ಯತಿ ಸ್ವಂತೀ -200



19-07-2018

ಡೆಹ್ರಾಡೂನ್‍ಗೆ ಬಂದವರು ತೀರ್ಥಯಾತ್ರೆ ಮಾಡಿದೆವು ಎಂದರೆ ಅಚ್ಚರಿಯಾಗುತ್ತದೆ. ಡೆಹ್ರಾಡೂನ್ ಹತ್ತಿರ ಇದ್ದ ಮಸ್ಸೂರಿಗೆ ನಾವು ಹೋಗಲೇ ಇಲ್ಲ!

ಬೆಳಗ್ಗೆ ಬಸ್ ಹಿಡಿದು ಹರಿದ್ವಾರಕ್ಕೆ ಹೋದೆವು. ಹೃಷೀಕೇಶಕ್ಕೆ ಹೋದೆವು. ಲಚ್‍ಮನ್ ಝೂಲಾ ಮೇಲೆ ನಡೆದೆವು.

ಗಂಗಾ ನದಿಯು ಇಲ್ಲಿ ಮೋಟರ್ ಬೋಟಿನಂತೆ ವೇಗವಾಗಿ ಹರಿಯುತ್ತದೆ. ನೀರಿಗೆ ಇಳಿಯಲು ಸಾಧ್ಯವೇ ಇಲ್ಲ. ಅದಕ್ಕೇ ದಂಡೆಯಲ್ಲಿ ಸರಪಳಿಗಳನ್ನು ಒಂದು ಕಡೆ ಕಟ್ಟಿದ್ದಾರೆ. ಅದನ್ನು ಹಿಡಿದು ನೀರಿಗಿಳಿದು ಒಂದು ಮುಳುಗು ಹಾಕಬಹುದು ಅಷ್ಟೇ.

ನಮ್ಮ ಹುಡುಗರಂತೂ ಜಲದಲ್ಲಿ ಜಳಕ ಮಾಡುತ್ತಿರುವ ‘ಜನ’ರನ್ನು ಕಂಡು ಕಣ್ತುಂಬಿಕೊಂಡರು!

ನಂತರ ಅಲ್ಲಿಯೇ ಇದ್ದ ಯೋಗಾ ಸೆಂಟರ್‍ಗೆ ಹೋದೆವು. ಹೋಗುವ ಮುನ್ನ ಸುಮಾರು ನೂರು ರೂಪಾಯಿಗಳಿಗೆ ಐದು ಪೈಸೆಗಳನ್ನು ಪಡೆದ ನೆನಪು. ಆ ಯೋಗಾ ಸೆಂಟರ್‍ನಲ್ಲಿ ನಾಲ್ಕೈದು ಮಹಡಿಗಳು. ಒಂದೊಂದು ಮಹಡಿಯಲ್ಲಿ ಅನೇಕಾನೇಕ ದೇವರ ವಿಗ್ರಹಗಳು. ಎಲ್ಲದರ ಮುಂದೆಯೂ ಹಣವನ್ನು ಇಡುತ್ತಾ ಹೋದೆವು.

ಬಸ್ ಹಿಡಿದು ಮರಳುವಾಗ ಬಸ್‍ಕೋ ಖಡೋ ಖಡೋ ಎಂದು ನಮಗೆ ತಿಳಿದ ಹಿಂದಿಯಲ್ಲಿ ಕಿರುಚಿಕೊಂಡೆವು. ಎಲ್ಲರಿಗೂ ಮೂತ್ರಕ್ಕೆ ಅವಸರವಾಗಿತ್ತು.

ಅಲ್ಲಿ ಹೋಗಿ ನಮ್ಮನ್ನು ನಾವು ರಿಲೀವ್ ಮಾಡಿಕೊಂಡಾಗ ಸುತ್ತಲೂ ಇದ್ದ ದಟ್ಟವಾದ ಮರಗಳನ್ನು ಕಂಡು ಬಾಲು, “ಈಗ ಗೊತ್ತಾಯ್ತು ಇಲ್ಲಿ ಯಾಕೆ ಇಷ್ಟೊಂದು ಮರ ಇದೆ ಅಂತ” ಎಂದು ಎಲ್ಲರನ್ನೂ ನಗಿಸಿದ.

ಮುಂದಿನ ಊರು ದೆಹಲಿ. ಬಸ್ ಪ್ರಯಾಣ ಮಾಡಿ ದೆಹಲಿ ತಲುಪಿದೆವು.

