಅಕ್ವೇರಿಯಂ, ಚೌಪಾಟಿ ಬೀಚ್ ನೋಡಿದ ನೆನಪಿದೆ.
ಬಸ್‍ನಲ್ಲಿ ಹೆಂಗಸರ ಪಕ್ಕ ಗಂಡಸರು ಕೂತಿದ್ದು ನೋಡಿ ಬೆರಳು ಕಚ್ಚಿದ್ದೆ. ಆಗಿ ಬೆಂಗಳೂರು ಅಷ್ಟೊಂದು ಪ್ರೋಗ್ರೆಸಿವ್ ಆಗಿರಲಿಲ್ಲ!
Comments
Post a Comment