ಯತಿ ಸ್ವಂತೀ -197
16-07-2018
ಭರತ್‍ಭೂಷಣ್ ಶರ್ಮಾ ಮನೆಯಿಂದ ಬಸ್ ಹಿಡಿದು ಚಂಡೀಗಢಕ್ಕೆ ಬಂದೆವು.
ಅತ್ಯಂತ ಪ್ಲಾನ್ಡ್ ನಗರ ಎಂಬ ಹೆಸರಿರುವ ಈ ನಗರ ನೋಡಲು ಚಂದ.
ದೊಡ್ಡ ರಸ್ತೆಗಳು, ಇಕ್ಕೆಲಗಳಲ್ಲಿ ಉದ್ಯಾನವನಗಳು, ನಂತರ ಸರ್ವೀಸ್ ರಸ್ತೆ. ಅದರಾಚೆಗೆ ಕಟ್ಟಡಗಳು.
ಒಮ್ಮೆ ಬೆಂಗಳೂರಿನ ಕಾಟನ್ ಪೇಟೆ, ಕಿಲಾರಿ ರಸ್ತೆ, ಅಷ್ಟೇ ಯಾಕೆ ಯಾವುದೇ ಬಡಾವಣೆಯ ಒಳಗಿನ ರಸ್ತೆಗಳ ವೈಶಾಲ್ಯವನ್ನು ನೋಡಿದರೆ ಸ್ವಾರ್ಥಿ ಮನುಷ್ಯರ ಮೆದುಳಿನಷ್ಟೇ ಕಿಷ್ಕಿಂದವಾಗಿರುತ್ತವೆ.
ಇಲ್ಲಿ ಆ ತಾಪತ್ರಯವಿಲ್ಲ.
ನಿಜಕ್ಕೂ ಬಹಳವೇ ಸಂತಸ ತರುವ ನಗರ. ಎಲ್ಲವೂ ಸೆಕ್ಟರ್‍ಗಳು. ಎಲ್ಲಿಯೂ ರಸ್ತೆಗಳ ಗಲಿಬಿಲಿಯಿಲ್ಲ.
ಬೆಂಗಳೂರಿನಲ್ಲಿ ಒಂದು ಕಾಲದಲ್ಲಿ ಸಿಐಟಿಬಿ ಅನ್ನೋ ಕಛೇರಿ ಇತ್ತು. ಅವರು ಮನೆಯನ್ನು ಕಟ್ಟಿ ಮುಗಿಸಿದಂತೆ ನಂಬರ್ ಕೊಡುತ್ತಿದ್ದರು.
ಉದಾಹರಣೆಗೆ ಜಯನಗರ 16ನೇ ಮೆಯ್ನ್ (ಟಿ.ಬ್ಲಾಕ್)ನಲ್ಲಿ 153, 153, 164, 172 ಹೀಗೆ ಇವೆ ನಾಲ್ಕು ಮನೆಗಳ ಡೋರ್‍ನಂಬರ್‍ಗಳು. ಆ ಅಂಚೆಯಣ್ಣನಿಗೂ, ಈಗ ಕೊರಿಯರ್‍ನವನಿಗೂ, ಆ ಮನೆಗಳನ್ನು ಹುಡುಕಿಕೊಂಡು ಬರುವ ಜನರಿಗೂ ಎಷ್ಟು ಕಷ್ಟವೋ ಊಹಿಸಿಕೊಳ್ಳಬಹುದು. ಆಗೆಲ್ಲಾ ಮನೆ ಕಟ್ಟಿ ಮುಗಿಸುತ್ತಿದ್ದಂತೆ ನಂಬರ್ ನೀಡುತ್ತಿದ್ದರಂತೆ!
ಜೆಪಿ ನಗರ ಬಹುಶಃ ಮೊಟ್ಟ ಮೊದಲನೆಯ ಸಲ ಸೈಟ್‍ನಂಬರ್‍ಗಳನ್ನು ಕೊಟ್ಟ ಬಡಾವಣೆ ಎಂದು ತೋರುತ್ತದೆ.
ದೆಹಲಿಯ ಮುಖ್ಯ ಮಂತ್ರಿಯೊಬ್ಬರು ಬೆಸ ಸಂಖ್ಯೆ ಸರಿ ಸಂಖ್ಯೆಯ ವಾಹನಗಳನ್ನು ಇಂತಿಂತಹ ದಿನ ಹೊರತೆಗೆಯಬೇಕೆಂದು ಹೇಳಿದ್ದರೆಂದು ಓದಿದ್ದೆ.