ಅಲ್ಲಿ ನೋಡಲು ಬಹಳವೇ ಚಾರಿತ್ರಿಕ ಜಾಗಗಳಿವೆ. ಹುಮಾಯೂನನ ಸಮಾಧಿ, ಕುತುಬ್ ಮಿನಾರ್, ಜಂತರ್ ಮಂತರ್, ಕೆಂಪು ಕೋಟೆ ಇತ್ಯಾದಿ.

ಕೆಂಪು ಕೋಟೆ ಒಳಗೆ ದಿವಾನಿ ಖಾಸ್, ದಿವಾನಿ ಆಲಮ್ ಇತ್ಯಾದಿಗಳಿವೆ. ಅಲ್ಲಿ ನಾವು ಒಂದು ಲೈಟ್ ಆಂಡ್ ಸೌಂಡ್ ಷೋ (ಸೋನೆಟ್ ಲುಮಿಯೆರ್) ನೋಡಿದೆವು. ಮುಘಲರ ಸಮಯದಿಂದ ಭಾರತದ ಸ್ವಾತಂತ್ರ್ಯದ ವರೆಗಿನ ಕಥೆಯನ್ನು ಕೇವಲ ಶಬ್ದ ಮತ್ತು ಬೆಳಕು ಬಳಸಿ ತೋರಿಸುತ್ತಾರೆ. ಇದು ಈಗ ಶ್ರೀರಂಗಪಟ್ಟಣದಲ್ಲೂ, ಹೈದರಾಬಾದ್‍ನ ಗೋಲ್ಕೊಂಡಾ ಕೋಟೆಯಲ್ಲೂ ಇದೆ. ಆಯಾ ಜಾಗದ ಚರಿತ್ರೆ ಹೇಳುವ ವೈಖರಿ ಬಲು ಚೆನ್ನ.

ದೆಹಲಿಯಲ್ಲಿ ನಮಗೆ ಇಷ್ಟವಾಗಿದ್ದು ಷಾಪಿಂಗ್. ಅಜ್‍ಮಲ್ ಖಾನ್ ರೋಡ್‍ನಲ್ಲಿ ಷಾಪಿಂಗ್ ಮಾಡಿದೆವು. ಈಗ ಪಾಲಿಕಾ ಬಝಾರ್ ಕೂಡ ಇದೆ.

ದೆಹಲಿಯ ನಂತರ ನಮ್ಮ ಗುರಿ ಜೈಪೂರ್. 

ಪಿಂಕ್ ಸಿಟಿ ಎಕ್ಸ್‍ಪ್ರೆಸ್‍ನಲ್ಲಿ ಬುಕ್ ಮಾಡಿಸಿದ್ದೆವು. ಅದು ಭಾರತದ ಅತ್ಯಂತ ವೇಗದ ಮೀಟರ್‍ಗೇಜ್ ರೈಲುಗಾಡಿ.

ಅದು ಕೇವಲ ನಾಲ್ಕು ಗಂಟೆಗಳ ಕಾಲದಲ್ಲಿ ಜೈಪೂರ್ ತಲುಪುತ್ತದೆ ಎಂದುಕೊಂಡು ಖುಷಿಯಾಗಿ ಹೋಗುತ್ತಿದ್ದೆವು.

ನಾವು ರಿಜರ್ವೇಷನ್ ಎರಡು ಬ್ಯಾಚ್‍ನಲ್ಲಿ ಮಾಡಿಸಿದ್ದೆವು. ಅದರಲ್ಲಿ ಒಂದು ಕನ್‍ಫರ್ಮ್ ಆಗಿತ್ತು. ಇನ್ನೊಂದು ಇನ್ನೂ ಆಗಿರಲಿಲ್ಲ.

ಆಲ್ವರ್ ಅನ್ನೋ ಸ್ಟೇಷನ್ ಬಂದಾಗ ರಿಜರ್ವೇಶನ್ ಇಲ್ಲದೇ ಗಾಡಿಯಲ್ಲಿದ್ದೇವೆಂದು ನಮ್ಮಲ್ಲಿ ಮೊದಲ ಬ್ಯಾಚಿನವರನ್ನು ಕೆಳಕ್ಕೆ ಇಳಿಸಿಯೇ ಬಿಟ್ಟ ಟಿಟಿಇ.

ರೈಲು ನಮ್ಮನ್ನು ಬಿಟ್ಟು ಹೊರಟೇ ಹೋಯಿತು.

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102