ಯತಿ ಸ್ವಂತೀ -196



15-07-2018

ಲಕ್ನೋದಲ್ಲಿ ನವಾಬ್‍ಗಳ ರಾಜ್ಯಭಾರವಿತ್ತು. ಒಬ್ಬ ನವಾಬ್‍ಗೆ ಹುಚ್ಚು ಅಥವಾ ಭಯ – ಇವೆರಡರಲ್ಲಿ ಒಂದರಿಂದಾಗಿ ಈ ಭೂಲ್‍ಭುಲೈಯ್ಯಾ ಎನ್ನುವ ಅರಮನೆ ಕಟ್ಟಿಸಿದ್ದಾನೆ. ಅದೊಂದು ಭದ್ರ ಕೋಟೆ. ಬಹುಶಃ ಮಾರ್ಗದರ್ಶಿ ಇಲ್ಲದಿದ್ದರೆ ಹೊರಬರಲು ಬಹಳ ಕಷ್ಟ ಎನ್ನಿಸದಿರದು.

ನಾನು ಶಂಕರ ಪ್ರಸನ್ನ ಮತ್ತು ಕೆಲವರು ಮಾತ್ರ ಈ ಕಟ್ಟಡಕ್ಕೆ ಬಂದ ನೆನಪು. ಅಲ್ಲಿನ ಒಬ್ಬ ಗೈಡ್ ಜೊತೆಗೆ ಒಳನಡೆದೆವು.

ಹೈದರಾಬಾದ್‍ನ ಗೋಲ್ಕೊಂಡಾ ಕೋಟೆ, ಬಿಜಾಪುರದ ಗೋಲ್‍ಗುಂಬಝ್‍ನಂತೆ ಇಲ್ಲಿ ಕೂಡ ಪಿಸುಗುಟ್ಟಿದರೆ ಕೇಳಿಸುವ ಕೆಲವು ಕೋಣೆಗಳಿದ್ದವು. ಎಲ್ಲೋ ಒಂದು ಕಡೆ ಬಂದು ನಿಂತರೆ,  ಆ ಅರಮನೆಯ ಮುಂದಿನ ಗೇಟು ಕಾಣಿಸುತ್ತದೆ. ಆದರೆ ನಾವು ಬಂದು ನಿಂತ ಜಾಗ ನೆಲಮಾಳಿಗೆ!

ಹೀಗೇ ಅಲ್ಲಿ ಇಲ್ಲಿ ಸುತ್ತಾಡಿ, ಈ ಕಟ್ಟಡವೆಂಬ ಅದ್ಭುತವನ್ನು ಮೆಚ್ಚಿ ಹೊರಬಂದೆವು. ಇದರ ಇಷ್ಟ ನನೆಷ್ಟಾಯಿತೆಂದರೆ 1987ರಲ್ಲಿ ಬಂದಾಗ ನನ್ನ ಕಿರ್ಲೋಸ್ಕರ್ ಕಂಪೆನಿಯ ಕಾನ್‍ಪುರ್ ಸಹೋದ್ಯೋಗಿ ಬ್ರಿಜ್‍ಮೋಹನ್ ಮೆಹ್ರೋತ್ರಾನನ್ನು ಇಲ್ಲಿಗೆ ಕರೆದೊಯ್ಯೆಂದಿದ್ದೆ. 

ಮತ್ತೆ 2011ರಲ್ಲಿ ಲಕ್ನೋಗೆ ಬಂದಾಗ ಇಲ್ಲಿನ ಟ್ಯಾಲಿ ಪಾರ್ಟ್‍ನರ್ ಮುಖೇಶ್ ಖನ್ನ ಅವರನ್ನು ಕೇಳಿ ಒಬ್ಬನೇ ಮತ್ತೆ ಭೂಲ್‍ಭುಲೈಯ್ಯಾಗೆ ಬಂದಿದ್ದೆ.

ಅಕ್ಷಯ್‍ಕುಮಾರನ ಸಿನಿಮಾ ಹೆಸರು ಕೂಡಾ ಇದೆ ಭೂಲ್‍ಭುಲೈಯ್ಯಾ ಎಂದು. ನಮ್ಮ ಕನ್ನಡದ ಆಪ್ತಮಿತ್ರ ಚಿತ್ರದ ಹಿಂದಿ ಅವತರಣಿಕೆ ಇದು.

ಅಲ್ಲಿಂದ ರಾತ್ರಿ ನಾವು ಚಂಡೀಗಢಕ್ಕೆ ಹೊರಟೆವು.

ಬೆಳಗ್ಗಿನ ಚುಮುಚುಮು ಚಳಿಯಲ್ಲಿ ಅಂಬಾಲಾ ಕಂಟೋನ್ಮೆಂಟ್ ಸ್ಟೇಷನ್ನಿನಲ್ಲಿ ಇಳಿದೆವು. 

