ಯತಿ ಸ್ವಂತೀ -201



20-07-2018

ಆಲ್ವರ್‍ನಿಂದ ಎರಡು ಗಂಟೆಗಳ ಬಸ್ ಪ್ರಯಾಣ ಜೈಪೂರ್‍ಗೆ. ದಾರಿಯಲ್ಲಿ ಕಂಡ ಒಂದು ದೃಶ್ಯ ಬಲು ಮುದ ಕೊಟ್ಟಿತು. 

ನಮ್ಮೂರಲ್ಲಿ ಹಿಂದೆ ಗುಬ್ಬಿಗಳು, ಈಗ ಕಾಗೆಗಳು, ಪಾರಿವಾಳಗಳು ರಸ್ತೆಯಲ್ಲಿ ಓಡಾಡುವ ಹಾಗೆ, ಹಿಂಡು ಹಿಂಡು ನವಿಲುಗಳನ್ನು ನೋಡಿದ್ದು ಇಂದಿಗೂ ನೆನಪು.

ಕೊನೆಗೂ ಜೈಪೂರ್ ಸೇರಿದೆವು. ಅಲ್ಲಿ ಒಂದು ಕಿತ್ತಳೆ ಬಣ್ಣದ ಕೋಟೆ. ಹೆಸರು ಪಿಂಕ್ ಸಿಟಿ. ಗುಲಾಬಿ ನಗರ. ಆದರೆ ಕಿತ್ತಳೆ/ಕೇಸರಿ ಬಣ್ಣಗಳ ಬೆರಕೆಯ ಬಣ್ಣವನ್ನು ಬಳಿದಿದ್ದರು.

ಬಣ್ಣಬಣ್ಣದ ಲಂಗ, ದಾವಣಿಯ ಹೆಂಗಸರು, ಬಿಳಿಯ ಕಚ್ಚೆ, ಜುಬ್ಬಾ ಧರಿಸಿದ, ಬಣ್ಣಬಣ್ಣದ ಪಗಡಿ ಧರಿಸಿದ ಗಂಡಸರು ಕಂಡರು. ಪಗಡಿ ಎನ್ನುವುದು ಹೆಚ್ಚು ಕಡಿಮೆ ಒಂದು ಪಂಚೆಯಷ್ಟು ದೊಡ್ಡ ಪೇಟ.

ಅಂಬರ್ (ಅಮೇರ್) ಪ್ಯಾಲೇಸ್ ಬೆಟ್ಟದ ಮೇಲಿತ್ತು. ಅದನ್ನು ದರ್ಶಿಸಿದೆವು.

ನಂತರ ಅಲ್ಲೊಂದು ಕಡೆ ತರಕಾರಿ ವರ್ಣಗಳನ್ನು ಬಳಸಿ ಸೀರೆಗಳ ಮೇಲೆ ಪ್ರಿಂಟ್ ಮಾಡುವುದನ್ನು ಕಂಡೆವು. 

ಜೈಪೂರ್‍ನಲ್ಲಿ ಟೈ ಆ್ಯಂಡ್ ಡೈ ಸೀರೆಗಳು ಮಾಡಲ್ಪಡುತ್ತವೆ. ಜಗತ್ಪ್ರಸಿದ್ಧ ಇವು. ಒಂದು ವಿಶಿಷ್ಟ ರೀತಿಯಲ್ಲಿ ಈ ಸೀರೆಗಳನ್ನು ತಯಾರಿಸುತ್ತಾರೆ.

ಬಿಳಿಯ ಸೀರೆಯ ಮೇಲೆ ದಾರ ತೆಗೆದುಕೊಂಡು ಅಲ್ಲಲ್ಲಿ ಸೀರೆಗೆ ಗಂಟುಗಳನ್ನು ಹಾಕುತ್ತಾರೆ. ನಂತರ ಆ ಸೀರೆಯನ್ನು ಬಣ್ಣದಲ್ಲಿ ಅದ್ದುತ್ತಾರೆ. ನಂತರ ಸೀರೆಯನ್ನು ಒಣಗಿಸಿ, ಆ ದಾರಗಳನ್ನು ತೆಗೆದರೆ ಅಲ್ಲೆಲ್ಲಾ ಬಿಳಿ ಬಿಳಿಯ ಚೌಕಗಳು ಉಳಿದುಕೊಳ್ಳುತ್ತವೆ. ಸೀರೆಗಳನ್ನು ರೇಷ್ಮೆ ಮತ್ತು ಹತ್ತಿ ಎರಡೂ ಬಟ್ಟೆಗಳನ್ನು ಉಪಯೋಗಿಸಿ ತಯಾರಿಸುತ್ತಾರೆ.

