ಯತಿ ಸ್ವಂತೀ -193



12-07-2018

ಮದ್ರಾಸಿನ ಬಿಸಿಯನ್ನು ಬಿಟ್ಟು ಬೆಳಗ್ಗೆ 8ಕ್ಕೆ ಕೋರಮಂಡಲ್ ಎಕ್ಸ್‍ಪ್ರೆಸ್ ಹಿಡಿದು ಹೌರಾಗೆ ಹೊರಟೆವು.

ಒರಿಸ್ಸಾ (ಈಗಿನ ಉದಿಶಾ) ಮೂಲಕ ರೈಲು ಹೌರಾ ತಲುಪಿತು. ಎರಡು ದಿನಗಳ ಪ್ರಯಾಣವೇ ಇರಬೇಕು. ಜನರಲ್ ನಾಲೆಡ್ಜ್ ಪುಸ್ತಕದಲ್ಲಿ ಅತ್ಯಂತ ಉದ್ದದ ಪ್ಲಾಟ್‍ಫಾರ್ಮ್ ಖರಗ್‍ಪುರ ಸ್ಟೇಷನ್‍ನದು ಎಂದು ಓದಿದ್ದೆವು. ಬೆಂಗಾಲಿ ಭಾಷೆ (ಈಗ ಬಾಂಗ್ಲಾ ಭಾಷೆ)ಯಲ್ಲಿ ಖಡಗ್‍ಪೂಡ್ ಆಗಿಬಿಡುತ್ತದೆ ಈ ಖರಗ್‍ಪುರ್!

ಹೌವ್ಡಾ ... ಹೌದು ... ಹೌರಾ ಅಲ್ಲಿನ ಭಾಷೆಯಲ್ಲಿ ಅದೇ, ಸ್ಟೇಷನ್ನಿನಲ್ಲಿ ಇಳಿದೊಡನೆ ತಬ್ಬಿಬ್ಬಾದೆವು. ಅಬ್ಬಾ... ಅದೆಷ್ಟು ಮಾರ್ಗಗಳು ಹೊರಹೋಗಲು. ಎಂಟು ದಾರಿಗಳಿದ್ದುವೆಂದು ನೆನಪು.

ಕೊನೆಗೂ ನಮ್ಮ ಹೊಟೇಲ್ ತಲುಪಿ ರೆಸ್ಟ್ ತಗೊಂಡೆವು.

ನಂತರ ಮೊದಲು ನೋಡಲು ಹೋಗಿದ್ದು ಸಮುದ್ರದ ಮೇಲೆ ಕಟ್ಟಿದ್ದ ಸೇತುವೆ. ಬಂಗಾಳ ಕೊಲ್ಲಿಯ ಮೇಲೆ ಕಟ್ಟಿದ್ದ ರಸ್ತೆ ಸೇತುವೆ ಯಾವುದಾದರೂ ದೋಣಿ, ಹಡಗು ಬಂದಾಗ ಎರಡಾಗಿ ಸೀಳಿ ವಸುದೇವನಿಗೆ ಯಮುನೆಯು ಜಾಗ ಬಿಟ್ಟಂತೆ ಬಿಡುತ್ತದೆ. ಇದೊಂದು ವಿಶೇಷ. ಹಾಗೆ ನೋಡಿದರೆ ಇದು ನಾನು ನೋಡಿದ ಎರಡನೆಯ ಸೇತುವೆ.

ರಾಮೇಶ್ವರಂನ ಪಾಂಬನ್ ಸೇತುವೆ ಕೂಡ ಹಡಗು ಬಂದಾಗ ಸೇತುವೆ ಮೇಲೆದ್ದು ಹಡಗು ಹೋಗಲು ಜಾಗ ಮಾಡಿಕೊಡುತ್ತದೆ.