ನ್ಯೂಯಾರ್ಕ್ ನಗರದಲ್ಲಿ ರಸ್ತೆಯ ಒಂದು ಬದಿ ಎಲ್ಲ ಬೆಸ ಸಂಖ್ಯೆಗಳ ಮನೆಗಳು, ಇನ್ನೊಂದೆಡೆ ಸರಿ ಸಂಖ್ಯೆಗಳ ಮನೆಗಳು. ಬಹಳ ಸುಲಭವಾಗಿ ಕಂಡುಹಿಡಿಯಬಹುದು ನಮಗೆ ಬೇಕಾದ ಮನೆಗಳನ್ನು.
ಚಂಡೀಗಢಕ್ಕೆ ಮತ್ತೆ ಹೋಗಿದ್ದೆ 2011 ಮತ್ತು 2012ರಲ್ಲಿ. ಅದರ ವಿಷಯ ನಂತರ.
ರೋಜ್ ಗಾರ್ಡನ್ ಎನ್ನುವ ವಿಶಾಲ ಜಾಗದಲ್ಲಿ ತರಹೇವಾರಿ ಗುಲಾಬಿಹೂಗಳು.
ರಾಕ್ ಗಾರ್ಡನ್ ಎನ್ನುವ ಜಾಗವನ್ನು ನೇಕ್‍ಚಂದ್ ಎನ್ನುವಾತ ಸಿದ್ಧಗೊಳಿಸಿದನಂತೆ. ಇಲ್ಲಿ ಒಡೆದ ಪಿಂಗಾಣಿ ಮತ್ತು ಗಾಜಿನ ಸಾಮಾನುಗಳಲ್ಲಿ ಅನೇಕಾನೇಕ ಗೊಂಬೆಗಳನ್ನು ಮಾಡಿಟ್ಟಿದ್ದಾರೆ. (ಒಡೆದ ಬಿಯರ್ ಬಾಟಲ್, ಒಡೆದ ಪಿಂಗಾಣಿ ಕಮೋಡ್ ಇತ್ಯಾದಿ). ಕಸದಿಂದ ರಸ ಎನ್ನುವುದಕ್ಕೆ ಒಳ್ಳೆಯ ಉದಾಹರಣೆ ಈ ರಾಕ್ ಗಾರ್ಡನ್.
ಮರುದಿನ ಬೆಳಗ್ಗೆ ನಾವು ಸಿಮ್ಲಾಗೆ ಹೊರಟೆವು.
ಆಗ ಅದರ ಹೆಸರು ಸಿಮ್ಲಾ. ಈಗ ಶಿಮ್ಲಾ.
ಬಸ್‍ನಲ್ಲಿ ಹೋಗುತ್ತಿದ್ದರೆ ಇದ್ದಕ್ಕಿದ್ದಂತೆ ಬಸ್ ನಿಂತಿತು.
ಮುಂದೆ ಲ್ಯಾಂಡ್‍ಸ್ಲೈಡ್ ಆಗಿತ್ತು. ಅಂದರೆ ಬೆಟ್ಟದಿಂದ ಬಂಡೆಗಳು ಜಾರಿ ಜಾರಿ ರಸ್ತೆಯನ್ನು ಬಂದ್ ಮಾಡಿಬಿಟ್ಟಿದ್ದವು.
ಅವನ್ನು ತೆಗೆದು ನಮಗೆ ದಾರಿ ಮಾಡಿಕೊಡುವವರೆಗೂ ಅಲ್ಲಿಯೇ ಪರದಾಡುತ್ತಾ ಓಡಾಡುತ್ತಿದ್ದೆವು.
ಒಂದಿಷ್ಟು ಸಹಪಾಠಿಗಳೊಂದಿಗೆ ಸಲಿಗೆ ಬೆಳೆಯಿತು ಕೂಡ. ಏಕೆಂದರೆ ಬೇರೆ ಯಾರೂ ಇಲ್ಲವಲ್ಲ ಮಾತಾಡಲು.
ಕೊನೆಗೂ ಹೊರಟ ಬಸ್ಸು ಸಿಮ್ಲಾ ಕಡೆಗೆ ಬಂದಿತು. ಎಲ್ಲೆಲ್ಲೂ ಹಿಮಾಚ್ಛಾದಿತ ಪ್ರದೇಶಗಳು. ಅಬ್ಬಾ!
Comments
Post a Comment