ಯತಿ ಸ್ವಂತೀ -199
18-07-2018
ಈವತ್ತು ಆ ಬಸ್ ಪ್ರಯಾಣ ನೆನೆದರೂ ನಗು ಬರುತ್ತದೆ. ಕುಳ್ಳು ಬಸ್ಸು. ನನ್ನ ತಲೆಕೂದಲು ಬಸ್‍ನ ಛಾವಣಿಗೆ ತಾಕುತ್ತಿತ್ತೆಂದರೆ ಅದು ಎಷ್ಟು ಎತ್ತರ ಇರಬಹುದು ಊಹಿಸಿಕೊಳ್ಳಿ.
ನಮ್ಮೆಲ್ಲ ಗೆಳೆಯ, ಗೆಳತಿಯರಿಗೆ (ಸಹಪಾಠಿಗಳು!) ಎಲ್ಲರಿಗೂ ಸೀಟು ಸಿಕ್ಕಿತು. ನನಗೂ ನಮ್ಮ ಟೂರ್ ಸೆಕ್ರೆಟರಿ ಶಂಕರನಿಗೂ ಸೀಟು ಸಿಗಲಿಲ್ಲ. ನನ್ನದೊಂದು ಉದ್ದನೆಯ ಕೋಟು ನನ್ನ ಸಹಪಾಠಿ, ಗೆಳೆಯ ಅನಂತಶಯನನಿಂದ ಬಾಡಿಗೆಗೆ ಪಡೆದಿದ್ದೆ. ಅದು ಇಡೀ ಟೂರ್‍ನ ಛಳಿ ಪ್ರದೇಶಗಳಲಿ ್ಲನನಗೆ ವಜ್ರಕವಚದಂತೆ ಇತ್ತು!
ಅದನ್ನು ಧರಿಸಿದ್ದೆ. ಜೇಬಿನ ತುಂಬಾ ಬಸ್ ಟಿಕೆಟ್‍ಗಳು. ಆ ನಿರ್ವಾಹಕ ಒಬ್ಬೊಬ್ಬರಿಗೆ 3 ಟಿಕೆಟ್ ಕೊಟ್ಟಿದ್ದ. ಸುಮಾರು 120 ಟಿಕೆಟ್‍ಗಳು ನನ್ನ ಜೇಬಿನಲ್ಲಿದ್ದುವು. ಜೊತೆಗೆ ಯಾವುದೋ ಒಂದು ಕೆಟ್ಟ ಡೂಪ್ಲಿಕೇಟ್ ಬಿಸ್ಕೆಟ್ ಪ್ಯಾಕೆಟ್ ಇತ್ತು. ನೀವು ಮೈಸೂರು ಬೆಂಗಳೂರು ನಡುವಿನ ಅಂಗಡಿಗಳಲ್ಲಿ ಬಿಸ್ಕೆಟ್ ಸಿಗುವುದು ಯಾವುದೆಂದು ನೋಡಿ. ಯಾವುದೋ ಜನಪ್ರಿಯ ಹೆಸರಿನ ಬಿಸ್ಕೆಟ್ ಎಂದುಕೊಂಡು ಕೊಳ್ಳುತ್ತೇವೆ. ಅದು ಅದಲ್ಲ. ಅದರ ಹತ್ತಿರದ ಹೆಸರಿನ ನಕಲಿ ಬಿಸ್ಕೆಟ್.
ಒರಿಜಿನಲ್ ಬಿಸ್ಕೆಟ್ ತಿಂದೇ ಅಸ್ವಸ್ಥರಾಗೋ ಅವಕಾಶ ಇರುವಾಗ ಈ ನಕಲಿ ಬಿಸ್ಕತ್ತುಗಳು! ಆದರೆ ಪಾಪಿ ಪೇಟ್ ಕಾ ಸವಾಲ್ ಹೈ.
ಆ ಛಳಿಯಲ್ಲೂ ಅನೇಕರು ಸಿಮ್ಲಾ ಬಸ್‍ಸ್ಟಾಂಡಿನಲ್ಲಿ ಕಿತ್ತಲೆ ಹಣ್ಣು ಕೊಂಡು ತಿಂದರು. ಬಹುಶಃ ನಿಂಬೆಹಣ್ಣಿನಂತೆ ಅದು ಕೂಡ ವಾಂತಿ ಬರದಂತೆ ತಡೆಯಬಹುದೆಂಬ ಆಶೆ ಇರಬಹುದು.
