ಯತಿ ಸ್ವಂತೀ -195
14-07-2018
ವಾರಾಣಸಿಯಿಂದ ನಾವು ಲಕ್ನೋಗೆ ಹೋಗಬೇಕಿತ್ತು. ಯಾವ ಟ್ರೈನೂ ಸಿಕ್ಕಿರಲಿಲ್ಲ. ಅಲ್ಲಿಗೆ ಹೋದಾಗ ನೋಡಿಕೊಳ್ಳೋಣ ಎಂಬ ಧೋರಣೆಯಿಂದ ವಾರಾಣಸಿ ಬಂದು ತಲುಪಿದ್ದೆವು.
ಅಲ್ಲಿ ಇಲ್ಲಿ ಓಡಾಡಿ ಒಂದು ಇಡೀ ಅನ್‍ರಿಜರ್ವ್ಡ್ ಕಂಪಾರ್ಟ್‍ಮೆಂಟನ್ನು 80 ರೂಪಾಯಿಗಳ ಲಂಚ ಕೊಟ್ಟು (ಅದು ಆಗ ಬಹಳ ಜಾಸ್ತಿ ಕಣ್ರೀ!) ಒಳಗೆ ಸೇರಿಕೊಂಡು ಎಲ್ಲ ಕಿಟಕಿ, ಬಾಗಿಲುಗಳನ್ನು ಬಡಿದುಕೊಂಡೆವು. ಅಲ್ಲಲ್ಲಿ ಸ್ಟೇಷನ್‍ಗಳಲ್ಲಿ ನಿಂತಾಗ ಜನ ಕಿಟಕಿ, ಬಾಗಿಲುಗಳ ಮೇಲೆ ದಬಾ ದಬಾ ಬಡಿಯುತ್ತಿದ್ದರು. ನಮ್ಮ ಕಾಲೇಜಿನ ಬ್ಯಾನರ್ ಕಟ್ಟಿದ್ದೆವು. ಅದು ಮತ್ತೊಂದು ಕಡೆ ಇತ್ತು. ಈ ಕಡೆ ಸ್ಟೇಷನ್‍ಗಳಲ್ಲೆಲ್ಲಾ ಗಲಾಟೆ ಮಾಡಿದರು.
ಹಸಿವೆ ಶುರುವಾಯಿತು. ಅರ್ಧ ಕಿಟಕಿ ತೆರೆದು ಯಾವುದೋ ಒಂದು ಸ್ಟೇಷನ್ನಿನಲ್ಲಿ ಒಣಕಲು ರೋಟಿ, ಆಲೂ ಸಬ್ಜಿ ಕೊಂಡುಕೊಂಡೆ. ಬಹುಶಃ ಎಲ್ಲರೂ ಅದನ್ನೇ ಕೊಂಡಿರಬೇಕು. ನೆನಪಿಲ್ಲ.
ತಿಂದಾಯಿತು. ನನಗೆ ಬಿಕ್ಕಳಿಕೆ ಶುರುವಾಯಿತು. ಒಂದು ತೊಟ್ಟು ಕೂಡ ನೀರಿಲ್ಲ ಕುಡಿಯೋಕ್ಕೆ. ಆಗೆಲ್ಲಾ ನಮ್ಮ ಹಿರಿಯರು ರೈಲುಚೊಂಬು -ಒಂದು ವಿಶಿಷ್ಟ ಆಕಾರದ ಚೊಂಬು, ಅದಕ್ಕೊಂದು ಸ್ಕ್ರೂ ಮುಚ್ಚಳ, ಆ ಮುಚ್ಚಳಕ್ಕೊಂದು ಹಿಡಿ- ಒಯ್ಯುತ್ತಿದ್ದರು. ಅದರ ತುಂಬಾ ನೀರಿರುತ್ತಿತ್ತು.
ನನಗೆ ಬಿಕ್ಕಳಿಕೆ ನಿಲ್ಲಲಿಲ್ಲ. ನೇರ ಟಾಯ್ಲೆಟ್‍ಗೆ ನಡೆದೆ. ಅಲ್ಲಿನ ಸಿಂಕ್ ನಲ್ಲಿಯ ನೀರನ್ನು ಗಟಗಟನೆ ಕುಡಿದೆ. ನನ್ನ ನೀರಡಿಕೆ ಶಮನವಾಗಿ ಬಿಕ್ಕಳಿಕೆ ನಿಂತಿತು. ಎಲ್ಲರೂ ನನ್ನನ್ನೇ ಗಮನಿಸುತ್ತಿದ್ದರು. ನಾನೇನಾಗುವೆನೋ ಎಂದಿರಬಹುದು!