ನಾನು ಜೈಪೂರ್‍ಗೆ ಮೂರು ಸಲ ಹೋಗಿದ್ದೇನೆ. 1979, 1992 ಮತ್ತು 2011. ವಿದ್ಯಾರ್ಥಿಯಾಗಿ, ಕಿರ್ಲೋಸ್ಕರ್ ಉದ್ಯೋಗಿಯಾಗಿ ಮತ್ತು ಟ್ಯಾಲಿ ಉದ್ಯೋಗಿಯಾಗಿ.

ಜೈಪೂರ್‍ನಿಂದ ರಾತ್ರಿ ಹೊರಟು ಮರುದಿನ ಬೆಳಗ್ಗೆ ಆಗ್ರಾ ತಲುಪಿದೆವು.

ಆಗ್ರಾ... ಷಹಾಜಹಾನ್ ತನ್ನ ಪ್ರೇಯಸಿ/ಪತ್ನಿ ಮುಮ್ತಾಜ್ ಮಹಲ್‍ಗೆ ಕಟ್ಟಿಸಿರುವ ಸಮಾಧಿಯ, ಪ್ರಪಂಚದ ಒಂದು ಅದ್ಭುತವಾದ ತಾಜ್ ಮಹಲ್ ಇರುವ ನಗರ.

ಮೊದಲು ಆಗ್ರಾದ ಕೋಟೆಗೆ ಹೋದೆವು. ದೆಹಲಿಯ ಕೋಟೆಯಂತೆಯೇ ಅನೇಕ ಕಟ್ಟಡಗಳಿರುವ ಜಾಗ. ಯಮುನಾ ನದಿ ದಡದಲ್ಲಿದೆ ಈ ಕೋಟೆ.

ಆಗ್ರಾದ ಕೋಟೆಯ ಒಂದು ಕಿಟಕಿಯಿಂದ ನೋಡಿದರೆ ನಮಗೆ ತಾಜ್‍ಮಹಲ್ ಕಾಣುತ್ತದೆ. ಷಹಾಜಹಾನ್‍ನನ್ನು ಅವನ ಮಗ ಔರಂಗಜೇಬ ಬಂಧಿಸಿ ಆಗ್ರಾದ ಕೋಟೆಯಲ್ಲಿ ಸೆರೆಯಲ್ಲಿಟ್ಟಾಗ ಅಲ್ಲಿಂದ ತನ್ನ ಪತ್ನಿಯ ಸಮಾಧಿಯಾದ ತಾಜ್‍ಮಹಲ್‍ನ ನೋಡುತ್ತಿದ್ದನಂತೆ.  

ತಾಜ್‍ಮಹಲ್‍ಗೆ ಹೋದೆವು. ಬೆಳದಿಂಗಳಲ್ಲಿ ನೋಡಿದರೆ ಚೆನ್ನವಂತೆ. ಅದೂ ಪ್ರೇಮಿಯೊಂದಿಗೆ ಬಂದು!

ವಿಪರೀತ ದೊಡ್ಡ ವ್ಯಾಸದ ಒಂದು ಹಾಲ್. ಕೆಳಗೆ ಮಧ್ಯದಲ್ಲಿ ಮುಮ್ತಾಜ್ ಸಮಾಧಿ, ಸ್ವಲ್ಪ ಪಕ್ಕವಾಗಿ ಷಹಾಜಹಾನ್ ಸಮಾಧಿ.

ಗೋಡೆಗಳ ಮೇಲೆಲ್ಲಾ ಗುಲಾಬಿಯ ಹೂಗಳ ಉಬ್ಬು ಚಿತ್ರಕಲೆ.

ಎಂತಹ ಸುಂದರ ನೋಟ. ವಿಶೇಷವಾಗಿ ಅದಕ್ಕೆ ಕಟ್ಟಿರುವ ಕೋಟೆ ಬಾಗಿಲ ಬಳಿ ನಿಂತರೆ ತಾಜ್‍ಮಹಲ್ ಚೆಂದ ಕಾಣುತ್ತದೆ.

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102