ಯತಿ ಸ್ವಂತೀ -194



13-07-2018

ಕಾಶಿ, ವಾರಣಾಸಿ (ವಾರಾಣಸಿ ಎಂದು ಹೇಳಬೇಕೆಂದು ರೈಲ್ವೇ ಸ್ಟೇಷನ್ನಿನ ಹಿಂದಿ ಬೋರ್ಡು ಹೇಳಿತು), ಬನಾರಸ್... ನಮ್ಮ ಹಿಂದೂ ಪುರಾಣಗಳ ಕಾಲದಿಂದ ಕಥೆಗಳಲ್ಲಿ ನಮೂದಿಸಲ್ಪಟ್ಟ ಹೆಸರು.

ವಿಶ್ವನಾಥನೂ, ವಿಶಾಲಾಕ್ಷಿಯೂ ಇಲ್ಲಿ ಪ್ರತಿಷ್ಠಾಪಿತರಾಗದ್ದಾರೆ. ಪವಿತ್ರ ಗಂಗಾ ನದಿ ಇವರ ಪಾದವನ್ನು ತೊಳೆಯುತ್ತಾಳೆ.

ಹಿಂದಿನ ಯಾವುದೇ ನೀತಿ ಕಥೆ ತೆಗೆದುಕೊಂಡರೂ, ‘ಒಂದಾನೊಂದು ಕಾಲದಲ್ಲಿ ಕಾಶಿ ಪಟ್ಟಣದಲ್ಲಿ ವರ್ತಕನೊಬ್ಬನಿದ್ದ ಎಂತಲೋ, ರಾಜನಿದ್ದ ಎಂದೋ’ ಆರಂಭವಾಗುತ್ತದೆ.

ವಿಪರೀತ ಗುಜುಗುಜು ಇದ್ದ ಊರು. ಇಡೀ ಪ್ರಪಂಚದಿಂದ ತಮ್ಮ ಪಾಪಗಳನ್ನು ತೊಳೆದುಕೊಳ್ಳಲು, ಆ ಪಾಪಗಳನ್ನು ಗಂಗೆಯಲ್ಲಿ ಬಿಟ್ಟುಬಿಡಲು ಭಕ್ತಾದಿಗಳು ಇಡೀ ಪ್ರಪಂಚದಿಂದ ಬರುತ್ತಾರೆ.

‘ಅಯ್ಯೋ, ನೀವು ನನ್ನನ್ನ ನೋಡಿಕೊಳ್ಳೋದು ನೋಡಿದ್ರೆ ನಂಗೆ ದುಃಖ ಆಗ್ತಿದೆ. ನನ್ನನ್ನ ಕಾಶೀಗೋ ರಾಮೇಶ್ವರಕ್ಕೋ ಕಳಿಸಿಬಿಡು. ಹಾಯಾಗಿ ಪ್ರಾಣ ಬಿಡ್ತೀನಿ’ ಎನ್ನೋ ಸಂಭಾಷಣೆ ಅನೇಕಾನೇಕ ಚಿತ್ರಗಳಲ್ಲಿ, ಕಥೆಗಳಲ್ಲಿ ನೋಡಿದ್ದೇವೆ, ಓದಿದ್ದೇವೆ. ಅಂತಹ ಪುಣ್ಯಭೂಮಿ ಇದು!

ಇಲ್ಲಿ ಸತ್ತರೆ ಕೈಲಾಸ ಎನ್ನುವ ನಂಬಿಕೆ ಭಕ್ತಾದಿಗಳಲ್ಲಿ ಇದೆ.

ನಾವು ರೈಲಿಳಿದು ಅಲ್ಲಿನ ಒಂದು ಲಾಡ್ಜ್‍ಗೆ ತೆರಳಿದೆವು.

ಸ್ನಾನಾದಿಗಳನ್ನು ಮುಗಿಸಿ, ತಿಂಡಿ ತಿಂದು ಕಾಶಿಯ ಮುಖ್ಯ ಆಕರ್ಷಣೆಗಳಾದ ಗಂಗಾ ತಟ ಮತ್ತು ವಿಶ್ವನಾಥನ ಮಂದಿರಗಳತ್ತ ಹೊರಟೆವು.