ನಂತರ ಅಲ್ಲಿಂದ ಪ್ಲಾನೆಟೇರಿಯಂಗೆ ಹೋದೆವು. ನಮಗೆ ಸಮಯ ಇರದಿದ್ದುದರಿಂದ ಬಂಗ್ಲಾ ಭಾಷೆಯ ಕಾಮೆಂಟರಿಯನ್ನೇ ಕೇಳಿದೆವು. ನಂತರ ಏನೂ ಕೇಳಿಸಲಿಲ್ಲ. ಏನೂ ಕಾಣಿಸಲಿಲ್ಲ. ಹೋಗಿದ್ದು ತಾರಾಲಯದ ಒಳಗಿನ ನಕ್ಷತ್ರಗಳ ದರುಶನಕ್ಕೆ. ಆದರೆ ಮೂರು ದಿನಗಳಿಂದ ಸರಿಯಾಗಿ ನಿದ್ರಿಸದೇ ಆ ಬಂಗ್ಲಾ ಲಲನಾಮಣಿಯ ಜೋಗುಳದಂತಹ ಮಾತು ಕೇಳುತ್ತಾ ಎಲ್ಲರೂ ನಿದ್ರಿಸಿದ್ದೆವು. ಮತ್ತೆ ದೀಪ ಬಂದಾಗಲೇ ನಮಗೆ ಎಚ್ಚರ. ಬಹಳ ವರ್ಷಗಳ ನಂತರ ನನ್ನ ಮಗನೊಂದಿಗೆ ಬೆಂಗಳೂರಿನ ತಾರಾಲಯಕ್ಕೆ ಹೋದಾಗ ಅಂತರಿಕ್ಷದ ಬಗೆಗೆ ವಿಷಯವನ್ನು ಅರಿತೆ!

ಎಸ್ಪ್ಲನೇಡ್ ಎನ್ನುವ ಮಾಲ್‍ಗೆ ಹೋದ ನೆನಪು. 

ಅಜ್ಜ ಅಜ್ಜಿಯರೂ ಸುಲಭವಾಗಿ ಜಂಪ್ ಮಾಡಿ ಟ್ರಾಮ್ ಹತ್ತುತ್ತಿದ್ದರು. ನಾವೂ ಅದನ್ನೇ ಮಾಡಿದೆವು. ಟಾಲಿಗಂಜ್‍ನಿಂದ ಬಾಲಿಗಂಜ್‍ಗೆ ಕೇವಲ ಹದಿನೈದು ಪೈಸೆಗಳು!

ಆಗ ತಾನೇ ಇಡೀ ಕೊಲ್ಕತ್ತಾದಲ್ಲಿ ಮೆಟ್ರೋಗಾಗಿ ಗುಂಡಿಗಳನ್ನು ತೋಡುತ್ತಿದ್ದುದು ಕಂಡುಬಂದಿತು.

ಅದೆಷ್ಟು ಜನ ಅದೆಷ್ಟು ಜನ. ಎಂತಹ ಟ್ರಾಫಿಕ್ ಜ್ಯಾಮ್. ಈಗಿನ ಬೆಂಗಳೂರಿನದಕ್ಕೆ ಹೋಲಿಸಿದರೆ ಏನೂ ಇಲ್ಲ ಬಿಡಿ. ನಾಲ್ಕೂವರೆಗೆಲ್ಲಾ ಕತ್ತಲೆಯಾಯಿತು.

ಆ ರಾತ್ರಿ ನಮಗೆ ರೋಟಿ, ಲಸ್ಸಿ, ಶೋಂದೇಶ್, ಮಿಷ್ಟಿ ದೋಹಿ ಎಲ್ಲವೂ ಬೇಸರ ತಂದಿದ್ದವು. ಸೌತಿಂಡಿಯನ್ ಹೊಟೇಲ್ ಹುಡುಕುತ್ತಾ ಹೌರಾದಲ್ಲಿ ಅಲೆದೆವು.

ಕೊನೆಗೂ ಒಂದು ಹೊಟೇಲಿನಲ್ಲಿ ಸುಬ್ರಹ್ಮಣ್ಯನ ಪಟವಿತ್ತು. ಆಹಾ... ಎಂದು ನುಗ್ಗಿ ವಡೆ, ಸಾಂಬಾರ್, ಇಡ್ಲಿ, ಅನ್ನ ತಿಂದು ಜೀವನವನ್ನು ಸಾರ್ಥಕಗೊಳಿಸಿಕೊಂಡೆವು.

ಅಲ್ಲಿಂದ ಮತ್ತೆ ಹೌರಾ ಸ್ಟೇಷನ್ನಿಗೆ ಬಂದೆವು. ಕಾರುಗಳೂ ಒಳಗೆ ಬರಬಹುದಾದ ಡ್ರೈವಿನ್ ಸ್ಟೇಷನ್ ಅದು!

ಮುಂದಿನ ಊರು ವಾರಾಣಸಿ!



Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102