ಬಸ್ ಹೊರಟಿತು. ಅಬ್ಬಾ! ಅದೆಂತಹ ದುರ್ಗಮ ರಸ್ತೆ. ನಾವು ಬಂದ ರಸ್ತೆ ಚಂಡೀಗಢದಿಂದ ಬಂದಿದ್ದು ಇಷ್ಟು ಕಡಿದಾಗಿ ಇರಲಿಲ್ಲ.
ಬಸ್ಸು ಸ್ಕ್ರೂನಂತೆ ಆ ಕಡೆ ಈ ಕಡೆ ತೂಗಾಡುತ್ತಾ ಹೋಯಿತು. ನಮ್ಮ ಸಹಪಾಠಿಗಳು ಒಬ್ಬೊಬ್ಬರೇ ಕಿಟಕಿಯ ಹೊರಗೆ ತಲೆ ಹಾಕಿ ವಾಂತಿ ಮಾಡಿಕೊಳ್ಳತೊಡಗಿದರು.
ನನಗೆ ನಗುವೋ ನಗು.
ಒಬ್ಬ ಹುಡುಗಿ ವಾಂತಿ ಮಾಡಿ ಅಳುತ್ತಿದ್ದಳು. ಯಾಕೆಂದು ತಿಳಿಯದು. ಅವಳ ತಲೆಯ ಮೇಲೆ ತಟ್ಟುತ್ತಿದ್ದ ಉಲ್ಲನ್ ಗ್ಲವ್ಸ್ ಹಾಕಿದ್ದ ನನ್ನ ಗೆಳೆಯ. ಮರುಕ್ಷಣ ಅವನೂ ತನ್ನ ಬಾಯಿಗೆ ತನ್ನ ಕೈ ಅಡ್ಡವಿಟ್ಟುಕೊಂಡು ಕಿಟಕಿಯಿಂದ ತಲೆ ಹೊರಹಾಕಿ ವಾಂತಿ ಮಾಡಿದ.
ಮತ್ತೊಬ್ಬ ಗೆಳೆಯ ಬಾಲು. ‘ಅಯ್ಯೋ, ಎಷ್ಟು ದುಡ್ಡು ವೇಷ್ಟು. ತಿಂದ ಕಿತ್ತಲೆ ಹಣ್ಣೆಲ್ಲಾ ತೊಳೆತೊಳೆಯಾಗಿ ವಾಂತಿಯಾಗಿ ಬಿಡ್ತು’ ಎಂದು ದುಃಖ ಪಟ್ಟು ನನಗೆ ಇನ್ನಷ್ಟು ಖುಷಿ ಕೊಟ್ಟ. ಬಹುಶಃ ನಿಂತಿದ್ದ ನಾನು ಮತ್ತು ಶಂಕರನನ್ನು ಬಿಟ್ಟು ಉಳಿದವರೆಲ್ಲರೂ ವಾಂತಿ ಮಾಡಿದ್ದಿರಬೇಕು ಆ ಬೆಳಗ್ಗೆ.
ನಾಲ್ವರು ಹುಡುಗರು ಬಹಳವೇ ಅಸ್ವಸ್ಥರಾದರು. ಬಸ್ ನಹಾನ್ ಎನ್ನುವ ಸ್ಥಳದಲ್ಲಿ ಊಟಕ್ಕೆ ನಿಂತಾಗ ನಮ್ಮ ಬಸ್ಸಿನಿಂದಿಳಿದು ಭರತ್‍ಭೂಷಣ್ ಶರ್ಮಾ ಮನೆಗೆ, ಅಂಬಾಲಾ ಕಂಟೋನ್ಮೆಂಟ್‍ಗೆ ಹೊರಟುಹೋದರು, ದೆಹಲಿಯಲ್ಲಿ ಮತ್ತೆ ನಮ್ಮನ್ನು ಸೇರಿಕೊಳ್ಳುವೆನೆಂದು ಹೇಳಿ.
Comments
Post a Comment