ನನಗೆ ಗೊತ್ತಿದ್ದ ವಿಷಯವೆಂದರೆ ಒಳ್ಳೆಯ ನೀರನ್ನೇ ರೈಲಿನ ಮೇಲ್ಭಾಗದ ಒಂದು ರಂಧ್ರದಿಂದ ಪ್ರತಿ ಭೋಗಿಗೂ ತುಂಬುವರೆಂದು. ಅದಕ್ಕೇ ಧೈರ್ಯವಾಗಿ ಕುಡಿದೆ.
ನನಗೇನೂ ಆಗಲಿಲ್ಲ ಎಂದು ಅರಿವಾದೊಡನೆ ಎಲ್ಲರೂ ಆ ನೀರು ಕುಡಿದಿದ್ದು ನೆನೆಸಿಕೊಂಡರೆ ನಗು ಬರುತ್ತದೆ!
ಲಕ್ನೋ ನಗರವನ್ನು ಬೆಳಗ್ಗೆ ತಲುಪಿದೆವು.
ಹೊಟೇಲ್ ತಲುಪಿ, ಸಿದ್ಧವಾಗಿ ತಿಂಡಿ ತಿಂದು ಸುಮ್ಮನೆ ನಗರವನ್ನು ಸುತ್ತಾಡಿದ ನೆನಪು. ಮಧ್ಯಾಹ್ನ ಒಂದು ವಿಶಿಷ್ಟ ಕ್ಯಾಂಟೀನಿನಲ್ಲಿ ಊಟ. ಅಡಿಗೆ ಹೊರಗಡೆ ಮಾಡಿ ಒಳಗೆ ಕೂತ ನಮಗೆ ಬಡಿಸುತ್ತಿದ್ದ. ಅಡಿಗೆ ಮಾಡುವ ಜಾಗದ ಕೆಳಗೆ ಆ ನಗರದ ಮೋರಿ, ಅದರಲ್ಲಿ ಗಲೀಜು ನೀರು. ರಾಮ ರಾಮಾ!
ಮೊಸರು ಅಷ್ಟು ಗಟ್ಟಿಯಾಗಿದ್ದುದನ್ನು ಅಲ್ಲಿಯೇ ಕಂಡದ್ದು ನಾನು. ಅಲ್ಲಿನ ಎಮ್ಮೆಗಳೂ ಅಷ್ಟೇ. ನಮ್ಮ ಇನ್ನೋವಾ ಕಾರಿನಂತೆ ಎತ್ತರವಿದ್ದವು.
ಈ ಟೂರ್‍ನಲ್ಲಿ ನಾನು ಕಲಿತದ್ದು ಮತ್ತೊಂದೆಂದರೆ ಲಸ್ಸಿ ಕುಡಿಯುವುದು.
ಯ್ಯಾ... ಮೊಸರಿಗೆ ಸಕ್ಕರೆಯಾ... ವ್ಯಾ... ಎನ್ನುತ್ತಿದ್ದವನು ಒಮ್ಮೆ ಮದ್ರಾಸಿನಲ್ಲಿ ಕುಡಿದೆ. ಇಷ್ಟವಾಯಿತು. ನಂತರ ಕಲ್ಕತ್ತ, ವಾರಾಣಸಿಯಲ್ಲಿ ಕೂಡ ಕುಡಿದು ಲಕ್ನೋದಲ್ಲಿ ಕೂಡ ರುಚಿ ನೋಡಿದೆ.
ಬಾಬ್ಬಿ ಸಿನಿಮಾದ ಹಾಡು ನೆನಪಿದೆಯಾ? ತೇರೆ ನೈನೋಂಕೆ ಭೂಲ್‍ಭುಲೈಯ್ಯಾ ಮೇ ಬಾಬಿ ಖೋಜಾಯೆ ಎನ್ನುತ್ತಾಳೆ ಡಿಂಪಲ್ ಕಪಾಡಿಯಾ ಹಂ ತುಂ ಇಕ್ ಕಮರೇಮೆ ಬಂದ್ ಹೋ ಹಾಡಿನಲ್ಲಿ.
ಈ ಭೂಲ್‍ಭುಲೈಯ್ಯಾ ಇರುವುದು ಲಕ್ನೋದಲ್ಲೇ.
Comments
Post a Comment