ಗಂಗಾ ನದಿ... ಸಿಕ್ಕಾಪಟ್ಟೆ ಕೊಳಕಾಗಿತ್ತು. ನಾನು ಹೇಳುತ್ತಿರುವುದು 1979ರ ವಿಷಯ. ಈಗ ಕ್ಲೀನ್ ಗಂಗಾ ಪ್ರಾಜೆಕ್ಟ್‍ನಲ್ಲಿ ಒಂದಿಷ್ಟು ಸ್ವಚ್ಛ ಆಗಿರಬಹುದು. 

ನದಿಯ ದಡದಲ್ಲಿ ದೋಣಿಯೊಂದನ್ನು ಬಾಡಿಗೆಗೆ ಪಡೆದು ನದಿಯ ಒಳಭಾಗಕ್ಕೆ ಸಾಗಿದೆವು. ದೋಣಿಯಾತ ಎಲ್ಲಿ ಆಳ ಹೆಚ್ಚಿಲ್ಲ ಎಂದನೋ ಅಲ್ಲಿ ನೀರಲ್ಲಿ ಇಳಿದು ಪಾಪಗಳನ್ನು ಗಂಗೆಯಲ್ಲಿ ತ್ಯಜಿಸಿ ಪವಿತ್ರವಾದೆವು.

ಹೆಣ್ಮಕ್ಕಳು ಕುಳಿತ ಜಾಗದಲ್ಲಿ ಬಾಗಿ ನೀರು ತೆಗೆದುಕೊಂಡು ತಮ್ಮ ಶಿರಗಳ ಮೇಲೆ ಪ್ರೋಕ್ಷಿಸಿಕೊಂಡರು.

ನಂತರ ಮಾಡಿದ್ದು ವಿಶ್ವನಾಥನ ದರ್ಶನ.

ಸತ್ಯಂ ಶಿವಂ ಸುಂದರಂ ಎನ್ನುವ ಚಿತ್ರದ ಶೀರ್ಷಿಕೆಯ ಗಾನದಲ್ಲಿ ‘ರಾಮಾವಧ್ ಮೇ, ಕಾಶೀಮೇ ಶಿವ, ಕಾನ್ಹಾ ಬೃಂದಾವನಮೇ’ ಎನ್ನುವ ಸಾಲಿದೆ. ವಿಶ್ವನಾಥ ಮತ್ತು ಕೃಷ್ಣನ ಗುಡಿಗಳಿಗೆ ಹೋಗಿದ್ದೇನೆ.

ಅದರ ವೈಶಿಷ್ಟ್ಯವೇನೆಂದು ಹೋದವರಿಗೆ ತಿಳಿದಿದೆ. ಮಸೀದಿಯೊಂದರ ಒಳಗೆ, ಅತಿ ಪಕ್ಕದಲ್ಲಿ ಇವೆ ಈ ದೇವಾಲಯಗಳು. ಬಹುಶಃ ಮೊಘಲರ ಕಾಲದಲ್ಲಿ ಈ ಕಟ್ಟಡಗಳು ಕಟ್ಟಲ್ಪಟ್ಟಿರಬಹುದು.

ಶಿವನ ಲಿಂಗವು ದ್ವಾದಶ ಲಿಂಗಗಳಲ್ಲಿ ಒಂದು. ಅದನ್ನು ಮುಟ್ಟಿ ನಮಸ್ಕರಿಸಬಹುದು ಎಂದು ಬಹಳ ಖುಷಿಯಾಯಿತು. ಬೇರೆಲ್ಲೂ ನಾನು ಇದಕ್ಕೆ ಮೊದಲು ದೇವರನ್ನು ಮುಟ್ಟಿರಲಿಲ್ಲ.

ಹಣೆಗೆ  ಅಕ್ಕಿ ಕಾಳುಗಳು ಇದ್ದ ಒದ್ದೆ ಕುಂಕುಮವನ್ನು ಮೆತ್ತಿದ ಅಲ್ಲಿನ ಪೂಜಾರಿ. ಹಾಗೆಯೇ ಅವನು ಎಸೆದ ಚೆಂಡುಹೂವಿನ ಮಾಲೆ ನನ್ನ ಕುತ್ತಿಗೆಯನ್ನಲಂಕರಿಸಿತು. ಆ ಪಟ ಕೂಡ ಇದೆ ನನ್ನಲ್ಲಿ ಆ ಹೂ ಮಾಲೆ ಧರಿಸಿದ ಚಿತ್ರ!

ಒಂದು ರೀತಿಯ ಧನ್ಯತಾಭಾವ ಆವರಿಸಿತ್ತು ನನ್ನನ್ನು.

ಓಂ ನಮಃ ಶಿವಾಯ!

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102