ನಮ್ಮ ಸಹಪಾಠಿ ಭರತ್‍ಭೂಷಣ್ ಶರ್ಮಾ ನಮ್ಮನ್ನು ಕರೆದೊಯ್ಯಲು ಸ್ಟೇಷನ್ನಿಗೆ ಬಂದಿದ್ದ. ಅವನ ಮನೆ ಅಂಬಾಲಾದಲ್ಲಿತ್ತು.

ಬೆಳಗ್ಗೆ ಬೆಳಗ್ಗೆ ಯಾರದೋ ಮನೆಯಲ್ಲಿ (ಅವನು ಸಹಪಾಠಿಯೇ. ಆದರೂ ಸುಮಾರು ನಲವತ್ತು ಜನ ಹೋಗಿ ಅವರ ಮನೆಯಲ್ಲಿ ಇಳಿದುಕೊಳ್ಳುವುದೆಂದರೆ...) ಇಳಿದುಕೊಂಡು ಸ್ನಾನಾದಿಗಳನ್ನು ಮುಗಿಸಿದೆವು. ಅವರ ಮನೆಯಲ್ಲೇ ನಮಗೆ ತಿಂಡಿ.

ಅವರ ಆದರೋಪಚಾರಗಳಿಗೆ ಮಾರುಹೋಗದೇ ವಿಧಿಯಿರಲಿಲ್ಲ.

ಅವರ ಮನೆಯನ್ನು ಕಂಡು ನಮಗೆ ಆಶ್ಚರ್ಯವಾಯಿತು.

ಅದೊಂದು ಕನ್ನಡಿಯಂತೆ ಪ್ರತಿಬಿಂಬದ ಮನೆ. ಭರತ್ ಮತ್ತು ಅವನ ಅಣ್ಣನದು.

ಎಲ್ಲವೂ ಡಬ್ಬಲ್ ಡಬ್ಬಲ್. ಅಡಿಗೆ ಮನೆ ಕೂಡ.

ಏಕೆ ಹೀಗೆ ಎಂದು ಕುತೂಹಲದಿಂದ ಕೇಳಿದೆ.

ಉತ್ತರ ಕೇಳಿ ನಿಬ್ಬೆರಗಾದೆ.

ಈವತ್ತು ಅಣ್ಣ ತಮ್ಮಂದಿರು ಚೆನ್ನಾಗಿದ್ದಾರೆ. ಮುಂದೊಮ್ಮೆ ಅವರ ನಡುವೆ ಮನಸ್ತಾಪ ಬಂದರೆ, ಆ ಮನೆಯಲ್ಲಿ ಮಾಡಬೇಕಾದುದೆಲ್ಲಾ ಒಂದೇ ಕೆಲಸ. ಹಜಾರದ ನಟ್ಟನಡುವೆ ಒಂದು ಗೋಡೆ ಎಬ್ಬಿಸಿಬಿಡುವುದು. ಮನೆ ಎರಡು ಆಗಿಬಿಡುತ್ತದೆ. 

ನಿಜಕ್ಕೂ ಇದು ಒಳ್ಳೆಯ ಉಪಾಯ.

ನನ್ನ ಗೆಳೆಯನೊಬ್ಬ ತನ್ನ ತಮ್ಮನ ಮೇಲೆ ಪ್ರಾಣವನ್ನೇ ಇಟ್ಟಿದ್ದಾನೆ. ಅಣ್ಣನಿಗೆ ಮದುವೆ ಆದಾಗ ಅವನೊಂದಿಗೇ ಇದ್ದ ತಮ್ಮ. 

ತಮ್ಮನಿಗೆ ಮದುವೆ ನಿಶ್ಚಯವಾದಾಗ ಒಂದು ಸಲಹೆ ನೀಡಿದೆ.

“ನಿನಗೆ ಎಷ್ಟೇ ಪ್ರೀತಿಯಿದ್ದರೂ ಅವನಿಗೆ ಬೇರೆ ಮನೆ ಮಾಡಿಕೊಡು. ಬೇಕಾದರೆ ಅಕ್ಕಪಕ್ಕದ ಮನೆಯೋ, ಮಹಡಿಯ ಮೇಲೆಯೋ ಇರಲಿ. ಒಟ್ಟಿನಲ್ಲಿ ಪಕ್ಕದಲ್ಲಿರಲಿ. ಜೊತೆಯಲ್ಲಿ ಬೇಡ”

ಇತ್ತೀಚೆಗೆ ಅವನು ಸಂಪರ್ಕಿಸಿ, ‘ಒಳ್ಳೇ ಸಲಹೆ ನೀಡಿದೆ. ಈಗ ಓರಗಿತ್ತಿಯರಿಬ್ಬರೂ ಬಲು ಕ್ಲೋಸು. ತಿಂಡಿ ಊಟಗಳ ಎಕ್ಸ್‍ಛೇಂಜ್ ಕೂಡ ನಡೆದಿದೆ”

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102