ಯತಿ ಸ್ವಂತೀ -198


17-07-2018
ಸಿಮ್ಲಾ!
ಇಡೀ ಪ್ರದೇಶದಲ್ಲಿ ಹರಡಿರುವ ಬಿಳಿ ಹಿಮ ನೋಡಿದರೆ ಹುಚ್ಚು ಹಿಡಿಯೋದು ಖಂಡಿತ. ಒಂಥರಾ ಮತ್ತು ಆವರಿಸಿಕೊಂಡಿತು. ನಾನೊಬ್ಬನೇ ಅಲ್ಲ. ನಮ್ಮ ಜೊತೆ ಬಂದ ಅತಿ ಸೀರಿಯಸ್ ವ್ಯಕ್ತಿಗಳು ಕೂಡ ಒಬ್ಬರ ಮೇಲೊಬ್ಬರು ಹಿಮದ ಹುಡಿಯ ಉಂಡೆ ಮಾಡಿ ಎಸೆದಾಡಿದರು!
ಹೊಟೇಲ್ ತಲುಪಿದೊಡನೆ ನಾನು ಮಾಡಿದ ಮೊದಲ ಕೆಲಸ ನಮ್ಮ ಹೊಟೇಲ್ ಕಿಟಕಿಯ ಚಜ್ಜಾ ಹತ್ತಿ ಅದರ ಮೇಲಿದ್ದ ಹಿಮದ ಮೇಲೆ ಕೂತದ್ದು...
ರಾತ್ರಿ ಸುಮಾರು ಏಳೆಂಟು ಜನ ಒಂದು ರಜಾಯಿ ಹೊದ್ದು ಮಲಗಿದರೂ ಕಟಕಟ ಚಳಿ!
ಬೆಳಗ್ಗೆ ನಾನು ಸ್ನಾನ ಮಾಡಲು ಹೋದಾಗ ತಲೆ ಮೇಲೆ ಬಿದ್ದ ಕುದಿಯುವ ನೀರು ಕಾಲುಗಳ ಬಳಿ ಬರುವ ವೇಳೆಗೆ ತಣ್ಣಗೆ ಆಗಿರುತ್ತಿತ್ತು.
ವೈಲ್ಡ್ ಫ್ಲವರ್ ಹಾಲ್ ಹೋದ ನೆನಪು. ನಂತರ ಖುಫ್ರಿಗೆ ಹೋದೆವು. ಸ್ನೋ ಹರಡಿದ್ದ ಬೆಟ್ಟಗಳು ಎಲ್ಲೆಡೆ.
ಕೆಳಗೆ ಬಾಡಿಗೆಗೆ ಮೊಣಕಾಲಿನ ಎತ್ತರದ ಬೂಟುಗಳು ಒಂದು ರೂಪಾಯಿ ಬಾಡಿಗೆಗೆ. ಗಟ್ಟಿಯಾದ ಕೋಲು 50 ಪೈಸೆ ಬಾಡಿಗೆ.
ಇವೆರಡರ ಸಹಾಯದಿಂದ ಮೇಲೆ ಹತ್ತಿದೆವು. ಶಮ್ಮಿ ಕಪೂರ್ ಕೂಗಿದ ಹಾಗೆ ಯಾಹೂ ಎಂದು ಕೂಗುತ್ತಾ ಹಿಮದ ಮೇಲೆ ಕೂತು ಜಾರಿದೆವು. ಅವಿಸ್ಮರಣೀಯ ಅನುಭವ ಅದು.
ಬಸ್ ಸ್ಟ್ಯಾಂಡ್ ತಲುಪಿ ಮರುದಿನ ಡೆಹ್ರಾಡೂನ್‌ಗೆ ಸೀಟು ಬುಕ್ ಮಾಡಿದೆವು.
ಚೌಧರಿ ಚರಣ್ ಸಿಂಗ್ ಮಂಡಿಸಿದ ಬಜೆಟ್ ಆ ದಿನ. 
ಮರುದಿನ ಬೆಳಗ್ಗೆ ಬಸ್ ನಿಲ್ದಾಣಕ್ಕೆ ಬಂದಾಗ  ಎದೆ ಧಸಕ್ ಎಂದಿತು.
ನಮ್ಮ ರಿಸರ್ವೇಶನ್ ಪ್ರಯೋಜನ ಆಗಿರಲಿಲ್ಲ. ಇಡೀ ಸೀಟುಗಳು ತುಂಬಿದ್ದುವು.
ಹೇಳಿ ಕೇಳಿ ಬಿಸಿ ರಕ್ತ. ಕಂಡಕ್ಟರ್ ಜೊತೆಗೆ ಜಗಳ ಆಡಿ ಪುರುಷರನ್ನು ಎಬ್ಬಿಸಿ ನಮ್ಮ ಸಹಪಾಠಿಗಳನ್ನು ಕೂರಿಸಿದೆವು. ಹೆಂಗಸರು ಮಕ್ಕಳು ವೃದ್ಧರನ್ನು ಎಬ್ಬಿಸಲು ಮನಸ್ಸಾಗಲಿಲ್ಲ.
ನಿಂತೇ ಪ್ರಯಾಣ ಮಾಡಿದವರಲ್ಲಿ ನಾನೂ ಒಬ್ಬ.

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102